ADVERTISEMENT

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಮೂವರ ಪೈಪೋಟಿ

ಸಿ.ಕೆ.ಮಹೇಂದ್ರ
Published 16 ಮಾರ್ಚ್ 2012, 8:00 IST
Last Updated 16 ಮಾರ್ಚ್ 2012, 8:00 IST

ತುಮಕೂರು: ಅವಿಶ್ವಾಸದಿಂದ ತೆರವಾಗಿರುವ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಲಿದ್ದು, ಬಹುಮತಕ್ಕೆ ಬೇಕಾದ ಸಂಖ್ಯಾಬಲ ಗಳಿಸಲು ಮೂವರು ಸದಸ್ಯೆಯರ ನಡುವೆ ಕಸರತ್ತು ಆರಂಭವಾಗಿದೆ. ಕಾಂಗ್ರೆಸ್‌ನ ದೇವಿಕಾ ಸಿದ್ದಲಿಂಗೇಗೌಡ ಮುಂಚೂಣಿಯಲ್ಲಿದ್ದಾರೆ.

ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿದೆ. ಜೆಡಿಎಸ್‌ನ ಜಯಲಕ್ಷ್ಮೀ ನರಸಿಂಹಮೂರ್ತಿ, ಪಕ್ಷೇತರ ಸದಸ್ಯೆ ಗೀತಾ ರುದ್ರೇಶ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ.ಯಶೋಧಾ ಗಂಗಪ್ಪ ಅವರನ್ನು ಅವಿಶ್ವಾಸದಿಂದ ಕೆಳಗಿಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ದೇವಿಕಾ ಅವರೇ ಬಹುತೇಕ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಸಂಭವವಿದೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇಲ್ಲವಾಗಿದ್ದು, ಜೆಡಿಎಸ್ ಬೆಂಬಲ ಅಗತ್ಯವಿದೆ. ಆದರೆ ಜೆಡಿಎಸ್‌ನಲ್ಲಿ ದೇವಿಕಾಗೆ ಬೆಂಬಲ ಕೊಡುವ ಸಂಬಂಧ ಇನ್ನೂ ಅಂತಿಮ ತೀರ್ಮಾನವಾಗಿಲ್ಲದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.

ನಿರಂತರ ಸಭೆ: ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಬೆಂಬಲಿಸಬೇಕೆಂಬ ಜಿಜ್ಞಾಸೆಯಲ್ಲಿರುವ ಜೆಡಿಎಸ್ ನಾಯಕರು ಮೂರು ದಿನಗಳಿಂದ ನಿರಂತರ ಸಭೆ ನಡೆಸುತ್ತಿದ್ದರೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕ ಎಚ್.ನಿಂಗಪ್ಪ ಅವರು ಜೆಡಿಎಸ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸದಸ್ಯರು ಮತ್ತು ನಾಯಕ ನಡುವೆ ಒಮ್ಮತದ ನಿರ್ಣಯ ಸಾಧ್ಯವಾಗದೆ ಅಂತಿಮ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಹುಲಿನಾಯ್ಕರ್‌ಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಪಾಧ್ಯಕ್ಷ ಅಸ್ಲಾಂ ಪಾಷಾ ಕಾಂಗ್ರೆಸ್‌ನಲ್ಲಿರುವ ಕಾರಣ ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂಬುದು ಜೆಡಿಎಸ್ ವಾದ. ಆದರೆ ಇದಕ್ಕೆ ಕಾಂಗ್ರೆಸ್ ಒಪ್ಪಿಲ್ಲ. ದೇವಿಕಾ ಅವರನ್ನೇ ಅಧ್ಯಕ್ಷೆಯನ್ನಾಗಿ ಮಾಡಬೇಕು ಎಂದು ಪಟ್ಟು ಹಿಡಿದಿದೆ. ಹೀಗಾಗಿ ಜೆಡಿಎಸ್- ಕಾಂಗ್ರೆಸ್ ನಡುವೆ ಇನ್ನೂ ಸ್ಪಷ್ಟ ಹೊಂದಾಣಿಕೆ ಮೂಡಿಲ್ಲ. ಕಾಂಗ್ರೆಸ್ ತನ್ನ ನಿರ್ಧಾರ ಸಡಿಲಿಸದಿದ್ದರೆ ಜೆಡಿಎಸ್ ಅಂತಿಮ ನಿಲುವನ್ನು ಚುನಾವಣೆಗೆ ಕೆಲ ನಿಮಿಷಗಳ ಮೊದಲು ತೆಗೆದುಕೊಳ್ಳಲಿದೆ ಎಂದು ಪಕ್ಷದ ಮುಖಂಡರೊಬ್ಬರು `ಪ್ರಜಾವಾಣಿ~ಗೆ ಗುರವಾರ ತಿಳಿಸಿದರು.

