ADVERTISEMENT

ಗ್ರಾಮೀಣ ಸಾರಿಗೆ: ಸರ್ವತ್ರ ಸಮಸ್ಯೆ

ಪ್ರಜಾವಾಣಿ ವಿಶೇಷ
Published 29 ಜೂನ್ 2011, 7:00 IST
Last Updated 29 ಜೂನ್ 2011, 7:00 IST
ಗ್ರಾಮೀಣ ಸಾರಿಗೆ: ಸರ್ವತ್ರ ಸಮಸ್ಯೆ
ಗ್ರಾಮೀಣ ಸಾರಿಗೆ: ಸರ್ವತ್ರ ಸಮಸ್ಯೆ   

ತುಮಕೂರು: ತಾಲ್ಲೂಕಿನ ಹೆಗ್ಗೆರೆ ಸಮೀಪ ಟೆಂಪೊ- ಟ್ರ್ಯಾಕ್ಸ್ ಮತ್ತು ಸಾರಿಗೆ ಬಸ್ ನಡುವೆ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತ ಅನಿರೀಕ್ಷಿತವಲ್ಲ. ಪ್ರಯಾಣಿಕರ `ಉಳಿತಾಯ~ ಪ್ರಜ್ಞೆ, ಕೆಎಸ್‌ಆರ್‌ಟಿಸಿ ಚಾಲಕರ ಉದ್ಧಟತನದ ವರ್ತನೆ, ಖಾಸಗಿ ಬಸ್ ಲಾಬಿ ಸೇರಿದಂತೆ ಅನೇಕ ಪರೋಕ್ಷ ಕಾರಣಗಳೂ ಅಪಘಾತದ ಹಿಂದಿವೆ.

`ಜನ 2-3 ರೂಪಾಯಿ ಉಳಿಸ್ಲೀಕೆ ಟ್ರ್ಯಾಕ್ಸ್ ಹತ್ತುತ್ತಾರೆ. ಓವರ್‌ಲೋಡ್ ಆಗಿದೆ ಎಂದು ಬಸ್ ಹತ್ತುವುದಿಲ್ಲ. ಕ್ಲೀನರ್‌ಗಳಾಗಿ  ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಕೆಲವರು ಡ್ರೈವರ್‌ಗಳಾಗಿ ಬಡ್ತಿ ಹೊಂದುತ್ತಾರೆ. ಮಾಮೂಲಿ ಪಡೆದ ಪೊಲೀಸರು ಕಂಡೂ ಕಾಣದಂತೆ ಸುಮ್ಮನಿರುತ್ತಾರೆ~ ಎನ್ನುವುದು ಪ್ರತಿದಿನ ಗುಬ್ಬಿಯಿಂದ ತುಮಕೂರಿಗೆ ಸಂಚರಿಸುವ ಶಿಕ್ಷಕರೊಬ್ಬರು ಮಾಡುವ ನೇರ ಆರೋಪ.

ಗುಬ್ಬಿ- ತುಮಕೂರಿಗೆ ಎಕ್ಸ್‌ಪ್ರೆಸ್ ಬಸ್‌ನಲ್ಲಿ ರೂ.14 ಮತ್ತು ಸೆಟ್ಲ್ ಬಸ್‌ನಲ್ಲಿ ರೂ.12 ದರವಿದೆ. ಟೆಂಪೊ ಟ್ರ್ಯಾಕ್ಸ್‌ಗಳಲ್ಲಿ ಕೇವಲ ರೂ.10ಕ್ಕೆ ಕರೆದೊಯ್ಯುತ್ತಾರೆ. ಟ್ರ್ಯಾಕ್ಸ್‌ಗಳಲ್ಲಿರುವ ಡ್ರೈವರ್ ಮತ್ತು ಕ್ಲೀನರ್‌ಗಳು ಸಾಮಾನು ತುಂಬಲು ಮತ್ತು ಇಳಿಸಲು ನೆರವಾಗುತ್ತಾರೆ. ಬೇಕೆಂದ ಕಡೆ ನಿಲ್ಲಿಸುತ್ತಾರೆ. ಮಾರುಕಟ್ಟೆ ಸಮೀಪಕ್ಕೆ ಟ್ರ್ಯಾಕ್ಸ್‌ಗಳನ್ನು ಕೊಂಡೊಯ್ಯಬಹುದು. ಆದರೆ ಬಸ್‌ಗಳಲ್ಲಿ ಈ ಯಾವ ಅನುಕೂಲಗಳೂ ಇಲ್ಲ ಎಂದು ಸಮಸ್ಯೆಯ ಇನ್ನೊಂದು ಮುಖವನ್ನು ಸ್ಥಳೀಯರು ವಿವರಿಸುತ್ತಾರೆ.

