ADVERTISEMENT

ಚಾರ್ಜ್‌ಶೀಟ್‌ಗೆ ಸಿಎಂ ಕಾರಣ: ಎಚ್‌ಡಿಕೆ ಅಳಲು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 8:20 IST
Last Updated 18 ಏಪ್ರಿಲ್ 2012, 8:20 IST

ತುಮಕೂರು/ಗುಬ್ಬಿ: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಲೋಕಾಯುಕ್ತ ಬಳಸಿಕೊಂಡು ಡಿನೋಟಿಫಿಕೇಷನ್ ಪ್ರಕರಣದಲ್ಲಿ ತಮ್ಮ ವಿರುದ್ಧ ಚಾರ್ಜ್‌ಶೀಟ್ ಹಾಕಲು ಕಾರಣರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಆರೋಪಿಸಿದರು.

ಮಂಗಳವಾರ ನಗರಕ್ಕೆ ಬಂದ ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ತಮ್ಮದಾಗಲಿ ಅಥವಾ ಮಾಜಿ ಸಚಿವ ಸಿ.ಚೆನ್ನಗಪ್ಪ ಅವರದಾಗಲಿ ತಪ್ಪಿಲ್ಲ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಆರ್.ಅಶೋಕ್ ಪ್ರಕರಣ ತಮ್ಮ ಪ್ರಕರಣಕ್ಕಿಂತ ಭಿನ್ನವಾಗಿದೆ. ಡಿನೋಟಿಫಿಕೇಷನ್ ಮಾಡಿದ ಭೂಮಿಯನ್ನು ನಾನಾಗಲೀ, ಚೆನ್ನಗಪ್ಪ ಅವರಾಗಲೀ ಖರೀದಿಸಿಲ್ಲ. ಆದರೆ ಯಡಿಯೂರಪ್ಪ ಮತ್ತು ಅಶೋಕ್ ಭೂಮಿ ಡಿನೋಟಿಫಿಕೇಷನ್ ಮಾಡಿ ಅವರೇ ಖರೀದಿಸಿದ್ದಾರೆ ಎಂದು ಹೇಳಿದರು.

ಜಾತಿ ಗೊಂದಲ ಮೂಡಿಸಿ ಲಾಭ ಪಡೆಯುವ ಉದ್ದೇಶದಿಂದ ಸದಾನಂದಗೌಡ ಅವರು ಜೆಡಿಎಸ್‌ನೊಂದಿಗೆ ಸಖ್ಯ ಬೆಳೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಾವಗಡ, ಶಿರಾ, ಮಧುಗಿರಿಗೆ ಭದ್ರಾ ಮೇಲ್ಡಂಡೆ ಯೋಜನೆಯಿಂದ 19 ಟಿಎಂಸಿ ನೀರು ಕೊಡುವ ಕಾರ್ಯಕ್ರಮಕ್ಕೆ ತಾವು ಮುಖ್ಯಮಂತ್ರಿ ಆಗಿದ್ದಾಗ ಚಾಲನೆ ನೀಡಲಾಗಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಯೋಜನೆ ಮಂದಗತಿಗೆ ಕಾರಣವಾಗಿದೆ. ತ್ವರಿತಗತಿಯಲ್ಲಿ ಈ ಯೋಜನೆ ಮುಗಿಸಬೇಕು ಎಂದು ಒತ್ತಾಯಿಸಿದರು.

ಬರಗಾಲ ಪೀಡಿತ ಪ್ರದೇಶಗಳಲ್ಲಿ ಕುಡಿಯಲು ನೀರು ಸಹ ಇಲ್ಲ. ನೀರು ಪೂರೈಕೆಗೆ ಅಗತ್ಯವಾಗಿ ಬೇಕಾದ ವಿದ್ಯುತ್ ಸಹ ಸರ್ಕಾರ ನೀಡುತ್ತಿಲ್ಲ. ಜನರೇಟರ್ ಮೂಲಕವಾದರೂ ವಿದ್ಯುತ್ ನೀಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಗುಬ್ಬಿ ಸಮೀಪದ ಕರಿಯನಹಟ್ಟಿಯಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಖಾತೆಗಳ ಭಾರದಿಂದ ಬಳಲುತ್ತಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

 ಸಚಿವ ಸಂಪುಟ ವಿಸ್ತರಣೆ ಮಾಡಲಾಗದೇ ಮುಖ್ಯಮಂತ್ರಿ ಬಳಲಿ ಬೆಂಡಾಗಿದ್ದಾರೆ. ಆರೋಗ್ಯ, ಕಂದಾಯ ಇಲಾಖೆ ಸೇರಿದಂತೆ ಯಾವ ಇಲಾಖೆಯಲ್ಲೂ ಸರಿಯಾಗಿ ಕೆಲಸ ಆಗುತ್ತಿಲ್ಲ. ಜನರಿಗೆ ಗೌರವ ಕೊಟ್ಟಾದರೂ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಬರಗಾಲ ಪೀಡಿತ ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ. ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ರಾಸಾಯನಿಕ ಗೊಬ್ಬರ ಕ್ವಿಂಟಲ್‌ಗೆ ರೂ. 2 ಸಾವಿರ ಆಗಲಿದೆ ಎಂದು ಹೇಳಲಾಗುತ್ತಿದೆ.
 
ಈ ರೀತಿ ಆದಲ್ಲಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಅಭಿಪ್ರಾಯಪಟ್ಟರು. ಜೆಡಿಎಸ್ ಅಧಿಕಾರಕ್ಕೆ ಬಂದ್ದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿ.ವಿ ಲಾಂಛನ ಹೋರಾಟಕ್ಕೆ ಬೆಂಬಲ
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಲಾಂಛನ ಬದಲು ಮಾಡಿರುವ ಕ್ರಮ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಮಂಗಳವಾರ ನಗರಕ್ಕೆ ಬಂದಿದ್ದ ಅವರನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತುಮಕೂರು ವಿ.ವಿ. ಲಾಂಛನವನ್ನು ತಾವು ಮುಖ್ಯಮಂತ್ರಿಯಾಗಿದ್ದಾಗ ರೂಪಿಸಲಾಗಿತ್ತು. ಹೊಸ ಲಾಂಛನ ವಿರೋಧಿಸಿ ಹೋರಾಟ ಮಾಡುತ್ತಿರುವ ಸಂಘಟನೆಗಳನ್ನು ಬೆಂಬಲಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಎಸ್‌ಎಫ್‌ಐ, ಡಿವೈಎಫ್ ನೇತೃತ್ವದ ತಂಡ  ನೂತನ ಲಾಂಛನ ವಿರೋಧಿ ಹೋರಾಟಕ್ಕೆ ಬೆಂಬಲ ನೀಡುವಂತೆ ಕುಮಾರಸ್ವಾಮಿ ಅವರಿಗೆ ಮನವಿ ಅರ್ಪಿಸಿತು. ಡಿವೈಎಫ್‌ಐ ಎಸ್. ರಾಘವೇಂದ್ರ ಮತ್ತಿತರರು ತಂಡದಲ್ಲಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.