ಜೆಡಿಎಸ್ ಬೆಂಬಲಕ್ಕೆ ಬಿಜೆಪಿ: ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಬೆಂಬಲಿಸುವುದಾಗಿ ಬಿಜೆಪಿ ಆಸೆ ತೋರಿಸಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜಯಲಕ್ಷ್ಮೀ ಅವರ ಪತಿ ನರಸಿಂಹರಾಜು ಹಾಗೂ ಕೆಲ ಜೆಡಿಎಸ್ ಮುಖಂಡರ ಬಳಿ ಶಾಸಕ ಎಸ್.ಶಿವಣ್ಣ ಸುದೀರ್ಘ ಚರ್ಚೆ ನಡೆಸಿದ್ದು, ಬಿಜೆಪಿ ಬಳಿ 8 ಮತಗಳಿದ್ದು, ಕಾಂಗ್ರೆಸ್‌ನ ಇಬ್ಬರನ್ನು ಮತದಾನದಿಂದ ದೂರ ಉಳಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಚುನಾವಣೆ ಕುತೂಹಲ ಕೆರಳಿಸಿದೆ.

ಬಿಜೆಪಿ ಜೊತೆ ಕೈ ಜೋಡಿಸಬೇಕೆ, ಬೇಡವೇ ಎಂಬ ಜಿಜ್ಞಾಸೆಯಲ್ಲಿ ಜೆಡಿಎಸ್ ಇದೆ. ಜೆಡಿಎಸ್ ಕೆಲ ಸದಸ್ಯರು ಬಿಜೆಪಿ ಜೊತೆ ಹೆಜ್ಜೆ ಹಾಕಲು ಒಲವು ವ್ಯಕ್ತಪಡಿಸಿದ್ದರೆ, ಮತ್ತಷ್ಟು ಸದಸ್ಯರು ವಿರೋಧ ವ್ಯಕ್ತಪಡಿದ್ದು, ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಲೆಕ್ಕಾಚಾರ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಸಭೆ: ಎಚ್‌ಎಂಎಸ್ ಕಾಲೇಜಿನಲ್ಲಿ ನಡೆದ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಪಕ್ಷೇತರ ಸದಸ್ಯೆ ಗೀತಾ ರುದ್ರೇಶ್ ಭಾಗವಹಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಬೆಂಬಲಿಸುವಂತೆ ಕಾಂಗ್ರೆಸ್ ಸಭೆಯಲ್ಲಿ ಕೋರಿದರು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ತಮ್ಮ ಸದಸ್ಯರ ಮೇಲಿನ ಕಳೆದುಕೊಂಡಿವೆ ಎನ್ನಲಾಗಿದೆ. ಹೀಗಾಗಿಯೇ ಈ ಪಕ್ಷಗಳು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಒಮ್ಮೆ ನಿರ್ಧಾರ ಕೈಗೊಂಡು ಸದಸ್ಯರು ತಮ್ಮ ಒಲವು-ನಿಲವು ಬದಲಿಸಿದರೆ ಸಾರ್ವಜನಿಕವಾಗಿ ಮುಖಭಂಗ ಅನುಭವಿಸಬೇಕಾಗುತ್ತದೆ ಎಂದು ಆಯಾಯ ಪಕ್ಷಗಳ ಅಧ್ಯಕ್ಷರು, ಶಾಸಕರು ಒಂದು ಖಡಕ್ ನಿರ್ಣಯ ಪ್ರಕಟಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿರುವ ಮೂವರು ಸದಸ್ಯೆಯರು ತಮ್ಮದೇ ಬಲಾಬಲ ಹೊಂದಿದ್ದು, ಬೇಕಾಗಿರುವ ಸಂಖ್ಯಾ ಬಲ `ಕೂಡಿಸಿಕೊಳ್ಳಲು~ ಇನ್ನಿಲ್ಲದ ಹರಸಾಹಸ ನಡೆಸಿದ್ದಾರೆ. ಸದಸ್ಯರ ಮೇಲೆ ಪಕ್ಷಗಳ ಹಿಡಿತ ಕಷ್ಟಸಾಧ್ಯವಾದ್ದು, ಸದಸ್ಯರ ಹಾವು ಏಣಿಯಾಟ ಮುಂದುವರಿದಿದೆ. ಅಲ್ಲದೆ ಸದಸ್ಯರ `ಕುದುರೆ ವ್ಯಾಪಾರ~ ನಡೆದರೂ ಅಚ್ಚರಿ ಪಡಬೇಕಾಗಿಲ್ಲ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಜೆಡಿಎಸ್ ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ ಎಂದು ಹೇಳಲಾಗುತ್ತಿದೆ.

