ADVERTISEMENT

ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗೆ ಡಾಬಾಗಳೇ ವೇದಿಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 6:10 IST
Last Updated 9 ಅಕ್ಟೋಬರ್ 2012, 6:10 IST

ಶಿರಾ: ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಕಟವಾಗುತ್ತಿದ್ದಂತೆ ಪಂಚಾಯಿತಿ ಮಟ್ಟದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಆಕಾಂಕ್ಷಿಗಳ ರಾಜಕೀಯ ತಾಲೀಮು ಶುರುವಾಗಿದೆ.

ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆಯಾಗಬೇಕಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಥವಾ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚಿನ ಪೈಪೋಟಿ ಕಂಡುಬರುತ್ತಿದೆ.

36 ಗ್ರಾಮ ಪಂಚಾಯಿತಿಗಳ ಪೈಕಿ 18 ಪಂಚಾಯಿತಿಗಳಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನಗಳ ಪೈಕಿ 17 ಕಡೆ ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಹೆಚ್ಚಿನ ಪೈಪೋಟಿ ಇರುವ ಕಡೆ 20 ತಿಂಗಳ ಅಧಿಕಾರ ಅವಧಿಯನ್ನು ತಲಾ 10 ತಿಂಗಳಂತೆ ಹಂಚಿಕೆ ಮಾಡಿಕೊಳ್ಳುವುದು ಮಾಮೂಲಿಯಾಗಿದೆ. ಆದರೆ ಮೊದಲ 10 ತಿಂಗಳ ಅವಧಿಗೆ ಅಧ್ಯಕ್ಷರಾಗಬೇಕೆಂಬುದೇ ಹಲವು ಆಕಾಂಕ್ಷಿಗಳ ಆಸೆಯಾಗಿದೆ.

ಅಧ್ಯಕ್ಷ-ಉಪಾಧ್ಯಕ್ಷ ಆಕಾಂಕ್ಷಿಗಳು ಮೀಸಲು ಪ್ರಕಟವಾದ ಮಾರನೇ ದಿನದಿಂದಲೇ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಗಾಳ ಹಾಕುತ್ತಿದ್ದು, ಸದಸ್ಯರು ಕೂಡ ಇದೇ ಸಂದರ್ಭ ಎಂದು ಹಾವು-ಏಣಿ ಆಟದಲ್ಲಿ ನಿರತರಾಗಿದ್ದಾರೆ.

ಅಂದರೆ ಇಬ್ಬರು-ಮೂವರು ಆಕಾಂಕ್ಷಿಗಳಿದ್ದರೆ ಒಮ್ಮೆ ಅವನ ಬಳಿ, ಮತ್ತೊಮ್ಮೆ ಇವನ ಬಳಿ ಕಾಣಿಸಿಕೊಳ್ಳುವ ಮೂಲಕ ಆಕಾಂಕ್ಷಿಗಳ ನಡುವೆ ಗೊಂದಲ ಸೃಷ್ಟಿಸಿ ಲಾಭ ಗಿಟ್ಟಿಸುವ ಯತ್ನದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದಲ್ಲಿ ಸಿಗುವುದು ಈಚೆಗೆ ದುರ್ಲಬವಾಗಿದ್ದು, ನಗರದ ಡಾಬಗಳಲ್ಲೇ ಹೆಚ್ಚಾಗಿ ಅಡ್ಡಾಡುತ್ತಿದ್ದಾರೆ. ಇದರಿಂದ ಡಾಬಗಳಲ್ಲಿ ರೋಟಿ-ದಾಲ್, ಚಿಕನ್-ಮಟನ್ ಹಾಗೂ ಮದ್ಯಕ್ಕೆ ಬೇಡಿಕೆ ಹೆಚ್ಚಿದೆ.