ಬಸ್‌ಗಳ ಸೇವೆ ಲಭ್ಯವಿಲ್ಲದ ಸ್ಥಳಗಳಲ್ಲಿ ಟ್ರ್ಯಾಕ್ಸ್‌ಗಳನ್ನೇ ಜನತೆ ಅವಲಂಬಿಸಿದ್ದಾರೆ. 22ರಿಂದ 24 ಜನರನ್ನು ತುಂಬಿಕೊಂಡು 100 ಕಿ.ಮೀ ವೇಗದಲ್ಲಿ ಟ್ರ್ಯಾಕ್ಸ್‌ಗಳನ್ನು ಓಡಿಸುವುದು, ಟ್ರ್ಯಾಕ್ಸ್ ಚಾಲಕರ ನಡುವೆ ಇರುವ ಅನಾರೋಗ್ಯಕರ ಸ್ಪರ್ಧೆಗಳಿಂದ ಅಪಘಾತಗಳು ಸಂಭವಿಸುತ್ತಿವೆ.

ಗುಬ್ಬಿ- ಸಿ.ಎಸ್.ಪುರ, ನಿಟ್ಟೂರು- ಕಲ್ಲೂರು ಕ್ರಾಸ್ ಮತ್ತು ಗುಬ್ಬಿ- ಚೇಳೂರು ಮಾರ್ಗದಲ್ಲಿಯೂ ಟ್ರ್ಯಾಕ್ಸ್‌ಗಳ ಸಂಚಾರ ಹೇರಳವಾಗಿದೆ. ರಸ್ತೆ ಕೆಟ್ಟಿರುವುದರಿಂದ ವೇಗವಾಗಿ ಸಂಚರಿಸಲು ಸಾಧ್ಯವಿಲ್ಲ. ಯಾವುದೇ ಅಪಘಾತವಾಗಿಲ್ಲ. ಈ ರಸ್ತೆಗಳ ಅಭಿವೃದ್ಧಿಯಾದರೆ ಇಲ್ಲಿಯೂ ಅಪಘಾತದ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯರು.
ಪೊಲೀಸರು ಮತ್ತು ಆರ್‌ಟಿಒ ಸಿಬ್ಬಂದಿ ಎಚ್ಚೆತ್ತುಕೊಂಡರೆ ಸಮಸ್ಯೆ ಬಹುತೇಕ ಪರಿಹಾರವಾಗುತ್ತದೆ. ಈಗ ಜಿಲ್ಲಾಧಿಕಾರಿ ಆದೇಶದ ಮೇಲೆ ಇಲ್ಲಿನ ಪೊಲೀಸರು ಟ್ರಾಕ್ಸ್ ಸಂಚಾರ ನಿಲ್ಲಿಸಿದ್ದಾರೆ. ಆದರೆ ಇನ್ನೊಂದು ವಾರದಲ್ಲಿ ಮತ್ತೆ ಈ ಮಾರ್ಗದಲ್ಲಿ ಟ್ರಾಕ್ಸ್‌ಗಳ ಓಡಾಟ ಪ್ರಾರಂಭವಾಗುತ್ತದೆ ಎಂದು ಸಾರ್ವಜನಿಕರು ಭವಿಷ್ಯ ನುಡಿಯುತ್ತಾರೆ.

