ADVERTISEMENT

ಕಣ್ಣೀರ ಹನಿಗಳು ಚೆಲ್ಲಾಡುತ್ತಾ...

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 12:31 IST
Last Updated 14 ಡಿಸೆಂಬರ್ 2012, 12:31 IST

ತುಮಕೂರು: `ಹೊಲೆ-ಮಾದಿಗರು ಯಾವಾಗ್ಲು ಸಿಗಲ್ಲ, ಈಗ ಸಿಕ್ಕೋರೆ ಬಡೀರಿ' ಎನ್ನುತ್ತಾ ಲಾಠಿಗಳಲ್ಲಿ ದಬ, ದಬ ಏರುತ್ತಿದ್ದರೆ ಪ್ರಾಣವೇ ಹೋಗುತ್ತಿತ್ತು. ಸಾಕಷ್ಟು ಹೆಂಗಸರ ಬಟ್ಟೆಗಳೆಲ್ಲ ಕಳಚಿ ಬಿದ್ದವು... ನಾವು ಬದುಕಿ ಬಂದಿದ್ದೇ ಹೆಚ್ಚು... ಎನ್ನುತ್ತಾ ಅಂಗಿ ತೆಗೆದ ಬೇವಿನಹಳ್ಳಿ ಚನ್ನಬಸವಯ್ಯನ ಮಾತು ಮುಗಿದೇ ಇರಲಿಲ್ಲ... ಅಲ್ಲೆಲ್ಲಾ ಕಣ್ಣೀರ ಹನಿಗಳು ಚೆಲ್ಲಾಡಿದವು.

ಒಳ ಮೀಸಲಾತಿಗಾಗಿ ಆಗ್ರಹಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ವೇಳೆ ಪೊಲೀಸರ ಲಾಠಿಗೆ ಮೈಯೊಡ್ಡಿದ ಅನೇಕ ದಲಿತ ಮುಖಂಡರು ಗುರುವಾರ ನಗರದಲ್ಲಿ ನಡೆದ ಸಭೆಯಲ್ಲಿ ಅಂದಿನ ಘಟನೆ ಹೇಳುತ್ತಿದ್ದರೆ ಕುಳಿತಿದ್ದವರ ಕಣ್ಣುಗಳು ತೇವವಾದವು.

ಶಾಂತಿಯುತ ಪ್ರತಿಭಟನೆ ನಮ್ಮ ಉದ್ದೇಶವಾಗಿತ್ತು. ಮಧ್ಯಾಹ್ನ ಮೂರಾದರೂ ಮುಖ್ಯಮಂತ್ರಿ ಬರಲಿಲ್ಲ. ಕನಿಷ್ಠ ಪಕ್ಷ ಸಚಿವರನ್ನಾದರೂ ಈಚೆ ಕರೆಯಿಸಿ ಎಂದು ಜಿಲ್ಲಾಧಿಕಾರಿಯನ್ನು ಬೇಡಿದರೂ ಫಲ ನೀಡಲಿಲ್ಲ. ಮೇಲೆ ಉರಿ ಬಿಸಿಲಿನ ಝಳ. ತಳ್ಳಾಟ ಆರಂಭವಾಯಿತು. ಆಗ ಬ್ಯಾರಿಕೇಡ್ ತಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಲೆಗೆ ಪೆಟ್ಟಾಗಿದ್ದಷ್ಟೇ ಗೊತ್ತಾಗಿದ್ದು. ಆ ನಂತರ ಏನಿದ್ದರೂ ಪೊಲೀಸರ ಆರ್ಭಟ, ಲಾಠಿಗಳ ನರ್ತನ ಎಂದು ಚನ್ನಬಸವಯ್ಯ ಹೇಳಿದರು.

