ADVERTISEMENT

ನ್ಯಾಯಬೆಲೆ ಅಂಗಡಿಗೆ ಬೀಗ: ಧರಣಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 6:10 IST
Last Updated 3 ಅಕ್ಟೋಬರ್ 2012, 6:10 IST

ಶಿರಾ: ಎಪಿಎಲ್ ಪಡಿತರದಾರರಿಗೆ ಅಕ್ಕಿ ಪೂರೈಕೆಯಾಗುತ್ತಿದ್ದರೂ; ಹತ್ತು ತಿಂಗಳಿಂದ ಅಕ್ಕಿ ನೀಡದಿದ್ದರಿಂದ ಆಕ್ರೋಶಗೊಂಡ ಪಡಿತದಾರರು ನ್ಯಾಯಬೆಲೆ ಅಂಗಡಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಯಾದಲಡಕು ಗ್ರಾಮದಲ್ಲಿ ಮಂಗಳವಾರ ನಡೆಯಿತು.

ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ 63 ಎಪಿಎಲ್ ಪಡಿತರ ಕುಟುಂಬದವರಿಗೆ ಕಳೆದ ಜನವರಿ ತಿಂಗಳಿನಿಂದ ಪ್ರತಿ ಕಾರ್ಡ್‌ಗೆ 10 ಕೆ.ಜಿ ಅಕ್ಕಿಯನ್ನು ಕೆ.ಜಿಗೆ 13 ರೂಪಾಯಿಯಂತೆ ನ್ಯಾಯ ಬೆಲೆ ಅಂಗಡಿ ಮಾಲೀಕ ವಿತರಿಸಬೇಕಿದ್ದು, ವಿತರಿಸದೆ ನಿಮ್ಮ ಕಾರ್ಡ್‌ಗಳನ್ನು ಸರ್ಕಾರ ರದ್ದು ಮಾಡಿದೆ ಎಂದು ಸುಳ್ಳು ಹೇಳುತ್ತಿದ್ದ ಎನ್ನಲಾಗಿದೆ.

ಇದರಿಂದ ಪಡಿತದಾರರು ತಾಲ್ಲೂಕಿನ ಆಹಾರ ಸರಬರಾಜು ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ನಿಮ್ಮ ಕಾರ್ಡ್ ರದ್ದು ಪಡಿಸಿಲ್ಲ. ಅದಕ್ಕೆ ಪ್ರತಿ ತಿಂಗಳ ಪಡಿತರ ನೀಡಲಾಗಿದೆ ಎಂದು ಉತ್ತರಿಸಿದ್ದರು ಎಂದು ತಿಳಿದು ಬಂದಿದೆ.

ಇದರಿಂದ ಕೆರಳಿದ ಗ್ರಾಮಸ್ಥರು ಅಕ್ಕಿ ನೀಡದ ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಅಂಗಡಿಗೆ ಬೀಗ ಹಾಕಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದ ಬೆಸ್ತು ಬಿದ್ದ ನ್ಯಾಯಬೆಲೆ ಅಂಗಡಿ ಮಾಲೀಕ ಪಡಿತರ ನೀಡದೆ ಅಲ್ಲಿಂದ ಕಾಲ್ಕಿತ್ತ. ಹಲವು ತಿಂಗಳುಗಳಿಂದ ನಮಗೆ ಅಕ್ಕಿ ನೀಡದೆ ಅಕ್ರಮವಾಗಿ ಮಾರಾಟ ಮಾಡಿಕೊಂಡಿದ್ದು, ಜನವರಿ ತಿಂಗಳಿನಿಂದ ನೀಡಬೇಕು. ಅಲ್ಲಿವರೆಗೂ ಬೀಗ ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪಾಂಡುರಂಗಪ್ಪ, ತಿಪ್ಪೇಸ್ವಾಮಿ, ಮಹಾಲಿಂಗಪ್ಪ, ಶಾಂತರಾಜು, ಮುದ್ದಣ್ಣ ಮತ್ತಿತರರು ಪಾಲ್ಗೊಂಡಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.