ADVERTISEMENT

ಜಿಲ್ಲಾ ಆಸ್ಪತ್ರೆ ; ಸ್ಕ್ಯಾನಿಂಗ್ಗೆ ಅಲೆದಾಟ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 5:40 IST
Last Updated 20 ಅಕ್ಟೋಬರ್ 2012, 5:40 IST

ತುಮಕೂರು: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು ಸ್ಕ್ಯಾನಿಂಗ್‌ಗಾಗಿ ದಿನಗಟ್ಟಳೆ ಕಾಯುವಂತಾಗಿದೆ. ದಿನಕ್ಕೆ ಕೇವಲ 30 ಮಂದಿಗೆ ಮಾತ್ರ ಸ್ಕ್ಯಾನಿಂಗ್ ಮಾಡಲು ಅವಕಾಶವಿರುವುದರಿಂದ ರೋಗಿಗಳು ಕಂಬ ಸುತ್ತುವಂತಾಗಿದೆ.

ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲಿರುವ ಪ್ರಯೋಗಾಯಲದಲ್ಲಿ ಸ್ಕ್ಯಾನಿಂಗ್ ಯಂತ್ರ ಅಳವಡಿಸಲಾಗಿದೆ. ಆಸ್ಪತ್ರೆಗೆ ನೀಡಲಾಗಿದ್ದ ಯಂತ್ರವನ್ನು ವರ್ಷದಿಂದ ಬಳಕೆ ಮಾಡಿರಲಿಲ್ಲ. ಈಚೆಗೆ ಸಂಸ್ಥೆಯೊಂದಕ್ಕೆ ಹೊರಗುತ್ತಿಗೆ ನೀಡುವ ಮೂಲಕ ಸ್ಕ್ಯಾನಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಹೊರಗುತ್ತಿಗೆ ಪಡೆದಿರುವ ಕಂಪೆನಿ ಸಮರ್ಪಕವಾಗಿ ಸಿಬ್ಬಂದಿಯನ್ನು ನಿಯೋಜನೆ ಮಾಡದೆ, ಎಲ್ಲ ಸೌಲಭ್ಯಗಳಿದ್ದರೂ ಜನರಿಗೆ ಪ್ರಯೋಜನಕ್ಕೆ ಬಾರದಂತಾಗಿದೆ.

ಜಿಲ್ಲಾ ಆಸ್ಪತ್ರೆಗೆ ಪ್ರತಿದಿನ ಸಾವಿರಾರು ರೋಗಿಗಳು ಬರುತ್ತಾರೆ. ಇದರಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಸ್ಕ್ಯಾನಿಂಗ್ ಅಗತ್ಯವಿರುತ್ತದೆ. ಆದರೆ ಸ್ಕ್ಯಾನಿಂಗ್‌ಗಾಗಿ ಬಂದರೆ ದಿನಗಟ್ಟಳೆ ಕಾಯಬೇಕು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೇವಲ 30 ಮಂದಿಗೆ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಇದರಲ್ಲಿ ಐದಾರು ಮಂದಿ ತುರ್ತು ಚಿಕಿತ್ಸಾ ಘಟಕದಿಂದ ಬರುತ್ತಾರೆ. ಉಳಿದವರು ಕಾದು ಕುಳಿತರೂ ಪ್ರಯೋಜನವಾಗುವುದಿಲ್ಲ.

ಜಿಲ್ಲಾ ಆಸ್ಪತ್ರೆಗೆ ಬರುವ ಅತಿ ಹೆಚ್ಚು ಮಂದಿ ಬಡವರು. ಅದರಲ್ಲಿಯೂ ಗ್ರಾಮೀಣರು ಮತ್ತು ಮುಸ್ಲಿಮರ ಸಂಖ್ಯೆ ಜಾಸ್ತಿ. ಒಂದೆಡೆ ಚಿಕಿತ್ಸೆಗಾಗಿ ಗಂಟೆಗಟ್ಟಲೆ ಕಾಯಬೇಕು. ಮತ್ತೊಂದೆಡೆ ನಿಗದಿತ ಸಮಯಕ್ಕೆ ಸ್ಕ್ಯಾನಿಂಗ್, ಪ್ರಯೋಗಾಲಯದ ವರದಿ ದೊರೆಯುತ್ತಿಲ್ಲ ಎನ್ನುತ್ತಾರೆ ರೋಗಿಗಳು.

