ADVERTISEMENT

ಜಾತಿ ವ್ಯವಸ್ಥೆ ಸಮಾಜಕ್ಕೆ ಕಂಟಕ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 5:50 IST
Last Updated 2 ಫೆಬ್ರುವರಿ 2011, 5:50 IST

ತಿಪಟೂರು: ಯೋಗ್ಯತೆಯಿಂದ ಮರ್ಯಾದೆ, ಹೆಚ್ಚುಗಾರಿಕೆ ಗಳಿಸಿಕೊಳ್ಳಬೇಕೆ ಹೊರತು ಜಾತಿಯಿಂದಲ್ಲ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.ನಗರದಲ್ಲಿ ತಾಲ್ಲೂಕು ಸವಿತಾ ಸಮಾಜ ಸಂಘದಿಂದ ಮಂಗಳವಾರ ನಡೆದ ತ್ಯಾಗರಾಜರ ಆರಾಧನೆ ಮತ್ತು ಸವಿತಾ ಮಹರ್ಷಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ದೇಶದ ಮೂಲವನ್ನು ಕೆದಕಿದರೆ ಯಾವ ಜಾತಿಗಳೂ ಅಸ್ತಿತ್ವದಲ್ಲಿರಲಿಲ್ಲ ಎಂಬುದು ಅರಿವಾಗುತ್ತದೆ. ಕಾಲಾಂತರದಲ್ಲಿ ಬೆಳೆದ ಜಾತಿ ವ್ಯವಸ್ಥೆ ಅಸಮಾನತೆ, ಅಸಹನೆ ಹುಟ್ಟಿ ಹಾಕಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತಂದಿದೆ. ಇದನ್ನು ತೊಡೆದುಹಾಕಿ ಭಾರತೀಯ ಜೀವನ ಪದ್ಧತಿಯ ಸಹಜ ಮಾನ ವೀಯ ಮೌಲ್ಯವನ್ನು ಕಾಲಕಾಲಕ್ಕೆ ಉನ್ನತೀಕರಿಸಲು ತ್ಯಾಜರಾಜರಂತಹ ಮಹರ್ಷಿಗಳು ಶ್ರಮಿಸಿದ್ದಾರೆ ಎಂದರು.

ಸವಿತಾ ಸಮಾಜದ ಜನಾಂಗ ಕಾಯಕದ ಮೂಲಕ ಸ್ವಾವಲಂಬಿಯಾಗಿ ವಿಶಿಷ್ಟತೆ ಸಾಧಿಸಿದೆ. ಕಲೆ, ಸಂಸ್ಕೃತಿಗೂ ತನ್ನದೇ ಕೊಡುಗೆ ನೀಡುತ್ತಿರುವ ಈ ಜನಾಂಗವನ್ನು ಗೌರವಿಸಿ ಮುನ್ನಡೆಗೆ ಸಹಕರಿಸಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಈ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಹಕರಿಸುವೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಈ ಜನಾಂಗ ಸಂಕಲ್ಪ ಶಕ್ತಿ ಪ್ರದರ್ಶಿಸಬೇಕು ಎಂದು ತಿಳಿಸಿದರು.

ತೀರಾ ಕಡಿಮೆ ಸಂಖ್ಯೆಯಲ್ಲಿರುವ ಹಿಂದುಳಿದ ಜಾತಿಗಳು ಒಗ್ಗೂಡಿ ಹೋರಾಡಿದರೆ ಮಾತ್ರ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಪಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು ಮಾತನಾಡಿ, ಹಿಂದುಳಿದ ವರ್ಗಗಳು ಶಿಕ್ಷಣ ಶಕ್ತಿ ಮೂಲಕ ಮುನ್ನುಗ್ಗಿದರೆ ಮಾತ್ರ ಪ್ರಗತಿ ಎಂದರು.

ರಾಜ್ಯ ಸವಿತಾ ಸಮಾಜದ ಕೋಶಾಧಿಕಾರಿ ಟಿ.ಎನ್.ನಾಗರಾಜು ಮಾತನಾಡಿ, ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಸಂಘದಿಂದ ವಿದ್ಯಾರ್ಥಿ ವೇತನ, ಹಾಸ್ಟೆಲ್ ಮತ್ತಿತರರ ಸೌಲಭ್ಯ ಜಾರಿಗೊಳಿಸಲಾಗಿದೆ. ಸಮಾಜದ ಜನಾಂಗದ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು  ಎಂದು ಅವರು  ತಿಳಿಸಿದರು.

ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಎಂ.ನಾಗರಾಜು, ನಗರಸಭೆ ಸದಸ್ಯರಾದ ಸಿಂಗ್ರಿದತ್ತ ಪ್ರಸಾದ್, ನಿಜಗುಣ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಟಿ.ನರಸಿಂಹಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎನ್.ಮುತ್ತುರಾಜ್, ಗೌರವಾಧ್ಯಕ್ಷ ಟಿ.ಎಂ.ವರದರಾಜು, ಕಾರ್ಯದರ್ಶಿ ಎಸ್.ಕುಮಾರ್, ಪ್ರತಿನಿಧಿ ಟಿ.ಸಿ.ಗೋವಿಂದರಾಜು, ಗುಣಶೇಖರ್, ನಾರಾಯಣರಾವ್, ನಟರಾಜ್, ಸುಬ್ರಹಣ್ಯ ಮತ್ತಿತರರು ಮಾತನಾಡಿದರು.ಪ್ರಶಾಂತ್ ಬಾಬು ಸ್ವಾಗತಿಸಿ, ವಿಜಯಕುಮಾರ್ ವಂದಿಸಿದರು. ವೆಂಕಟರಾಮಯ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.