ದಲಿತರ ಮೇಲಿದ್ದ ಎಲ್ಲ ಕೋಪವನ್ನೂ ಪೊಲೀಸರು ತೀರಿಸಿಕೊಂಡಂತೆ ಕಾಣುತ್ತಿತ್ತು. ತಪ್ಪಾಯಿತು ಕಾಲಿಗೆ ಬೀಳುತ್ತೇವೆ ಬಿಟ್ಟುಬಿಡಿ ಎಂದರೂ ಕೇಳಲಿಲ್ಲ... ಒಬ್ಬರೊಬ್ಬರನ್ನು ಹುಡುಕಿ ಹುಡುಕಿ ಹೊಡೆದರು ಎಂದರು.

ಏಳೆಂಟು ಪೊಲೀಸರು ಸುತ್ತುವರಿದು ಬಡಿದರು. ಕಾರಿನ ಮೇಲೆ ಬಿದ್ದವನನ್ನೂ ಬಿಡಲಿಲ್ಲ ಎಂದು ಮೈ ಮೇಲೆ ಇನ್ನು ಮಾಸದೇ ಇದ್ದ ಬಾಸುಂಡೆಗಳನ್ನು ತೋರಿದರು. ಇತಿಹಾಸದಲ್ಲಿ ಯಾವುದೇ ಸರ್ಕಾರ ಕೂಡ ಹೊಲೆ ಮಾದಿಗರ ಮೇಲೆ ಈಗೆ ಲಾಠಿ ಬೀಸಿರಲಿಲ್ಲ ಎಂದು ಘಟನೆಯನ್ನು ವಿವರಿಸಿದರು.

ಅದೊಂದು ಅಮಾನವೀಯ ದೃಶ್ಯ. ಅದು ಕರುಳು ಹಿಂಡುವಂತೆ ಇತ್ತು. ಕಿಲೋ ಮೀಟರ್ ದೂರದವರೆಗೂ ಓಡಾಡಿಸಿ ಬಡಿದರು ಎಂದು ಮಾದಿಗ ದಂಡೋರದ ಲಕ್ಷ್ಮೀದೇವಮ್ಮ ಹೇಳಿದರು.

ಪ್ರತಿಭಟನಾಕಾರರ ಸುತ್ತಲೂ ಬ್ಯಾರಿಕೇಡ್ ಹಾಕಿದ ಪೊಲೀಸರು ಮನಬಂದಂತೆ ಥಳಿಸಿದರು. ಅದೊಂದು ರಕ್ತದ ಓಕುಳಿಯಂತೆ ಇತ್ತು. 150 ಪ್ರತಿಭಟನಾಕಾರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಪೊಲೀಸರು ಕೂಡ ಕಲ್ಲೆಸೆದರು. ಮಹಿಳೆಯರ ಪಾಡಂತೂ ಹೇಳತೀರದಾಗಿತ್ತು ಎಂದರು.

ಸಭೆಯಲ್ಲಿದ್ದ ಎಲ್ಲ ಮುಖಂಡರು ಪೊಲೀಸರ ದೌರ್ಜನ್ಯ ಖಂಡಿಸಿದರು. ಮೀಸಲಾತಿ ಹೋರಾಟ ಮುಂದುವರೆಸುವ ನಿರ್ಧಾರ ಕೈಗೊಂಡರು. ಡಿ. 23ರಂದು ತುಮಕೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಉತ್ತರ ಕೊಡುವ ನಿರ್ಧಾರ ಕೈಗೊಂಡರು. ಪಿಯುಸಿಎಲ್ ಜಿಲ್ಲಾ ಘಟಕದ ಅಧ್ಯಕ್ಷ ದೊರೈರಾಜ್ ಮಾತನಾಡಿ, ದಲಿತ ಪ್ರತಿಭಟನಾಕಾರರ ಮೇಲಿನ ಪೊಲೀಸರ ಲಾಠಿ ಈ ಸರ್ಕಾರದ ಜಾತಿ ಮನಸ್ಸಿಗೆ ಸಾಕ್ಷಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಕವಿ ಕೆ.ಬಿ.ಸಿದ್ದಯ್ಯ, ಹೋರಾಟಗಾರರಾದ ಚೇಳೂರು ವೆಂಕಟೇಶ್‌ಬಂದಕುಂಟೆ ನಾಗರಾಜಯ್ಯ, ಶಿವಾಜಿ, ನರಸೀಯಪ್ಪ, ಹಂತೂರಯ್ಯ, ಹೇಮಸುಧಾ ರೆಡ್ಡಿ ಇನ್ನಿತರರು ಇದ್ದರು.

