ಪಾವಗಡ: ತಾಲ್ಲೂಕಿನಾದ್ಯಂತ ಅಕ್ರಮ ಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ. ಉತ್ತರ ಪಿನಾಕಿನಿ ನದಿ ಪಾತ್ರದ ಜತೆಗೆ ಕೆರೆ, ಹಳ್ಳಗಳಿಂದಲೂ ಮರಳು ಸಾಗಿಸಲಾಗುತ್ತಿದೆ. ಇದರಿಂದ ಈ ಪ್ರದೇಶದಲ್ಲಿ ಬೀಳುವ ಅಲ್ಪ ಪ್ರಮಾಣದ ಮಳೆ ನೀರು ಸಹ ಭೂಗರ್ಭ ಸೇರುತ್ತಿಲ್ಲ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ.
ಸಾವಿರ ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಕೊಳವೆಬಾವಿ ಆಶ್ರಿತ ಅಡಿಕೆ, ತೆಂಗು, ತರಕಾರಿ, ನೀರಾವರಿ ತೋಟಗಳು ಒಣಗಿ ನಿಂತಿವೆ. ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದ ರೈತರು ಕೈಸುಟ್ಟುಕೊಂಡು ಗುಳೆ ಹೊರಟಿದ್ದಾರೆ.
ಈ ಸಮಸ್ಯೆ ಸೃಷ್ಟಿಯಾಗಲು ಕಾರಣವಾದ ಮರಳು ದಂಧೆ ಮಾತ್ರ ಎಗ್ಗಿಲ್ಲದೆ ಮುಂದುವರೆದಿದೆ. ನದಿ ಪಾತ್ರದಿಂದ ಹಿಡಿದು ಸಣ್ಣ ಕಟ್ಟೆಗೂ ತನ್ನ ಕಬಂಧಬಾಹು ಚಾಚಿದೆ.
ರೈತರ ತೀವ್ರ ವಿರೋಧದ ನಡುವೆಯೂ ಕೆಲ ಪ್ರಭಾವಿಗಳು ಮರಳು ದಾಸ್ತಾನಿನಲ್ಲಿ ಮಗ್ನರಾಗಿದ್ದಾರೆ. ಕಡಿಮೆ ಬೆಲೆಗೆ ಮಾರಾಟವಾದ ಮರಳು ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತಿದೆ. ಒಂದು ಲಾರಿ ಮರಳಿಗೆ
₨ 10 ಸಾವಿರ ಸಿಕ್ಕರೆ; ಬೆಂಗಳೂರಿನಲ್ಲಿ ಮೂರರಿಂದ ನಾಲ್ಕು ಪಟ್ಟು ದುಬಾರಿ ಬೆಲೆ.
ತಾಲ್ಲೂಕಿನ ವಡ್ರೇವು, ಚೆನ್ನಮ್ಮರೆಡ್ಡಿಹಳ್ಳಿ, ನಾಗಲಾಪುರ, ನದಿ ಪಾತ್ರ, ನಲಿಗಾನಹಳ್ಳಿಯ ಕೆರೆಯಲ್ಲಿ ಮರಳು ದಂಧೆ ಕರಾಳ ಸ್ವರೂಪ ಪಡೆದಿದೆ. ನಾಗಲಮಡಿಕೆ ಹೋಬಳಿಯಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿ ಪಾತ್ರದಿಂದ ಸಾಕಷ್ಟು ಪ್ರಮಾಣದ ಮರಳನ್ನು ದೋಚಲಾಗಿದೆ.
ಇದೀಗ ವಡ್ರೇವು ಬಳಿಯ ನದಿ ಪಾತ್ರದಿಂದ ಟ್ರ್ಯಾಕ್ಟರ್ ಮೂಲಕ ಬಿ.ಕೆ.ಹಳ್ಳಿ– ಕುರಾಕುಲಪಲ್ಲಿ ರಸ್ತೆಯ ರಾಜರ ಗುಡಿ ಜಮೀನು, ವಡ್ರೇವು–ತಿಮ್ಮಮ್ಮನಹಳ್ಳಿ, ವಡ್ರೇವು–ದಳವಾಯಿಹಳ್ಳಿ ರಸ್ತೆಯ ಜಮೀನುಗಳಲ್ಲಿ ಮರಳು ದಾಸ್ತಾನು ಮಾಡಲಾಗುತ್ತಿದೆ. ದಾಸ್ತಾನು ಮಾಡಿದ ಮರಳನ್ನು ರಾತ್ರಿ ವೇಳೆ ಲಾರಿಗಳ ಮೂಲಕ ಬೆಂಗಳೂರಿಗೆ ಸಾಗಿಸಲಾಗುತ್ತದೆ.
ಚನ್ನಮ್ಮರೆಡ್ಡಿಹಳ್ಳಿಯಿಂದಲೂ ಮರಳು ಸಾಗಣೆ ಮಾಡಲಾಗುತ್ತಿದೆ. ಇಲ್ಲಿ ಮರಳು ಸಾಗಣೆಯನ್ನು ದಲಿತರು, ರೈತಾಪಿ ವರ್ಗದವರು ವಿರೋಧಿಸುತ್ತಿದ್ದರೂ ಅವರ ಮಾತಿಗೆ ಬೆಲೆ ಸಿಕ್ಕಿಲ್ಲ. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಸಲುವಾಗಿ ನದಿಪಾತ್ರದಲ್ಲಿ ಕೊರೆಸಿರುವ ಕೊಳವೆ ಬಾವಿಯಲ್ಲಿಯೂ ನೀರು ಬತ್ತಿ ಹೋಗಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗಿದೆ.