ಹೆಸರಿಗೆ ಮಾತ್ರ ಗ್ರಾಮಾಂತರ
ಕೊರಟಗೆರೆ ತಾಲ್ಲೂಕಿನಲ್ಲಿ  ಪ್ರಮುಖ ಪ್ರದೇಶಗಳಲ್ಲಿ ಮಾತ್ರ ಸರ್ಕಾರಿ ಬಸ್‌ಗಳು ಸಂಚರಿಸುತ್ತವೆ.  ಗ್ರಾಮಾಂತರ ಸಾರಿಗೆ ಹೆಸರಿಗೆ ಮಾತ್ರ ಇದೆ. ಹೆಚ್ಚು ಜನ ಸಂಚರಿಸುವ ತುಮಕೂರು- ಗೌರಿಬಿದನೂರು ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳ ನೆತ್ತಿ ಮೇಲೂ ಪ್ರಯಾಣಿಕರು ಕುಳಿತು ಸಂಚರಿಸುವುದು ಸಾಮಾನ್ಯ ದೃಶ್ಯವಾಗಿದೆ.

ಈ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಿದೆಯಾದರೂ ಅವು ಸರಿಯಾದ ಸಮಯಕ್ಕೆ ಬರುವುದಿಲ್ಲ, ಸರ್ಕಾರಿ ಬಸ್‌ಗಳು ಬರುವ ಕೆಲವೇ ನಿಮಿಷಗಳ ಮೊದಲು ಆ ಮಾರ್ಗದಲ್ಲಿ ಖಾಸಗಿ ಬಸ್ ಸಂಪೂರ್ಣ ಭರ್ತಿಯಾಗಿ ಸಂಚರಿಸುತ್ತದೆ. ಅನಂತರ ಸರ್ಕಾರಿ ಬಸ್ ಖಾಲಿಯಾಗಿ ಓಡುತ್ತದೆ. ಕೆಲವೇ ದಿನಗಳಲ್ಲಿ ಕಲೆಕ್ಷನ್ ಕಡಿಮೆ ಎಂಬ ನೆಪವೊಡ್ಡಿ ಮಾರ್ಗವನ್ನು ಸಂಸ್ಥೆ ರದ್ದು ಪಡಿಸುತ್ತದೆ ಎನ್ನುವುದು ಕೊರಟಗೆರೆ ತಾಲ್ಲೂಕಿನ ಬಸ್ ಪ್ರಯಾಣಿಕರ ಪ್ರಮುಖ ದೂರು.

ಅತಿಹೆಚ್ಚು ಪ್ರಯಾಣಿಕರ ಒತ್ತಡವಿರುವ ಮುಂಜಾನೆ 9ರಿಂದ 11 ಮತ್ತು ಸಂಜೆ 4ರಿಂದ 6ರ ನಡುವೆ ಹಳ್ಳಿ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಕಾಲಿಡಲು ಅಸಾಧ್ಯವೆನಿಸುವ ಪರಿಸ್ಥಿತಿ ಇದೆ. ಬಸ್‌ಗಳ ಏಣಿಗೆ ನೇತು ಬಿದ್ದ ಶಾಲಾ ಮಕ್ಕಳು ಕೈಜಾರಿ ಬಿದ್ದು ಗಾಯಗೊಂಡ ಹಲವು ಉದಾಹರಣೆಗಳಿವೆ ಎನ್ನುತ್ತಾರೆ.
ಖಾಸಗಿ ಲಾಬಿ ಜೋರು: ಮಧುಗಿರಿ ತಾಲ್ಲೂಕಿನಲ್ಲಿ ಖಾಸಗಿ ಬಸ್‌ಗಳ ಲಾಬಿ ಬಲು ಜೋರು.

ಇವರ ಲಾಬಿಯಿಂದಲೇ ಈ ಹಿಂದೆ ಎರಡು ಬಾರಿ ಡಿಪೋ ಮಂಜೂರಾಗಿದ್ದರೂ ನಿರ್ಮಾಣವಾಗಲಿಲ್ಲ ಎನ್ನುವುದು ಪ್ರಯಾಣಿಕರ ಅಳಲು. ಕೆಲವು ಗ್ರಾಮೀಣ ರೂಟ್‌ಗಳಲ್ಲಿ ಸರ್ಕಾರಿ ಬಸ್ ಸಂಚಾರ ಪ್ರಾರಂಭವಾಗಿದೆ. ಆದರೆ ರೈತರು ತರಕಾರಿ ಇತ್ಯಾದಿ ಸಾಮಗ್ರಿಗಳನ್ನು ಮಾರುಕಟ್ಟೆಗೆ ಸಾಗಿಸಲು ಕಂಡಕ್ಟರ್‌ಗಳು ಕಿರಿಕಿರಿ ಮಾಡುತ್ತಾರೆ ಎಂಬ ದೂರು ಸಾಮಾನ್ಯವಾಗಿದೆ.