ಸಚಿವರ ವಿರುದ್ಧ ಆಕ್ರೋಶ
ತುಮಕೂರು: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರದ ಹಿಂದೆ ಸಚಿವರಾದ ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಇದ್ದರು. ಆದರೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದಂತೆ ಈ ಸಚಿವರು ಮೊಬೈಲ್ ಸ್ವಿಚ್ಡ್ ಆಫ್  ಮಾಡಿಕೊಂಡರು ಎಂದು ಗುರುವಾರ ಇಲ್ಲಿ ಸಭೆ ಸೇರಿದ್ದ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಸಂಬಂಧ ನಡೆದಿದ್ದ ಪೂರ್ವಭಾವಿ ಸಭೆಗಳಲ್ಲಿ ಈ ಇಬ್ಬರು ಸಚಿವರು ಭಾಗವಹಿಸಿದ್ದರು. ಮುತ್ತಿಗೆ ಕಾರ್ಯಕ್ರಮಕ್ಕೆ ಬೆಂಬಲ ಕೂಡ ನೀಡಿದ್ದರು. ಆದರೆ ಪೊಲೀಸ್ ಲಾಠಿ ಪ್ರಹಾರ ನಡೆಸುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿದರು. ಕನಿಷ್ಠ ಪಕ್ಷ ಸಾಂತ್ವನ ಹೇಳಲಿಲ್ಲ ಎಂದು ಕಿಡಿಕಾರಿದರು.
ಕೆಪಿಸಿಸಿ ಅಧ್ಯಕ್ಷ, ಡಾ.ಜಿ.ಪರಮೇಶ್ವರ್ ಸಹ ಘಟನೆ ಬಗ್ಗೆ ಚಕಾರ ಎತ್ತದಿರುವುದಕ್ಕೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಒಳಮೀಸಲಾತಿ: ಕೇಂದ್ರಕ್ಕೆ ಶಿಫಾರಸು
ಪ್ರಜಾವಾಣಿ ವಾರ್ತೆ
ತುಮಕೂರು: ದಲಿತರಿಗೆ ಒಳ ಮೀಸಲಾತಿ ನೀಡುವ ಸಂಬಂಧ ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿಯ ಶಿಫಾರಸನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗುರುವಾರ ಭರವಸೆ ನೀಡಿದ್ದಾರೆ.

ಗುರುವಾರ ಮುಖ್ಯಮಂತ್ರಿ ಜಗದೀಶ್‌ಶೆಟ್ಟಿರ್ ಅವರನ್ನು ಭೇಟಿ ಮಾಡಿದ ನಿಯೋಗಕ್ಕೆ ಈ ಭರವಸೆ ನೀಡಿದ್ದಾರೆ ಎಂದು ಮಾದಿಗ ದಂಡೋರ ರಾಜ್ಯ ಘಟಕದ ಅಧ್ಯಕ್ಷ ಪಾವಗಡ ಶ್ರೀರಾಮ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ದೌರ್ಜನ್ಯಕ್ಕೆ ಖಂಡನೆ
ಗುಬ್ಬಿ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವಂತೆ ಮನವಿ ಸಲ್ಲಿಸಲು ಹೋದ ದಲಿತ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಖಂಡಿಸಿದೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುತ್ತಿರುವಾಗ ಮಾದಿಗ ದಂಡೋರ, ದಲಿತ ಪರ ಸಂಘಟನೆಗಳ ಮುಖಂಡರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಅಮಾನವೀಯ. ಲಾಠಿ ಬೀಸಿದ ಪೊಲೀಸರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಂಘಟನೆ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.