ADVERTISEMENT

ನೀರಿನ ಕೊರತೆ: ಒಣಗಿದ ಭತ್ತ

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 7:55 IST
Last Updated 29 ಜೂನ್ 2012, 7:55 IST
ನೀರಿನ ಕೊರತೆ: ಒಣಗಿದ ಭತ್ತ
ನೀರಿನ ಕೊರತೆ: ಒಣಗಿದ ಭತ್ತ   

ತುರುವೇಕೆರೆ: ನೀರಾವರಿ ಸೌಲಭ್ಯವಿಲ್ಲದೆ ನಲವತ್ತು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಭತ್ತ ಸಂಪೂರ್ಣ ಒಣಗುತ್ತಿದ್ದು, ಮಾಯಸಂದ್ರ ಕೆರೆ ಅಚ್ಚುಕಟ್ಟು ಪ್ರದೇಶದ 50ಕ್ಕೂ ಹೆಚ್ಚು ರೈತರು ಕಂಗಾಲಾಗಿದ್ದಾರೆ.

ಮಾಯಸಂದ್ರ ಕೆರೆ ಅಚ್ಚುಕಟ್ಟು ಪ್ರದೇಶದ ಕಟ್ಟೆಗದ್ದೆ, ಕರಿಕಲ್ಲುಹಳ್ಳಿ ಪ್ರದೇಶದಲ್ಲಿ ರೈತರು ವಾಡಿಕೆಯಂತೆ ಕಳೆದ ಫೆಬ್ರುವರಿಯಲ್ಲಿ ಜಯಾ ಭತ್ತ ನಾಟಿ ಮಾಡಿದ್ದಾರೆ. ಸುಮಾರು 5 ತಿಂಗಳಲ್ಲಿ ಜಯಾ ತಳಿ ಕೊಯ್ಲಿಗೆ ಬರುತ್ತದೆ. ಆರಂಭದಲ್ಲಿ ಗದ್ದೆಗೆ ನೀರು ಹರಿದು ನಾಟಿ ಮಾಡಿದ್ದ ಬೆಳೆ ಆಶಾದಾಯಕ ಬೆಳವಣಿಗೆ ಕಂಡಿತ್ತು. ಸುಮಾರು 1200 ಕ್ಟಿಂಟಲ್‌ಗೂ ಹೆಚ್ಚು ಭತ್ತ ಕೈ ಸೇರುವ ನಿರೀಕ್ಷೆ ಇತ್ತು.

ಆ ನಂತರ ಏಕಾಏಕಿ ಕಾಲುವೆಯಲ್ಲಿ ನೀರು ನಿಂತು ಹೋದ ಕಾರಣ ಕೈಗೆ ಬಂದದ್ದು ಬಾಯಿಗಿಲ್ಲ ಎನ್ನುವಂತಾಗಿದೆ. ಹೇಮಾವತಿ ಕಾಲುವೆಯಿಂದ ಕೆರೆ ಮೂಲಕ ಹರಿದು ಬರುವ ನೀರು ನಿಲ್ಲಲು ಕಳಪೆ ನಿರ್ವಹಣೆ ಕಾರಣ. ಕೆರೆ ತೂಬಿನ ಕಾಲುವೆಗಳನ್ನು, ಉಪಕಾಲುವೆಗಳನ್ನು ಸೋಸಿಲ್ಲ. ಹೀಗಾಗಿ ನೀರು ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಗಳಿಗೆ (ಟೈಲ್ ಎಂಡ್‌ಗೆ) ಹರಿಯುತ್ತಿಲ್ಲ. ಭತ್ತ ತೆನೆಗಟ್ಟುವ ಹಂತದಲ್ಲೇ ನೀರಿನ ಕೊರತೆಯಿಂದ ಬಾಡಿ ನಿಂತಿವೆ. ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಇತ್ತ ತಲೆ ಹಾಕಿಲ್ಲ ಎಂದು ಬಾಡಿ ನಿಂತ ತಮ್ಮ ಗದ್ದೆಗಳನ್ನು ತೋರಿಸಿ ನಿಟ್ಟುಸಿರಿಟ್ಟರು.

ನಮ್ಮ ದುರದೃಷ್ಟಕ್ಕೆ ಸಾಕಷ್ಟು ಮಳೆಯೂ ಬೀಳಲಿಲ್ಲ. ಖಾಸಗಿ ಜನರೇಟರ್‌ಗಳನ್ನು ಬಾಡಿಗೆಗೆ ಹೊತ್ತು ತಂದು ದೂರದ ಬಾವಿಯಿಂದ ನೀರು ಹೊಡೆಯುವ ಪ್ರಯತ್ನ ಮಾಡಿ ಕೈಚೆಲ್ಲಿ ಕೂತಿದ್ದೇವೆ. ಎಕರೆಗೆ ಒಂದು ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುತ್ತದೆ. ಅಷ್ಟೊಂದು ಹಣವನ್ನು ಎಲ್ಲಿಂದ ತರುವುದು? ಹೇಮಾವತಿ ನಾಲಾ ವಿಭಾಗದ ಎಂಜಿನಿಯರ್‌ಗಳು ದುರಸ್ತಿ ಕಾಮಗಾರಿಗೆಂದು ಬಿಲ್ ಮಾಡಿ ಹಣ ಪಡೆದಿದ್ದಾರೆ ಎಂದು ರೈತರಾದ ರಂಗರಾಜ್, ನಂದೀಶ್, ಶಿವಣ್ಣ, ಸಿದ್ದರಾಮಯ್ಯ, ದೇವರಾಜು, ವೆಂಕಟೇಶ್, ನಂಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.