ಇತ್ತ ಸದಸ್ಯರು ತಮ್ಮ ಸ್ಥಾನದಿಂದ ಲಾಭ ಗಿಟ್ಟಿಸುತ್ತಿದ್ದರೆ, ಅತ್ತ ಏನೂ ಅಲ್ಲದ ಗ್ರಾಮದ ಪುಢಾರಿಗಳೇನೂ ಸುಮ್ಮನಿಲ್ಲ. ತಮ್ಮ ಬಳಿ ಒಬ್ಬ ಎಸ್‌ಸಿ ಸದಸ್ಯ ಇದ್ದಾನೆ. ಅವನನ್ನು ನಾನೇ ಗೆಲ್ಲಿಸಿದ್ದು, ಆತ ನನ್ನ ಮಾತು ಮೀರುವುದಿಲ್ಲ ಎಂದು ಕತೆ ಹೇಳಿಕೊಂಡು ಡಾಬದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಮಹಿಳಾ ಸದಸ್ಯರ ಸ್ಥಾನವನ್ನು ಡಾಬದಲ್ಲಿ ಅವರ ಗಂಡಂದಿರು ತುಂಬುತ್ತಿದ್ದಾರೆ.

ಇದೆಲ್ಲದರಿಂದ ಅಧ್ಯಕ್ಷ-ಉಪಾಧ್ಯಕ್ಷ ಆಕಾಂಕ್ಷಿಗಳ ಜೇಬಿಗೆ ಬಾರಿ ಹೊರೆಯಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈಗ ಹಾಲಿ ಇರುವ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ನವೆಂಬರ್‌ಗೆ ಮುಗಿಯುತ್ತಿದ್ದು, ತದನಂತರವಷ್ಟೇ ಚುನಾವಣಾ ವೇಳಾ ಪಟ್ಟಿ ಪ್ರಕಟವಾಗಲಿದೆ. ಅಲ್ಲಿವರೆಗೂ ಡಾಬ, ಪ್ರವಾಸ ಹಾಗೂ ಮದ್ಯದ ಅಮಲಿನಲ್ಲಿ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವುದು ಹೇಗಪ್ಪ ಎಂಬ ಚಿಂತೆಯಲ್ಲಿದ್ದಾರೆ.

ತೀವ್ರ ಆಕಾಂಕ್ಷಿಗಳಂತೂ ಲಕ್ಷಗಳೇ ಮುಗಿಯಲಿ ಎಂಬ ಉಮೇದಿನಲ್ಲಿದ್ದು, ಇದಕ್ಕೆ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿ ಗ್ರಾ.ಪಂ.ಗೆ ಕೋಟಿಗಟ್ಟಲ್ಲೆ ಹಣ ಹರಿದು ಬರುತ್ತಿರುವುದೇ ಉಮೇದು ಹೆಚ್ಚಲು ಕಾರಣವಾಗಿದೆ.

ಇನ್ನೂ ಶಾಸಕರು, ಮಾಜಿ ಸಚಿವರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ನೆಮ್ಮದಿಯಾಗಿರುವಂತಿಲ್ಲ. ಬೆಳಗ್ಗೆ ಎದ್ದರೆ ಅಧ್ಯಕ್ಷ-ಉಪಾಧ್ಯಕ್ಷ ಆಕಾಂಕ್ಷಿಗಳು ಮನೆಗೆ ಲಗ್ಗೆ ಇಡುತ್ತಿದ್ದಾರೆ. ತಮ್ಮನ್ನೇ ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಮಾಡುವಂತೆ ಪಟ್ಟು ಹಿಡಿಯುತ್ತಿದ್ದಾರೆ.

ಇದರಿಂದ ಶಾಸಕ, ಮಾಜಿ ಸಚಿವರಿಗೆ ಅತ್ತ ಧರಿ-ಇತ್ತ ಪುಲಿ ಎಂಬ ಸ್ಥಿತಿ. ಏಕೆಂದರೆ ಮುಂದಿನ ಸಾರ್ವತ್ರಿಕ ಚುನಾವಣೆ ಇನ್ನು 8-9 ತಿಂಗಳಷ್ಟೇ ಬಾಕಿ ಇದ್ದು, ಒಬ್ಬನನ್ನು ಬೆಂಬಲಿಸಿದರೆ ಮತ್ತೊಬ್ಬ ಸಿಟ್ಟಾಗುತ್ತಾನೆ. ಚುನಾವಣೆ ಬರಲಿ, ನಮ್ಮ ಬೂತ್‌ನಲ್ಲಿ ಅದ್ಯಾಗೇ ಓಟು ತಗೋತಿಯೋ ನೋಡ್ತೀನಿ ಎಂದು ನೇರ ಸವಾಲು ಹಾಕಿ ಹೋಗುತ್ತಾರೆ ಎಂಬ ಆತಂಕ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.