ಬೇಕಾಬಿಟ್ಟಿ ಸಂಚಾರ: ಶಿರಾ ತಾಲ್ಲೂಕಿನಲ್ಲಿಯೂ ಸಾರಿಗೆ ಸಮಸ್ಯೆ ಪರಿಹಾರವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳಿಗೆ ನಿಗದಿ ಮಾಡಿರುವ ಸಮಯ ಸರಿಯಾಗಿಲ್ಲ. ನಿಗದಿಯಾದ ಸಮಯಕ್ಕೆ ಬಸ್‌ಗಳೂ ಸಂಚರಿಸುವುದಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಿ ಹೋಗುವ ಎಕ್ಸ್‌ಪ್ರೆಸ್‌ಗಳಿಂದ ಸ್ಥಳೀಯರಿಗೆ ನಯಾಪೈಸೆ ಉಪಯೋಗವಿಲ್ಲ. ಟ್ರಾಕ್ಸ್, ಲಾರಿ, ಮಿನಿ ಬಸ್‌ಗಳನ್ನೇ ಜನರು ಸಂಚಾರಕ್ಕೆ ಅವಲಂಬಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಮಕ್ಕಳ ಪರದಾಟ
 ಹೊಸದುರ್ಗ- ಬೆಂಗಳೂರು ಮಾರ್ಗಮಧ್ಯೆ ಬರುವ ಹುಳಿಯಾರು ಹೋಬಳಿಯಲ್ಲೂ ಗ್ರಾಮೀಣ ಸಾರಿಗೆ ದುರ್ಬಲವಾಗಿದೆ. ಎಳನಾಡು, ಹೊಯ್ಸಳಕಟ್ಟೆಗೆ ಬಸ್‌ಗಳ ಸೌಲಭ್ಯ ಕಲ್ಪಿಸಿ ಎಂದು ಸ್ಥಳೀಯರು ತಿಪಟೂರು ಡಿಪೋ ಮ್ಯಾನೇಜರ್‌ಗೆ ಗೋಗರೆದರೂ ಪ್ರಯೋಜನವಾಗಿಲ್ಲ. ಖಾಸಗಿ ಬಸ್‌ಗಳು ಸಮಯ ಪಾಲಿಸುವುದಿಲ್ಲ. ಶಾಲಾ ವಿದ್ಯಾರ್ಥಿಗಳನ್ನು ಖಾಸಗಿ ಬಸ್‌ಗಳು ಹತ್ತಿಸುವುದಿಲ್ಲ ಎಂಬ ದೂರು ಸಾಮಾನ್ಯವಾಗಿದೆ. ಟಾಟಾ ಏಸ್ ವಾಹನ ಹೋಬಳಿಯ ಗ್ರಾಮೀಣ ಜನರ ಸಂಚಾರ ಸಮಸ್ಯೆಯನ್ನು ನೀಗಿಸಿದೆ. ಆದರೆ ಓವರ್‌ಲೋಡ್ ಅಪಾಯ ಮಾತ್ರ ತಪ್ಪಿಲ್ಲ.

