ಕೊರಟಗೆರೆ: ತಾಲ್ಲೂಕಿನ ಕ್ಯಾಮೇನಹಳ್ಳಿ ದನಗಳ ಜಾತ್ರೆ ಇದೀಗ ಜಾನುವಾರುಗಳಿಂದ ಮೈದುಂಬಿಕೊಂಡಿದೆ. ಆದರೆ ಉತ್ತರ ಕರ್ನಾಟಕದ ರೈತರು ಈವರೆಗೆ ಜಾತ್ರೆಗೆ ಬಾರದಿರುವ ಕಾರಣ ಜಾತ್ರೆ ಇನ್ನೂ ಕಳೆಕಟ್ಟಿಲ್ಲ.
ಗೌರಿಬಿದನೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದಿದ್ದಾರೆ. ಈ ಬಾರಿ ಜಾತ್ರೆಯಲ್ಲಿ ದೊಡ್ಡ ದುಡ್ಡಿನ ದನಗಳಿಗೆ ಬೇಡಿಕೆ ಕಡಿಮೆಯಾಗಿದೆ. ₹ 80 ಸಾವಿರ ಮೌಲ್ಯದೊಳಗಿನ ರಾಸುಗಳ ವಹಿವಾಟು ಚೆನ್ನಾಗಿ ನಡೆಯುತ್ತಿದೆ.
₹ 10 ಸಾವಿರದಿಂದ 7 ಲಕ್ಷ ಮೌಲ್ಯದ ದನಗಳು ಜಾತ್ರೆಯಲ್ಲಿವೆ. ಬೇಸಾಯದ ಕೆಲಸಕ್ಕೆ ಬರುವ ಉತ್ತಮ ಮೈಕಟ್ಟಿನ ದನಗಳು, ಬೆಳೆಸಿ ಜೋಡಿ ಮಾಡಿ ಮಾರಬಹುದಾದ ಎಳೆ ಕರುಗಳಿಗೆ ಹೆಚ್ಚು ಬೇಡಿಕೆ ಕೇಳಿ ಬಂದಿದೆ. ಉತ್ತರ ಕರ್ನಾಟಕ ಜಿಲ್ಲೆಗಳ ರೈತರು ಕಾಣಿಸಿಕೊಂಡ ನಂತರ ವ್ಯಾಪಾರ ಚುರುಕಾಗುತ್ತದೆ ಎನ್ನುವುದು ನಿರೀಕ್ಷೆ.
ತಾಲ್ಲೂಕು ಆಡಳಿತ ವಿಫಲ: ಜಾತ್ರೆಗೆ ಸೌಲಭ್ಯ ಒದಗಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಹಿಂದೆಂದೂ ಕಾಣದಷ್ಟು ಅವ್ಯವಸ್ಥೆ ಜಾತ್ರೆಯಲ್ಲಿದೆ. ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಪ್ರತಿ ವರ್ಷ ಜಾತ್ರೆಯಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿತ್ತು.
ಆದರೆ ಈ ಬಾರಿ ವಿದ್ಯುತ್ ದೀಪಗಳನ್ನು ಹಾಕಿಲ್ಲ. ಪ್ರತೀ ವರ್ಷ ಸ್ಥಳೀಯ ಬೋರ್‌ವೆಲ್ ಹೊಂದಿದವರನ್ನು ಜಾತ್ರೆಗೂ ಮುನ್ನ ಕರೆಸಿ, ಜಾತ್ರೆಗೆ ಸಾಕಾಗುವಷ್ಟು ನೀರು ಒದಗಿಸಲು ಮನವೊಲಿಸಲಾಗುತ್ತಿತ್ತು. ಆದರೆ ಈ ಬಾರಿ ಅಂಥ ಪ್ರಯತ್ನಗಳು ನಡೆಯಲೇ ಇಲ್ಲ ಎಂದು ರೈತರಾದ ಕಿರಣ್‌ಕುಮಾರ್ ಆರೋಪ ಮಾಡಿದರು.
ಕೈ ಬಿಡದ ಉದ್ಯಮ: ರಾಸುಗಳನ್ನು ಮೇಯಿಸಿ ಮಾರುವುದನ್ನೇ ಅನೇಕರು ಹವ್ಯಾಸವಾಗಿಸಿಕೊಂಡಿದ್ದಾರೆ. ಇದು ಪೂರಕ ಆದಾಯ ತಂದುಕೊಡುವ ಆರ್ಥಿಕ ಚಟುವಟಿಕೆಯೂ ಹೌದು.
‘ನಾನು ಚಿಕ್ಕಂದಿನಿಂದ ಇದೇ ಕಸುಬು ಮಾಡಿಕೊಂಡು ಬಂದಿದ್ದೇನೆ. ಒಳ್ಳೆಯ ದನಗಳನ್ನು ಆರಿಸಿ ತಂದು, ಮನೆಯಲ್ಲಿ ಕೈಮೇವು ಕೊಟ್ಟು ಬೆಳೆಸುತ್ತೇನೆ. ನಮ್ಮ ಮನೆ ಬೆಳಗುವ ವ್ಯವಹಾರ ಇದು’ ಎಂದು ಕಲ್ಲುಗುಟ್ಟರಹಳ್ಳಿ ಗ್ರಾಮದ ಸಣ್ಣರಂಗಪ್ಪ ಹೇಳಿದರು. ಜಾತ್ರೆಗೆ ಅವರು ₹ 7 ಲಕ್ಷ ಮೌಲ್ಯದ ಜೋಡೆತ್ತು ತಂದಿದ್ದರು. ಅದು ಈ ಬಾರಿ ಜಾತ್ರೆಯಲ್ಲಿರುವ ಅತಿಹೆಚ್ಚು ಮೌಲ್ಯದ ಎತ್ತಿನ ಜೋಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.