ಕೂಡಲೇ ಮರಳು ಸಾಗಣೆ ನಿಲ್ಲಿಸಬೇಕು ಎಂದು ಈಚೆಗೆ ಗ್ರಾಮಸ್ಥರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಕಲ್ಲು, ಮುಳ್ಳು ಹಾಕಿ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು.
‘ಮರಳು ಸಾಗಿಸಬೇಡಿ, ಮರಳು ಸಾಗಣೆಯಿಂದ ರೈತರು ನೀರಿಲ್ಲದೆ ವಲಸೆ ಹೋಗುವ ಸ್ಥಿತಿ ಬರುತ್ತದೆ’ ಎಂದು ಸ್ಥಳೀಯರು ಆಕ್ಷೇಪಿಸಿದರೆ, ಮರಳು ಸಾಗಿಸುವ ಕೆಲಸ ಮಾಡುವವರು, ‘ಇದೇನು ನಿಮ್ಮಪ್ಪನ ಮನೆ ಆಸ್ತೀನಾ? ಬೇಕಾದ್ರೆ ನೀನೂ ಮರಳು ಹೊಡ್ಕೊ’ ಎಂದು ಹೇಳುತ್ತಾರೆ. ಎಲ್ಲರೂ ಇದೇ ರೀತಿ ಮರಳು ಹೊಡೆದರೆ ನಮ್ಮ ಪಾಡೇನು? ಎಂದು ಪ್ರಶ್ನಿಸುತ್ತಾರೆ ಚೆನ್ನಮ್ಮರೆಡ್ಡಿಹಳ್ಳಿಯ ರೈತರು.
ಗುಂಡ್ಲಹಳ್ಳಿಕೆರೆಯಿಂದಲೂ ಮರಳು ಸಾಗಿಸಲಾಗುತ್ತಿದೆ. ಕೆರೆಯ ಮೇಲ್ಪದರದ ಜೇಡಿ ಮಣ್ಣನ್ನು ಇಟ್ಟಿಗೆ ಕಾರ್ಖಾನೆಗೆ ಸಾಗಿಸಿದ ನಂತರ, ಮರಳನ್ನು ಸುತ್ತಮುತ್ತಲ ಗ್ರಾಮಗಳಲ್ಲಿ ದಾಸ್ತಾನು ಮಾಡಿ ಮಾರಲಾಗುತ್ತಿದೆ.
ಮರಳು ಸಾಗಿಸುವ ಸಲುವಾಗಿಯೇ ಕೆರೆಯ ನೀರನ್ನು ಖಾಲಿ ಮಾಡಲಾಗಿದೆ. ಕೆರೆಯಿಂದ ನೀರು ಪೋಲಾಗುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. 6 ತಿಂಗಳ ನೀರು 3 ತಿಂಗಳಲ್ಲೇ ಬರಿದಾಗಿದೆ. ಬೇಸಿಗೆಯಲ್ಲಿ ದನಕರುಗಳು ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ತಾಲ್ಲೂಕು ಅತಿ ಕಡಿಮೆ ಜಲ ಸಂಪನ್ಮೂಲ ಹೊಂದಿದೆ. ಮಿತಿ ಮೀರಿದ ಮರಳು ಸಾಗಣೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರೊಟ್ಟಿಗೆ ಭೂ ಸವೆತದಿಂದಾಗಿ ಫಲವತ್ತಾದ ಜಮೀನುಗಳೂ ಸಹ ವ್ಯವಸಾಯಕ್ಕೆ ಅಯೋಗ್ಯವಾಗುತ್ತಿದೆ. ರೈತರ ಸಂಕಷ್ಟ ಹೆಚ್ಚುತ್ತಿದೆ ಎನ್ನುತ್ತಾರೆ ವಿಜ್ಞಾನ ಕೇಂದ್ರದ ತಾಲ್ಲೂಕು ಘಟಕದ ನಿರ್ದೇಶಕ ಮಂಗಳವಾಡ ಮಂಜುನಾಥ್.
ಇಡಿ ರಾತ್ರಿ ಲಾರಿಗಳು ಓಡಾಡುವುದರಿಂದ ಓಡಾಟದಿಂದ ನಿದ್ರಾ ಭಂಗವಾಗುತ್ತಿದೆ. ಅಪರಿಚಿತರ ಸಂಚಾರವೂ ಹೆಚ್ಚಾಗುತ್ತಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಆಂಧ್ರದ ಪೇರೂರಿನಿಂದ ನಾಗಲಾಪುರದ ಬಳಿ ಮರಳು ದಾಸ್ತಾನು ಮಾಡಿ ಅಲ್ಲಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದೆ. ಈ ವಿಚಾರ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿದಿದ್ದರೂ ಮರಳು ಸಾಗಣೆ ನಿಯಂತ್ರಿಸಲು ಯಾವುದೇ ಕ್ರಮ ಜರುಗಿಸಿಲ್ಲ ಎನ್ನುತ್ತಾರೆ ರೈತ ರಮೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.