ADVERTISEMENT

ಕೆಳ ಸ್ತರದವರಿಗೂ ಉನ್ನತ ಶಿಕ್ಷಣ: ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 7:15 IST
Last Updated 3 ಮಾರ್ಚ್ 2012, 7:15 IST

ತುಮಕೂರು:ಕೆಳಸ್ತರದ ಜನರಿಗೂ ಉನ್ನತ ಶಿಕ್ಷಣ ದೊರೆಯುವಂತಾಗಬೇಕು ಎಂದು ಅಖಿಲ ಭಾರತ ವಿಶ್ವವಿದ್ಯಾನಿಲಯ, ಕಾಲೇಜು ಅಧ್ಯಾಪಕರ ಸಂಘಟನೆಯ ಕಾರ್ಯದರ್ಶಿ ಡಾ.ಪಿ.ಜಯಗಾಂಧಿ ತಿಳಿಸಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ಕಾಲೇಜು ಅಧ್ಯಾಪಕರ ಸಂಘ ಈಚೆಗೆ ನಗರದಲ್ಲಿ ಆಯೋಜಿಸಿದ್ದ ಉನ್ನತ ಶಿಕ್ಷಣ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಮಾನ್ಯತಾ ಮಂಡಳಿ (ನ್ಯಾಕ್) ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತಹ ಪಾರದರ್ಶಕ ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಮಾನ್ಯತೆ, ಮಾನದಂಡ ಮಾಡಬೇಕಾದ ನ್ಯಾಕ್ ಸಂಸ್ಥೆ ನಗೆ ಪಾಟಲಿಗೆ ಈಡಾಗಲಿದೆ ಎಂದು ಎಚ್ಚರಿಸಿದರು.

ಪಿಎಚ್‌ಡಿ ಕೇವಲ ಮಾನದಂಡವಾಗದೆ, ಉನ್ನತ ಶಿಕ್ಷಣದ ಮೌಲ್ಯವನ್ನು ಎತ್ತಿ ಹಿಡಿಯುವುದಕ್ಕೆ ಮಾನದಂಡವಾಗಬೇಕು ಎಂದು ತಿಳಿಸಿದರು.

ಅಖಿಲ ಭಾರತ ವಿಶ್ವವಿದ್ಯಾನಿಲಯ, ಕಾಲೇಜು ಅಧ್ಯಾಪಕರ ಸಂಘಟನೆ 5 ಲಕ್ಷ ಅಧ್ಯಾಪಕ ಸದಸ್ಯರನ್ನು ಹೊಂದಿದೆ. ಈ ಸಂಘಟನೆ ವಿಶ್ವದಲ್ಲೇ ಬಲಯುತವಾಗಿದೆ. ಈ ವರ್ಷ ಸಂಘ ಸುವರ್ಣ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ದೇಶದಾದ್ಯಂತ ಉನ್ನತ ಶಿಕ್ಷಣ ಕುರಿತ ವಿಚಾರ ಸಂಕಿರಣ ಆಯೋಜಿಸುತ್ತಿದೆ ಎಂದರು.

ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಟಿ.ಗಂಗಾಧರಯ್ಯ ಮಾತನಾಡಿ, ಅಂತರ್ಜಾಲದಲ್ಲಿ ಎಲ್ಲವನ್ನು ಕಾಣುತ್ತೇವೆ, ಪಡೆಯುತ್ತೇವೆ ಎಂದು ನಾವು ಭ್ರಮೆಯಲ್ಲಿದ್ದೇವೆ. ಆದರೆ ಇವೆಲ್ಲವೂ ಶಿಕ್ಷಣಕ್ಕೆ ಪೂರಕ ಮಾತ್ರ ಹೊರತು ನಿಜವಾದ ವಿದ್ಯಾಭ್ಯಾಕ್ಕಲ್ಲ ಎಂದು ಹೇಳಿದರು.

ವಿಶ್ವವಿದ್ಯಾನಿಲಯದ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಎಚ್. ವಿ.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಸಿದ್ದಗಂಗಾ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ನಾಗಭೂಷಣ್, ರಾಜ್ಯ ವಿಶ್ವವಿದ್ಯಾನಿಲಯ ಹಾಗೂ ಕಾಲೇಜು ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಪ್ರೊ.ಎಚ್.ಮುರುಗೇಂದ್ರಪ್ಪ, ಅಖಲ ಭಾರತ ವಿಶ್ವವಿದ್ಯಾನಿಲಯದ ಮತ್ತು ಕಾಲೇಜು ಅಧ್ಯಾಪಕರ ಸಂಘಟನೆ ಮಾಜಿ ಉಪಾಧ್ಯಕ್ಷ ಡಾ.ಆರ್. ಹಾಲೇಶ್, ಸಂಘದ ಮಾಜಿ ಅಧ್ಯಕ್ಷ ಎಂ.ಪಿ.ಶಂಕರಪ್ಪ ಇತರರು ಹಾಜರಿದ್ದರು.ಸಂಘದ ಕಾರ್ಯದರ್ಶಿ ಜಯಪ್ರಕಾಶ ಸ್ವಾಗತಿಸಿದರು. ಪ್ರೊ.ಎಚ್.  ಪಿ.ವೀರಭದ್ರಸ್ವಾಮಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.