ADVERTISEMENT

ಜೀವ ಮೀಟಿದ ತಂಬೂರಿ!

​ಪ್ರಜಾವಾಣಿ ವಾರ್ತೆ
Published 30 ಜೂನ್ 2012, 10:20 IST
Last Updated 30 ಜೂನ್ 2012, 10:20 IST
ಜೀವ ಮೀಟಿದ ತಂಬೂರಿ!
ಜೀವ ಮೀಟಿದ ತಂಬೂರಿ!   

ಮನೆಯ ಮಾಸಿದ ಹೊರಗೋಡೆಗೆ ಒರಗಿ ಅಸ್ಪಷ್ಟ ದೃಷ್ಟಿಯಲ್ಲಿ ಆಕಾಶ ದಿಟ್ಟಿಸುತ್ತಿದ್ದ ಅವರು ತಂಬೂರಿಯ ಸೆಳೆತ ತಾಳದೆ ತಡವರಿಸುತ್ತಾ ಒಳ ಹೋದರು. ಗೂಟಕ್ಕೆ ನೇತು ಹಾಕಿದ್ದ ಆ ತಂಬೂರಿ ಮುಟ್ಟಿದಾಕ್ಷಣ ಜೀವ ಜಿನುಗಿತು!

`ತರವಲ್ಲ ಎಂದೆನೆಸಿದರೂ ಮುಟ್ಟಿ ನಮಸ್ಕರಿಸಿ ನಯವಾಗಿ ಕೈಗೆತ್ತಿದ ತಂಬೂರಿ ಮೀಟುವ ಮುನ್ನವೇ     ನಡುಗುವ ಬೆರಳು ತಂತಿಗೆ ತಾಗಿ ನಾದ ಹೊಮ್ಮುತ್ತದೆ. ನೆನಪು ಮೀಟಿ ಎದೆಯಾವರಿಸುತ್ತದೆ...
ಸುಳ್ಳಲ್ಲಾ.... ಇದು... ತಂಬೂರಿಯೇ ಬದುಕು, ಭಾವ, ಭವವೆಂದು ತಿಳಿದು ತಂತಿ ಮೀಟುತ್ತಲೇ ಬದುಕು ಸವೆಸಿ ಈಗ ಹೊರಾಂಡದಲ್ಲಿ ಕುಳಿತಿರುವ ಅವರಿಗೆ ಇತ್ತ ಕಡೆಯ ಸೆಳೆತ, ಅತ್ತ ಕಡೆಯ ಧ್ಯಾನ.

ತಿಪಟೂರು ತಾಲ್ಲೂಕು ಬೆಣ್ಣೇನಹಳ್ಳಿಯ ತಂಬೂರಿ ಬಸಪ್ಪ (75) ತಂಬೂರಿಯ ಸರಸ ಸಂಗೀತದ ಕುರುಹು ಕಂಡವರು. ಅಜ್ಜ, ಅಪ್ಪನ ತಂಬೂರಿ ನಾದ, ಹಾಡು, ಕಥೆ ಕೇಳುತ್ತಾ ಬೆಳೆದ ಬಸಪ್ಪಗೆ ಅದೇ ಬಾಲ್ಯದ ಶಾಲೆ. ತಂಬೂರಿ ಕಲಾವಿದರ ಕುಟುಂಬದಲ್ಲಿ ಹುಟ್ಟಿದ ಅವರಿಗೆ ಬದುಕು ಸಾಗಿಸಲು ಸಿಕ್ಕಿದ್ದು ತಂಬೂರಿ ಮಾತ್ರ. ಹೆಸರಿನೊಂದಿಗೆ ತಂಬೂರಿ ಪದ ಸಹ ಅಂಟಿಕೊಂಡು ತಂಬೂರಿಯೇ ಜೀವನ ಆಗಿ ಹೋಯಿತು.

ಯೌವನದಲ್ಲಿ ಸೊಗಸಾದ ಕಂಠಸಿರಿ, ಹಾಡುಗಾರಿಕೆ, ಶೃತಿ ತಪ್ಪದ ತಂಬೂರಿ ನಾದ. ವೇಷ ಹಾಕಿ ತಂಬೂರಿ ಜೊತೆ ಭಿಕ್ಷಕ್ಕೆ ಹೋದರೆ ಹಾಡಿನೊಂದಿಗೆ ಮೈಮರೆಯುತ್ತಿದ್ದರು. ಮತ್ತಷ್ಟು ಭಿಕ್ಷೆ ಹಾಕಿ ಹಾಡು ಕೇಳುವವರಿದ್ದರು. ಹಾಡಷ್ಟೇ ಅಲ್ಲ ಅವರ ಬಾಯಲ್ಲಿ ಹಲವು ಕಥೆಗಳು ಹರಿದಾಡುತ್ತಿದ್ದವು.

