ADVERTISEMENT

ನೇರ ಖರೀದಿಗೆ ಪ್ರೋತ್ಸಾಹ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 11:00 IST
Last Updated 10 ಸೆಪ್ಟೆಂಬರ್ 2011, 11:00 IST

ತುಮಕೂರು: ವಿಶೇಷ ಹಣಕಾಸು ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ಪೂರೈಸಲು ಉದ್ದೇಶಿಸಿರುವ ಮೆರಿಟ್, ಸಿಂಗಾರ್, ಉಷಾ ಕಂಪೆನಿಗಳ ಹೊಲಿಗೆ ಯಂತ್ರಕ್ಕೆ ರೂ. 5000ಕ್ಕೂ ಹೆಚ್ಚು ಹಣ ನಿಗದಿಪಡಿಸಿರುವ ಬಗ್ಗೆ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು.

ಮಾರುಕಟ್ಟೆಯಲ್ಲಿ ಹೊಲಿಗೆ ಯಂತ್ರದ ಬೆಲೆ ರೂ. 3800ಕ್ಕೂ ಕಡಿಮೆ ಇದೆ. ಆದರೂ ಟೆಂಡರ್ ಹಾಕಿರುವ ಸಂಸ್ಥೆಗಳು ರೂ. 5000ಕ್ಕೂ ಹೆಚ್ಚು ನಮೂದಿಸಿವೆ ಎಂದು ಸದಸ್ಯರು ದೂರಿದರು. ಈ ಕುರಿತು ಸಂಬಂಧಿಸಿದ ಹೊಲಿಗೆ ಯಂತ್ರಗಳ ಕಂಪೆನಿಗಳಿಗೆ ಪತ್ರ ಬರೆದು ದರ ವಿಚಾರಿಸಿ ನಂತರ ಪೂರೈಕೆದಾರರಿಗೆ ಹಣ ಪಾವತಿಸಲು ಆಯುಕ್ತರಿಗೆ ಅಧಿಕಾರ ನೀಡಲಾಯಿತು.

ವಿಶೇಷ ಹಣಕಾಸು ಮುಕ್ತ ನಿಧಿ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡದ ಯುವತಿ, ಯುವಕರಿಗೆ ಕಂಪ್ಯೂಟರ್ ಸರಬರಾಜು ಮಾಡಲು ಕರೆದಿರುವ ಟೆಂಡರ್‌ನಲ್ಲೂ ಸರಬರಾಜುದಾರರು ಹೆಚ್ಚು ದರ ನಮೂದಿಸಿರುವ ಬಗ್ಗೆ `ಪ್ರಜಾವಾಣಿ~ ಕಳೆದ ಗುರುವಾರ ಮುಖಪುಟದಲ್ಲಿ ಪ್ರಕಟಿಸಿದ್ದ ಸುದ್ದಿಯನ್ನು ಸದಸ್ಯ ಮಹೇಶ್ ಪ್ರಸ್ತಾಪಿಸಿದರು.

ಮಾರುಕಟ್ಟೆ ಬೆಲೆಗಿಂತ ರೂ. 5000ಕ್ಕೂ ಹೆಚ್ಚ ದರ ಪಾವತಿಸಿ ಕಂಪ್ಯೂಟರ್‌ಗಳನ್ನು ಖರೀದಿಸುವ ಔಚಿತ್ಯವಾದರೂ ಏನು? ಎಂದು ಪ್ರಶ್ನಿಸಿದರು. ಇದಕ್ಕೆ ಪರ್ಯಾಯ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ಜವಾಬ್ದಾರಿ ಹೊತ್ತಿರುವವರು ಅವ್ಯವಹಾರಕ್ಕೆ ನೆರವಾಗಿರುವುದು ಸಾಬೀತಾದರೆ ಅಂಥವರ ಸಂಬಳದಿಂದ ವ್ಯತ್ಯಾಸದ ಹಣ ಮುರಿದುಕೊಳ್ಳಲಾಗುವುದು ಎಂದು ಆಯುಕ್ತ ತಿವಾರಿ ಹೇಳಿದರು.

ಮುಂದಿನ ದಿನಗಳಲ್ಲಿ ಟೆಂಡರ್ ಬದಲಿಗೆ ಕೇಂದ್ರ ಸರ್ಕಾರದ ಡಿ.ಜಿ.ಎಸ್ ಅಂಡ್ ಡಿ ಸಂಸ್ಥೆಯಿಂದ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೇರವಾಗಿ ಖರೀದಿಸುವ ಪ್ರಸ್ತಾಪವನ್ನು ಆಯುಕ್ತ ತಿವಾರಿ ಸಭೆಯ ಮುಂದಿಟ್ಟರು. ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.

ರುಚಿಕೆಟ್ಟ ಊಟ: `ಊಟವಿಲ್ಲದೆ ಬರ‌್ತೀವಾ? ಒಳ್ಳೆ ಊಟ ಹಾಕ್ಸಕ್ಕೆ ಆಗಲ್ವಾ? ಒಳ್ಳೆ ಊಟಕ್ಕೆ ಆರ್ಡರ್ ಮಾಡಿ ಬಿಲ್ ನಾನು ಕೊಡ್ತೀನಿ. ಯಾಕ್ರೀ ಹೀಗೆ ಮಾಡ್ತೀರಿ?~ ಎಂದು ನಗರಸಭೆ ಉಪಾಧ್ಯಕ್ಷ ಅಸ್ಲಾಂ ಪಾಷ, ಸದಸ್ಯ ತರುಣೇಶ್ ಅಧಿಕಾರಿಗಳ ವಿರುದ್ಧ ಗುಡುಗಿದರು.

ಮಧ್ಯಾಹ್ನ ಸುಮಾರು 15 ನಿಮಿಷ ಊಟದ್ದೇ ಬಿಸಿಬಿಸಿ ಚರ್ಚೆಯಾಯಿತು. ಉಪ್ಪು ಹೆಚ್ಚಾದ ಬಿಸಿಬೇಳೆಬಾತ್, ಸಪ್ಪೆ ಮೊಸರನ್ನದ ಬಗ್ಗೆ ಎಂಜಿನಿಯರ್ ಶಿವಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡ ಸದಸ್ಯ ಅಸ್ಲಾಂ ಪಾಷ, ಊಟ ಬಿಟ್ಟು ತೆರಳಿದರು.

ಮೂರನೇ ದಿನಕ್ಕೆ ಸಭೆ
ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ನಗರಸಭೆ ಸಮಾನ್ಯ ಸಭೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.