ADVERTISEMENT

ಗ್ರಾಮಾಭಿವೃದ್ಧಿ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 5:40 IST
Last Updated 2 ಫೆಬ್ರುವರಿ 2011, 5:40 IST

ಪಾವಗಡ: ಧರ್ಮಸ್ಥಳ ಗ್ರಾಮಮಾಭಿವೃದ್ಧಿ ಸಂಸ್ಥೆ ತಾಲ್ಲೂಕಿಗೆ ಪಾದಾರ್ಪಣೆ ಮಾಡುವ ಮೂಲಕ ಗ್ರಾಮಾಭಿವೃದ್ಧಿ ಸಚೇತನವಾಗಲಿದೆ ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದಜೀ ತಿಳಿಸಿದರು.ಪಟ್ಟಣದ ಪಂಪಮಹಾಕವಿ ರಸ್ತೆಯ ಕಟ್ಟಡದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ ಉದ್ಘಾಟಿಸಿ ಮಾತನಾಡಿ, ಬಹುದಿನಗಳ ಕನಸು ನನಸಾಗಿದೆ. ಧರ್ಮಸ್ಥಳದ ಯೋಜನೆಗಳು ಪಾವಗಡದಲ್ಲಿ ಪ್ರಾರಂಭವಾಗಬೇಕು ಎಂಬ ಆಶಯವನ್ನು ಬಹುದಿನಗಳ ಹಿಂದೆ ಧರ್ಮಾಧಿಕಾರಿಗಳಲ್ಲಿ ಭಿನ್ನವಿಸಿಕೊಂಡಿದ್ದೆ.ಗ್ರಾಮಗಳ ಅಭಿವೃದ್ಧಿಯ ಎಲ್ಲ ವಿಚಾರಗಳ ಬಗ್ಗೆ ಸಂಸ್ಥೆ ಅಧ್ಯಯನ ನಡೆಸಿರುವ ಅನುಭವ ಹೊಂದಿದೆ ಎಂದರು.

ಯೋಜನಾ ನಿರ್ದೇಶಕ ಪಿ.ಕೆ.ಪುರುಷೋತ್ತಮ್ ಮಾತನಾಡಿ, ರಾಜ್ಯದ 9 ಜಿಲ್ಲೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯಾರಂಭ ಮಾಡಿದೆ, ಈ ವರ್ಷ ಬೆಳಗಾಂ, ತುಮಕೂರು ಜೆಲ್ಲೆಯಲ್ಲಿ ಕಾರ್ಯಾರಂಭ ಮಾಡುತ್ತಿದ್ದು ಮಾರ್ಚ್‌ವರೆಗೆ ಎಲ್ಲ ರೀತಿಯ ಅಂಕಿ ಅಂಶಗಳನ್ನು ಗ್ರಾಮ ಪಂಚಾಯಿತಿ ಮಟ್ಟದಿಂದ ಸಂಗ್ರಹಿಸಿದ ನಂತರ ಯೋಜನೆಯ ಕಾರ್ಯ ಪ್ರಾರಂಭವಾಗಲಿದೆ ಎಂದು ಹೇಳಿದರು.

ಈವರೆಗೂ ರೂ. 900 ಕೋಟಿ ವಹಿವಾಟು ನಡೆಸುತ್ತಿದ್ದು ಕಿರು ಹಣಕಾಸು ವಹಿವಾಟು ಹಾಗೂ ಗ್ರಾಮ ಸ್ವರಾಜ್ಯದ ಕನಸಿನೊಂದಿಗೆ ಮೂಲಭೂತ ಸೌಲಭ್ಯಗಳನ್ನು ತಾವೇ ಸೃಷ್ಟಿಸಿಕೊಳ್ಳುವುದು, ಸ್ವಯಂ ಸೇವಾಕಾರ್ಯ, ಶ್ರಮದಾನ ಮುಂತಾದ ಹಲವು ಯೋಜನೆಗಳನ್ನು ಹೊಂದಿದೆ ಎಂದು ಅವರು ವಿವರಿಸಿದರು. ಮುಖಂಡರಾದ ಎಂ.ರಾಜು, ನಾಗಭೂಷಣರೆಡ್ಡಿ ಹಾಜರಿದ್ದರು. ಯೋಜನಾಧಿಕಾರಿ ಸತೀಶ್‌ನಾಯಕ್ ಸ್ವಾಗತಿಸಿ, ಚಂದ್ರಶೇಖರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.