ತುಮಕೂರು: ಗುಟ್ಕಾ ನಿಷೇಧದಿಂದ ಅಡಿಕೆ ಬೆಲೆ ಕುಸಿದಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಸಮಿತಿ ರಚಿಸಬೇಕು. ಆ ಸಮಿತಿಗೆ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರಾಮಾಣಿಕ ವ್ಯಕ್ತಿಗಳನ್ನು ನೇಮಿಸಬೇಕು ಎಂದು ರೈತ ಮುಖಂಡ ಕಡಿದಾಳ್ ಶಾಮಣ್ಣ ಒತ್ತಾಯಿಸಿದರು.ಗುಟ್ಕಾ ನಿಷೇಧದ ಭೀತಿಯಿಂದ ಅಡಿಕೆ ಬೆಲೆ ಕುಸಿದಿರುವುದನ್ನು ಖಂಡಿಸಿ ನಗರದಲ್ಲಿ ಗುರುವಾರ ಜಿಲ್ಲಾ ಅಡಿಕೆ ಬೆಳೆಗಾರ ರೈತ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗುಟ್ಕಾ ನಿಷೇಧಕ್ಕೆ ಪ್ಲಾಸ್ಟಿಕ್ ಸ್ಯಾಚೆಟ್ ಒಂದೇ ಕಾರಣವಲ್ಲ. ಇದರ ಹಿಂದೆ ಸಿಗರೇಟ್ ಕಂಪೆನಿಗಳ ಲಾಬಿ ಇದೆ. ಅಡಿಕೆ ವಹಿವಾಟು ಸುಮಾರು ಎರಡೂವರೆ ಲಕ್ಷ ಕೋಟಿ ರೂಪಾಯಿ ಇದೆ. ಕೇಂದ್ರ ಸರ್ಕಾರ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳದಿದ್ದರೆ ಕೋಟ್ಯಂತರ ಕುಟುಂಬಗಳು ಬೀದಿಪಾಲಾಗುತ್ತವೆ. ಅಡಿಕೆಯಿಂದ ವೈನ್, ಚಾಕೋಲೆಟ್ ಇನ್ನಿತರ ಉತ್ಪನ್ನಗಳನ್ನು ತಯಾರಿಸಬಹುದಾಗಿದ್ದರೂ ಅದು ಗುಟ್ಕಾದಷ್ಟು ಲಾಭದಾಯಕವಲ್ಲ. ಆದರೆ, ಗುಟ್ಕಾ ತಯಾರಿಸುವಾಗ ಮಿಶ್ರಣ ಮಾಡುವ ‘ಆಸಿಡ್’ ಮಾತ್ರ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದನ್ನು ಈ ಹಿಂದೆಯೇ ನರಸಿಂಹಯ್ಯ ನೇತೃತ್ವದ ತಜ್ಞರ ತಂಡ ಸರ್ಕಾರಕ್ಕೆ ವರದಿ ನೀಡಿದೆ.
ಹಾನಿಕಾರಕ ಆಸಿಡ್ ಮುಕ್ತ ಗುಟ್ಕಾ ತಯಾರಿಸಲು ಸರ್ಕಾರ ಕ್ರಮಕೈಗೊಳ್ಳದೆ ಗುಟ್ಕಾ ನಿಷೇಧಿಸಿರುವುದು ಅಡಿಕೆ ಬೆಳೆಗಾರರಿಗೆ ಮಾರಕ ಎಂದು ಅಭಿಪ್ರಾಯಪಟ್ಟರು. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಬೇಕು. ರೈತ ಮುಖಂಡರ ನಿಯೋಗವನ್ನು ದೆಹಲಿಗೆ ಕೊಂಡೊಯ್ದು ಕೇಂದ್ರ ಕೃಷಿ ಸಚಿವರು ಮತ್ತು ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ, ಅಡಿಕೆ ಬೆಲೆ ಸ್ಥಿರತೆ ತಂದುಕೊಡಬೇಕು. ತುಮಕೂರು ನೆಲದಿಂದ ಪ್ರಾರಂಭಿಕ ಹೋರಾಟ ಶುರುವಾಗಿದ್ದು, 12 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಹೋರಾಟ ನಡೆಯಲಿದೆ. ಇದಕ್ಕೂ ಸ್ಪಂದಿಸದಿದ್ದರೆ ರಾಜ್ಯದಿಂದ ಸುಮಾರು 25 ಸಾವಿರ ರೈತರು ಸಂಸತ್‌ಗೆ ಮುತ್ತಿಗೆ ಹಾಕಲಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಆತ್ಮಹತ್ಯೆ ಅಣಕು ಪ್ರದರ್ಶನ
ಅಡಿಕೆ ಕ್ವಿಂಟಲ್‌ಗೆ ರೂ. 5 ಸಾವಿರ ಕುಸಿದಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ಸ್ಥಿರತೆ ತಂದುಕೊಡದಿದ್ದರೆ ಬೆಳೆಗಾರರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ರೈತ ಮುಖಂಡರು ಮತ್ತು ಜನಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಗೆ ತಂದಿದ್ದ ಅಡಿಕೆ ಮರಕ್ಕೆ ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಅಣಕು ಪ್ರದರ್ಶನ ನಡೆಸಿ, ಪರಿಸ್ಥಿತಿಯ ಗಂಭೀರತೆ ಸಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.