ತುಮಕೂರು: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಅಕ್ರಮ ತಡೆಗಟ್ಟಲು ಜಿಲ್ಲೆಯಾದ್ಯಂತ 26 ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ.
ಚುನಾವಣಾ ಅಕ್ರಮ ಭೇದಿಸಲು ತಾಲ್ಲೂಕಿಗೆ ಒಂದರಂತೆ 11 ಸಂಚಾರಿ ತಂಡ ರಚಿಸಲಾಗಿದೆ. ಹೆಂಡ, ಹಣ ಹಂಚಿಕೆ, ಮತದಾರರಿಗೆ ಆಮಿಷವೊಡ್ಡುವ ಸುದ್ದಿ ಬಂದ ತಕ್ಷಣ ವಿಡಿಯೋಗ್ರಾಫರ್, ಎಎಸ್‌ಐ, ಇಬ್ಬರು ಕಾನ್ಸ್ಟೆಬಲ್ ಒಳಗೊಂಡ ತಂಡ ಪ್ರಕರಣ ದಾಖಲಿಸಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದ್ದು, ಜಿಲ್ಲೆಯಲ್ಲಿ 2990 ಕಂಟ್ರೋಲ್ ಯೂನಿಟ್, 3800 ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಲಾಗುತ್ತಿದೆ. ಬಿಇಎಲ್ ಕಾರ್ಖಾನೆ ಅಧಿಕಾರಿಗಳು ಮತಯಂತ್ರಗಳನ್ನು ತಪಾಸಣೆ ನಡೆಸಿದ್ದಾರೆ. ಹೊಸ ಮತಯಂತ್ರಗಳಲ್ಲಿ ನೋಟಾ (ಅಭ್ಯರ್ಥಿ ತಿರಸ್ಕರಿಸುವ ಬಟನ್) ಸೇರಿಸಲಾಗಿದೆ ಎಂದು ಅವರು ತಿಳಿಸಿದರು.
219 ಕಡೆ ದಾಳಿ: ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಣೆ ಮೇಲೆ ಕಣ್ಣಿಟ್ಟಿದ್ದು, ನೀತಿ ಸಂಹಿತೆ ಜಾರಿಯಾದ ನಂತರ ಈವರೆಗೆ 219 ಕಡೆ ದಾಳಿ ನಡೆಸಲಾಗಿದೆ. 32 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 14 ಆರೋಪಿಗಳನ್ನು ಬಂಧಿಸಲಾಗಿದೆ. 19.68 ಲೀಟರ್ ಮದ್ಯ, ದ್ವಿಚಕ್ರ ವಾಹನ, 1850 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ನಾಗರಾಜಯ್ಯ ತಿಳಿಸಿದರು.
44 ಸಾವಿರ ಹೊಸ ಅರ್ಜಿ: ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ನಡೆದ ವಿಶೇಷ ಅಭಿಯಾನದಲ್ಲಿ 44,216 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ತಿಂಗಳ ಅಂತ್ಯಕ್ಕೆ ಗುರುತಿನ ಚೀಟಿ ವಿತರಿಸಲಾಗುವುದು ಎಂದರು.
726 ರೌಡಿಶೀಟರ್‌ಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಲಾಗಿದೆ. ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿ, ಶಿಕ್ಷೆಗೆ ಗುರಿಯಾಗಿರುವ 104 ಮಂದಿ ಮೇಲೆ ನಿಗಾ ವಹಿಸಲಾಗಿದೆ. ಮತದಾರರ ಪಟ್ಟಿಯಿಂದ ಇವರ ಹೆಸರು ಕೈ ಬಿಡುವ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ಗುಪ್ತಾ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್.ಗೋವಿಂದರಾಜು, ಎಎಸ್‌ಪಿ ಆರ್.ಲಕ್ಷ್ಮಣ್ ಇದ್ದರು.
14.84 ಲಕ್ಷ ಮತದಾರರು: ತುಮಕೂರು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಒಟ್ಟು 14.82 ಲಕ್ಷ ಮತದಾರರು ಇದ್ದಾರೆ. 7.39 ಲಕ್ಷ ಪುರುಷರು, 7.26 ಲಕ್ಷ ಮಹಿಳಾ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 20.52 ಲಕ್ಷ ಇದೆ. ಜನಸಂಖ್ಯೆ 26.81 ಲಕ್ಷ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.