ತುಮಕೂರು ಹೆಲ್ತ್ ಸೊಸೈಟಿಗೆ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಿದ್ದು, ಪಾರ್ಟ್ ಟೈಂನ ಒಬ್ಬ ರೇಡಿಯಾಲಿಜಸ್ಟ್‌ನ್ನು ಮಾತ್ರ ಸಂಸ್ಥೆ ನೇಮಕ ಮಾಡಿದೆ.

ಪೂರ್ಣಾವಧಿಯ ನೌಕರರು ದೊರೆಯುತ್ತಿಲ್ಲ. ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ಗುತ್ತಿಗೆ ಕರಾರು ಪ್ರಕಾರ ಅವಕಾಶವಿಲ್ಲ ಎಂದು ಸಂಸ್ಥೆ ಹೇಳುತ್ತಿದೆ ಎನ್ನಲಾಗಿದೆ. ಆದರೆ ರೆಡಿಯಾಲಿಜಿಸ್ಟ್‌ಗೆ ಸಹಾಯಕರನ್ನು ಸಹ ನೇಮಕ ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದರಿಂದ ಸ್ಕ್ಯಾನಿಂಗ್ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ರೋಗಿಗಳು ದೂರುತ್ತಾರೆ.

ಸಿಬ್ಬಂದಿ ಕೊರತೆ: ಜಿಲ್ಲಾ ಆಸ್ಪತ್ರೆಯಲ್ಲಿ ಇರುವುದು ಕೇವಲ ಒಬ್ಬ ರೆಡಿಯಾಲಿಜಿಸ್ಟ್ ಮಾತ್ರ. ಕಳೆದ ಎರಡು ತಿಂಗಳಿಂದ ಅವರು ರಜೆ ಇದ್ದರು. ಹೀಗಾಗಿ ಸಮಸ್ಯೆ ಆಗಿತ್ತು. ಆಸ್ಪತ್ರೆಯ ರೆಡಿಯಾಲಿಜಿಸ್ಟ್‌ನ್ನು ಸಹ ಇದೇ ಕೆಲಸಕ್ಕೆ ನಿಯೋಜಿಸಲಾಗುವುದು ಎಂದು ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ) ಡಾ.ರುದ್ರಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.

ಆರೋಗ್ಯ ಇಲಾಖೆಯಿಂದ ನೇರವಾಗಿ ಗುತ್ತಿಗೆ ನೀಡಲಾಗಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಇದೇ ರೀತಿ ಸಮಸ್ಯೆ ಇದೆ. ಹೆಚ್ಚುವರಿ ಸಿಬ್ಬಂದಿ ನೀಡಲು ಗುತ್ತಿಗೆ ಪಡೆದವರು ಮುಂದಾಗುತ್ತಿಲ್ಲ.  ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇಲಾಖೆ ಉಪ ನಿರ್ದೇಶಕರು ಈಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವರ್ಷದ ಗುತ್ತಿಗೆ ಅವಧಿ ಮುಗಿದ ನಂತರ ಸಮಸ್ಯೆ ಸರಿಪಡಿಸಲಾಗುವುದು. ಅದುವರೆಗೆ ಆಸ್ಪತ್ರೆ ಸಿಬ್ಬಂದಿ ನಿಯೋಜಿಸಲಾಗುವುದು. ಅಲ್ಲದೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಆದರೆ ತಜ್ಞ ರೆಡಿಯಾಲಿಜಿಸ್ಟ್‌ಗಳು ದೊರೆಯುತ್ತಿಲ್ಲ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.