ಲಗೇಜ್ ಆಟೊಗಳೇ ಸರ್ವಸ್ವ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಲಗೇಜ್ ಆಟೊಗಳೇ ಗ್ರಾಮೀಣ ಸಾರಿಗೆಯ ಬಹುಮುಖ್ಯ ಸಾಧನ. ಶೆಟ್ಟಿಕೆರೆ- ತಿಪಟೂರು, ಚಿಕ್ಕನಾಯಕನಹಳ್ಳಿ- ತೀರ್ಥಪುರ ಮಾರ್ಗವಾಗಿ ಬಸ್ ಸಂಚಾರ ಹೆಚ್ಚಬೇಕು ಎಂಬ ಸ್ಥಳೀಯರ ಬೇಡಿಕೆ ಇಲ್ಲಿಯವರೆಗೂ ಈಡೇರಿಲ್ಲ. ನಷ್ಟದ ನೆಪವೊಡ್ಡಿ ಸರ್ಕಾರಿ ಬಸ್‌ಗಳ ಮಾರ್ಗಗಳು ಇದ್ದಕ್ಕಿದ್ದಂತೆ ರದ್ದಾಗುತ್ತಿವೆ. ಇತ್ತೀಚೆಗಷ್ಟೇ ಲಗೇಜ್ ಆಟೋದಲ್ಲಿದ್ದ ಅಜ್ಜನೊಬ್ಬ ಜಾರಿ ಬಿದ್ದು ಹಿಂದೆ ಬರುತ್ತಿದ್ದ ಲಾರಿ ಚಕ್ರಕ್ಕೆ ಬಲಿಯಾದ ನೆನಪು ತಾಲ್ಲೂಕಿನ ಜನರಲ್ಲಿದೆ.

ಸಿಬ್ಬಂದಿ ಕೊರತೆ ನೆಪ: ಪಾವಗಡದಲ್ಲಿ ಈಚೆಗಷ್ಟೇ ಕೆಎಸ್‌ಆರ್‌ಟಿಸಿ ಡಿಪೋ ಆರಂಭವಾಗಿದೆ. ಆದರೆ ಗ್ರಾಮೀಣ ಸಾರಿಗೆ ಸುಧಾರಿಸಿಲ್ಲ. `ಯಾವ ಮಾರ್ಗಕ್ಕೆ ಬಸ್ ಕೇಳಿದರೂ ಸಿಬ್ಬಂದಿ ಕೊರತೆ~ಯ ಉತ್ತರ ಸಿಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

ಪಾವಗಡ- ಹುಸೇನ್‌ಪುರ, ಪಾವಗಡ- ತಿರುಮಣಿ- ವೆಂಕಟಮ್ಮನಹಳ್ಳಿ, ಪಾವಗಡ- ಬೆಟ್ಟದಕೆಳಗಣಹಳ್ಳಿ ಮಾರ್ಗಕ್ಕೆ ಬಸ್ ಮಾರ್ಗ ಒದಗಿಸಬೇಕು ಎನ್ನುವುದು ಈ ಭಾಗದ ಬಹುದಿನದ ಬೇಡಿಕೆ. ಈ ವಿಚಾರ ಸಾರಿಗೆ ಸಚಿವ ಅಶೋಕ್ ಕಚೇರಿ ತಲುಪಿದ್ದರೂ ಪರಿಹಾರ ಮಾತ್ರ ಕಂಡಿಲ್ಲ.

ಮಧುಗಿರಿ, ತುಮಕೂರು, ಚಳ್ಳಕೆರೆ, ಪೆನುಕೊಂಡ ಮತ್ತು ಹಿಂದೂಪುರಗಳಿಗೆ ಸಂಚರಿಸುತ್ತಿರುವ ಬಸ್‌ಗಳ ಸಂಖ್ಯೆ ಏನೇನೂ ಸಾಲದು. ಗ್ರಾಮೀಣ ಸಾರಿಗೆಯ ಸಿಂಹಪಾಲು ಲಗೇಜ್ ಆಟೋಗಳ ಹಿಡಿತದಲ್ಲಿವೆ. ಜನರ ಅಗತ್ಯಕ್ಕೆ ತಕ್ಕಷ್ಟು ಬಸ್‌ಗಳನ್ನು ಮತ್ತು ಸಿಬ್ಬಂದಿಯನ್ನು ಡಿಪೋಗೆ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ನೆಲಹಾಳ- ತೋವಿನಕೆರೆ ಮಾರ್ಗದಲ್ಲಿ ಬಸ್ ಸಂಚಾರವಿಲ್ಲದ ಕಾರಣ ಆಟೋಗಳನ್ನೇ ಜನತೆ ಅವಲಂಬಿಸಿದ್ದಾರೆ. ಓವರ್‌ಲೋಡ್ ಸಾಮಾನ್ಯ ಸಮಸ್ಯೆ.

