ADVERTISEMENT

ಕಾಯ್ದೆ ಜಾರಿಗೆ ಫುಟ್‌ಪಾತ್‌ ವ್ಯಾಪಾರಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 8:53 IST
Last Updated 24 ಸೆಪ್ಟೆಂಬರ್ 2013, 8:53 IST

ತುಮಕೂರು: ಪುಟ್‌ಪಾತ್‌ ವ್ಯಾಪಾರಿಗಳ ಸಂರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ತುಮಕೂರು ಜಿಲ್ಲಾ ಪುಟ್‌ಪಾತ್‌ ವ್ಯಾಪಾರಿಗಳ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.

ನಗರದ ಟೌನ್‌ಹಾಲ್‌ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪುಟ್‌ಪಾತ್‌ ವ್ಯಾಪಾರಿಗಳು ನಗರಸಭೆ ಆಯುಕ್ತರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ­ಯಲ್ಲಿ ಸಾಗಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೂ ಮನವಿ ಸಲ್ಲಿಸಿದರು.

ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ಜೀವನ ನಿರ್ವಹಣೆಯ ಸಂರಕ್ಷಣೆ ಹಾಗೂ ಬೀದಿ ಬದಿ ವ್ಯಾಪಾರ ನಿಯಂತ್ರಣ ಕಾಯ್ದೆ ಮಸೂದೆ ಮಂಡಿಸಲಾಗಿದ್ದು, ರಾಷ್ಟ್ರಪತಿಗಳಿಂದ ಶೀಘ್ರ ಅಂಗೀಕಾರ ಪಡೆಯುವಂತೆ ಒತ್ತಾಯಿಸಿದರು.

ಪುಟ್‌ಪಾತ್‌ ವ್ಯಾಪಾರಿಗಳಿಗೆ ನಿರ್ದಿಷ್ಟ ವ್ಯಾಪಾರಿ ವಲಯಗಳನ್ನು ನಿರ್ಮಿಸುವುದು. ಅಲ್ಲಿಯ ತನಕ ಹಾಲಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿರುವ ಸ್ಥಳಗಳಲ್ಲೇ ವ್ಯಾಪಾರ ಮುಂದುವರೆಸಲು ಅನುವು ಮಾಡಿಕೊಡಬೇಕು. ದಂಡ ಹಾಕುವ ಪೊಲೀಸರ ಕ್ರಮ ನಿಲ್ಲಬೇಕು. ಗುರುತಿನ ಚೀಟಿ ನೀಡಬೇಕು ಎಂದು  ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಪುಟ್‌ಪಾತ್‌ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಉಮೇಶ್‌, ಉಪಾಧ್ಯಕ್ಷ ಇಬ್ರಾಹಿಂ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎನ್‌.ಕೆ. ಸುಬ್ರಹ್ಮಣ್ಯ, ಲಕ್ಷ್ಮಮ್ಮ, ರೇವಣ್ಣ, ಪ್ರಕಾಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.