ಮಾಗಡಿ ಕೆಂಪೇಗೌಡ, ಬಂಜೆ ಹೊನ್ನಮ್ಮ, ಕಾಡು ಸಿದ್ದಮ್ಮನ ಕಥೆ, ಬಳ್ಳಾರಿ ಸಿಪಾಯಿ, ಶೆಟ್ಟಪ್ಪಗೌಡರ ಕಥೆ ಸೇರಿದಂತೆ 25ಕ್ಕೂ ಹೆಚ್ಚು ಕಾವ್ಯ, ಕಥೆಗಳು ಅವರ ಮಸ್ತಕದಲ್ಲಿ ಅಚ್ಚಾಗಿದ್ದವು. ಇವರನ್ನು ಕರೆಸಿ ಕಥೆ ಹೇಳಿಸುವವರಿಗೂ ಕೊರತೆ ಇರಲಿಲ್ಲ. ಅಪ್ಪ ಕೊಟ್ಟ ತಂಬೂರಿಯೇ ನನ್ನ ಆಸ್ತಿಯಾಗಿತ್ತು ಎನ್ನುತ್ತಾರೆ ಬಸಪ್ಪ. ಆದರೆ ಈಗ ಅವರ ಇಡೀ ದೇಹವೇ ತಂಬೂರಿಯಂತೆ ಕಂಪಿಸುವ ವೃದ್ಧರಾಗಿದ್ದಾರೆ.

ಅಂಗೈ ಅಗಲ ಜಮೀನಿಲ್ಲದ ಅವರು ತಂಬೂರಿ ಹಿಡಿದು ಭಿಕ್ಷೆ ಬೇಡಿದ್ದು, ಕಥೆ ಹೇಳಿದ್ದು ಬದುಕಿನ ಕಾಟಾಚಾರಕ್ಕಲ್ಲ. ಅದನ್ನೇ ಧ್ಯಾನಿಸಿದ್ದರಿಂದ ಪಾಂಡಿತ್ಯ ಲಭಿಸಿತ್ತು. ಇವರ ಕಥೆ, ಕಾವ್ಯ ಸಂಪತ್ತನ್ನು ತಿಳಿದ ಹಲವು ಜನಪದ ವಿದ್ವಾಂಸರು ಬೆರಗಾಗಿದ್ದರು. 1989ರಲ್ಲಿ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.

1983ರಲ್ಲಿ ಅಕಾಡೆಮಿ ಅಧ್ಯಕ್ಷರಾಗಿದ್ದ ಎಚ್.ಎಲ್.ನಾಗೇಗೌಡ ಬಸಪ್ಪ ಕಾಯಿಲೆಗೆ ತುತ್ತಾಗಿದ್ದಾರೆಂಬ ವಿಷಯ ತಿಳಿದು ಆಸ್ಪತ್ರೆ ಖರ್ಚಿಗೆ ತಕ್ಷಣ ರೂ. 500 ಚೆಕ್ ಕಳುಹಿಸಿದ್ದರು. ಅವರು ಹಣ ಕಳುಹಿಸಿದ್ದರ ಸಂಬಂಧದ ಪತ್ರವನ್ನು ಬಸಪ್ಪ ಇಂದಿಗೂ ಜತನದಿಂದ ಇಟ್ಟುಕೊಂಡು ಕೃತಜ್ಞತೆ ತೋರುತ್ತಾರೆ.

ಈಗ ತಂಬೂರಿ ಹಿಡಿಯಲಾಗದಷ್ಟು ದೇಹ ನಿಶ್ಯಕ್ತಿ. ವೃದ್ಧ ಪತ್ನಿಯೇ ಈಗ ಆಸರೆ. ಮಗ, ಸೊಸೆಯದ್ದು ಕೂಲಿ ಜೀವನ. ಪರಿಸ್ಥಿತಿ ಹೀಗಿದ್ದರೂ ರಾಜ್ಯ ಸರ್ಕಾರ ಕಲಾವಿದರಿಗೆ ನೀಡುವ ಮಾಸಾಶನ ಇದುವರೆಗೆ ಈವರಿಗೆ ದೊರೆತಿಲ್ಲ.

ತಂಬೂರಿ ಕುರಿತು...
ಬುರುಡೆ ಮಧ್ಯದಿಂದ ಹೊರಟ ಕೋಲಿನ ಬುಡದಲ್ಲಿ ಕಟ್ಟಿದ ತಂತಿ ಚಿಟಿಕೆ ಬಿರಟೆ ದಾಟಿ ಕೋಲಿನ ತುದಿಯಲ್ಲಿ ಸಿಕ್ಕಿಸಿದ ಬಿಗಿ ತಿರುವು ಕಡ್ಡಿಗೆ ಸೇರಿರುತ್ತದೆ. ತಂತಿ ಮೀಟಿದರೆ ಅನನ್ಯ ಪ್ರತಿ ತರಂಗ ಏಳುತ್ತದೆ. ಕೆಲ ಅಲೆಮಾರಿಗಳು, ಸಾಂಪ್ರಾದಾಯಿಕ ಭಿಕ್ಷುಕರು ಬಳಸುತ್ತಿದ್ದ ಪ್ರಮುಖ ಪರಿಕರವಿದು. ಆದರೆ ಈ ಚಿರಪರಿಚಿತ ತಂಬೂರಿ ಹಿಡಿದು ಹಾಡುವ, ಕಥೆ ಹೇಳುವ ದೊಡ್ಡ ಪರಂಪರೆ ನಮ್ಮಲ್ಲಿದೆ. ಈ ಭಾಗದ ಭಜನೆಗಳಿಗೆ ತಂಬೂರಿ ಅವಿಭಾಜ್ಯ ವಾದ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.