ಇದಿಷ್ಟೆ ಅಲ್ಲದೇ ಜಿಲ್ಲೆಯಲ್ಲಿ ಲೈಸೆನ್ಸ್ ಇಲ್ಲದ ಅನಧಿಕೃತ ಖಾಸಗಿ ಬಸ್‌ಗಳ ದಂಧೆಯೂ ಜೋರಾಗಿದೆ. ಸ್ಪರ್ಧೆಯ ಭರಾಟೆಯಲ್ಲಿ ಅತಿವೇಗವಾಗಿ ಸಂಚರಿಸುವ ಈ ಬಸ್‌ಗಳಿಗೆ ಟ್ರಾಫಿಕ್ ರೂಲ್ಸ್ ಎಂಬುದೇ ಇಲ್ಲವಾಗಿದೆ.

ಅಪಘಾತಕ್ಕೆ ಆರ್‌ಟಿಒ ಹೊಣೆ
ಗುಬ್ಬಿ: ಹೆಗ್ಗೆರೆ ಸಮೀಪ ಸೋಮವಾರ ನಡೆದ ಭೀಕರ ಅಪಘಾತದಲ್ಲಿ 16 ಮಂದಿ ಮೃತಪಟ್ಟ ಘಟನೆಗೆ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ವೈಫಲ್ಯವೇ ನೇರ ಹೊಣೆ ಎಂದು ಎಐಟಿಯುಸಿ ಸಂಘಟನೆ ಜಿಲ್ಲಾ ಕಾರ್ಮಿಕ ಮುಖಂಡ ಯೋಗೀಶ್ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು-ನಿಟ್ಟೂರು ಮಾರ್ಗ ಮಿತಿ ಇಲ್ಲದೆ ಪ್ರಯಾಣಿಕರನ್ನು ಹೊತ್ತು ನಿತ್ಯ ಓಡಾಡುವ ಟೆಂಪೊ ಟ್ರ್ಯಾಕ್ಸ್‌ನ ಹಾವಳಿಗೆ ನಿಯಂತ್ರಣ ಹಾಕಬೇಕಿದ್ದ ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳು ಇಂತಹ ಘಟನೆ ಸಂಭವಿಸಿದ ವೇಳೆ ಮಾತ್ರ ಮೈಕೊಡವಿ ಎಚ್ಚರಗೊಂಡು ತಾತ್ಕಾಲಿಕ ನಿಷೇಧ ಹೇರುವುದು ಮಾತ್ರ ಕಾಣಬರುತ್ತದೆ ಎಂದು ಟೀಕಿಸಿದರು.

ಹೆಗ್ಗೆರೆ ಸಮೀಪ ಜರುಗಿದ ಭೀಕರ ಅಪಘಾತದಲ್ಲಿ ಮಡಿದ ಮೃತರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಕರ್ನಾಟಕ ದಲಿತ ಸರ್ವೋದಯ ಸಮಿತಿ ತಾಲ್ಲೂಕು ಸಂಚಾಲಕ ಪರಮೇಶ್, ಸದಸ್ಯರಾದ ಕುಮಾರ್, ಲಕ್ಷ್ಮಣ್, ರವಿಕುಮಾರ್ ಇದ್ದರು.

ಮದುವೆ ಸೀಸನ್ ಬಂದರೆ ಬಸ್‌ಗಳಿಲ್ಲ!
ಮದುವೆ ಸೀಸನ್ ಆರಂಭವಾದರೆ ತೋವಿನಕೆರೆ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಹಲವು ಬಸ್‌ಗಳು `ಒಪ್ಪಂದದ ಮೇರೆಗೆ~ ಮಾರ್ಗಗಳನ್ನು ರದ್ದುಪಡಿಸುತ್ತವೆ.

ADVERTISEMENT

ಮುನ್ಸೂಚನೆಯೇ ಇಲ್ಲದೆ ಬಸ್‌ಗಳ ಸಂಚಾರ ಬಂದ್ ಆಗುವುದರಿಂದ ಜನತೆ ತತ್ತರಿಸುತ್ತಾರೆ.  ಇದನ್ನು ನೋಡಿಯೂ ಸಾರಿಗೆ ಅಧಿಕಾರಿಗಳು ಮೌನ ವಹಿಸುತ್ತಾರೆ. ಇದಕ್ಕೆ ಕಾರಣ ಹಲವು ಇವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.