ದೇವಿಕಾಗೆ ಅನುಕಂಪ
ದೇವಿಕಾಗೆ ಅನುಕಂಪ ನೆರವಿಗೆ ಬರುವ ಸಾಧ್ಯತೆ ಇದೆ. ಯಶೋಧಾ ಗಂಗಪ್ಪ ವಿರುದ್ಧ ಅವಿಶ್ವಾಸ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಈ ಹಿಂದೆ ಕೂಡ ಅಧ್ಯಕ್ಷೆ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ದೇವಿಕಾ ಬಗ್ಗೆ ಎಲ್ಲ ಪಕ್ಷಗಳ ಸದಸ್ಯರ ನಡುವೆ ಅನುಕಂಪದ ಮಾತು ಕೇಳಿ ಬರುತ್ತಿದೆ. ಜೆಡಿಎಸ್ ಶಾಸಕ ಶ್ರೀನಿವಾಸ್, ಮಾಜಿ ಶಾಸಕ ಎಚ್. ನಿಂಗಪ್ಪ ಕೂಡ ದೇವಿಕಾ ಪರ ಮೃದು ನಿಲುವು ತಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದೇವಿಕಾಗೆ ಗೆಲುವಿನ ದಡದಲ್ಲಿ ನಿಂತಿದ್ದಾರೆ.

11 ತಿಂಗಳ ಅಧಿಕಾರ
ಅಧಿಕಾರಕ್ಕೆ ಯಾರೇ ಬರಲಿ ಅಧಿಕಾರದ ಅವಧಿ ಮಾತ್ರ ಹನ್ನೊಂದು ತಿಂಗಳು. 21-2-2013ಕ್ಕೆ ನಗರಸಭೆ ಐದು ವರ್ಷದ ಅಧಿಕಾರ ಅವಧಿ ಕೊನೆಗೊಳ್ಳಲಿದೆ. ಇದರ ನಡುವೆ ಜೂನ್‌ಗೆ ಮೊದಲೇ ನಗರಸಭೆಯನ್ನು ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ತಯಾರಿ ನಡೆಸಿದೆ. ಕಾರ್ಪೊರೇಷನ್ ಕಾಯ್ದೆ 503 ಪ್ರಕಾರ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕಾಗುತ್ತದೆ. ಒಮ್ಮೆ ಪಾಲಿಕೆಯಾಗಿ ಘೋಷಣೆಯಾದರೆ ಅಧ್ಯಕ್ಷರ ಅಧಿಕಾರ ಅವಧಿ ಕೂಡ ಮೊಟುಕಾಗಲಿದೆ.

ಅತಂತ್ರ ನಗರಸಭೆ
ಈ ಸಲ ನಗರಸಭೆ ಹೊಸದಾಗಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅತಂತ್ರ ಸ್ಥಿತಿಯಲ್ಲಿದೆ. ಯಾವ ಅಧ್ಯಕ್ಷರು ಕೂಡ ಪೂರ್ಣಾವಧಿ ಅಧಿಕಾರ ನಡೆಸದೆ ದಾಖಲೆ ನಿರ್ಮಿಸಿದ್ದಾರೆ.
ಮೊದಲ ಮೂವತ್ತು ತಿಂಗಳ ಅವಧಿಯಲ್ಲಿ ಅಸ್ಲಾಂ ಪಾಷಾ, ರವೀಶ್, ಎಂ.ಪಿ.ಮಹೇಶ್ ಅಧ್ಯಕ್ಷರಾಗಿದ್ದರು. ಎರಡನೇ ಅವಧಿಯಲ್ಲಿ ಮೊದಲ 18 ತಿಂಗಳು ಯಶೋಧಾ ಗಂಗಪ್ಪ ಅಧ್ಯಕ್ಷೆಯಾಗಿದ್ದರು. ವಿಪರ್ಯಾಸವೆಂದರೆ ಇವರಲ್ಲಿ ಮಹೇಶ್ ಹೊರತುಪಡಿಸಿದರೆ ಮೂವರು ಅವಿಶ್ವಾಸದ ಮೂಲಕ ಅಧಿಕಾರ ಕಳೆದುಕೊಂಡಿದ್ದಾರೆ.

ಬಲಾ ಬಲ
ಒಟ್ಟು 35 ಸದಸ್ಯರ ಬಲ ಇರುವ ನಗರಸಭೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 9 (ಇವರಲ್ಲಿ ನಾಲ್ವರು ಸದಸ್ಯರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ), ಜೆಡಿಎಸ್ 9, ಸಿಪಿಎಂ 1 (ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ) ಹಾಗೂ ಮೂವರು ಪಕ್ಷೇತರರು ಇದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT