ADVERTISEMENT

ಬಿರುಗಾಳಿ ಮಳೆಗೆ ಮರಗಳು ಧರೆಗೆ

ಜಿಲ್ಲೆಯ ವಿವಿಧೆಡೆ ಧಾರಾಕಾರವಾಗಿ ಸುರಿದ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 9:14 IST
Last Updated 22 ಮೇ 2018, 9:14 IST
ಮಳೆಗಾಳಿಗೆ ಕೊರಟಗೆರೆ ಪಟ್ಟಣದ ಲೋಕೋಪಯೋಗಿ ಇಲಾಖೆ ಬಳಿ ನೆಲಕ್ಕುರುಳಿದ ಮರ
ಮಳೆಗಾಳಿಗೆ ಕೊರಟಗೆರೆ ಪಟ್ಟಣದ ಲೋಕೋಪಯೋಗಿ ಇಲಾಖೆ ಬಳಿ ನೆಲಕ್ಕುರುಳಿದ ಮರ   

ಕೊರಟಗೆರೆ: ಸೋಮವಾರ ಸಂಜೆ ಬಿರುಗಾಳಿ ಸಹಿತ ಬಾರಿ ಮಳೆಗೆ ಪಟ್ಟಣ ಸೇರಿದಂತೆ ವಿವಿದೆಡೆಗಳಲ್ಲಿ ವಿದ್ಯುತ್ ಕಂಬ, ಮರಗಳು ಧರೆಗುಳಿದವು.

ಪಟ್ಟಣದ ಶಿವಗಂಗಾ ಚಿತ್ರಮಂದಿರದ ಮುಂಭಾಗ ಲೋಕೋಪಯೋಗಿ ಇಲಾಖೆ ಬಳಿ ಗಾಳಿಗೆ ಬೃಹದಾಕಾರದ ಮರ ಬಿದ್ದ ಕಾರಣ 4 ವಿದ್ಯುತ್ ಕಂಬ ಮುರಿದು ಬಿದ್ದಿವೆ. ಪಟ್ಟಣದ ಹೊರ ವಲಯದ ಊರ್ಡಿಗೆರೆ ಕ್ರಾಸ್, ಕಾಶಾಪುರ ಬಳಿ ದೊಡ್ಡಮರಗಳು ರಸ್ತೆಗೆ ಉರುಳಿವೆ. ಇದರಿಂದಾಗಿ ಸಂಜೆ ಪಟ್ಟಣದಲ್ಲಿ ಸಂಚಾರ ಅಸ್ತವ್ಯಸ್ತ ಆಗಿತ್ತು.

ಸುಮಾರು ಒಂದು ಗಂಟೆ ಬೀಸಿದ ಬಾರಿ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅರಣ್ಯ ಇಲಾಖೆ ಹಾಗೂ ಬೆಸ್ಕಾಂ ಇಲಾಖೆ ಸಿಬ್ಬಂದಿ ಮಳೆ ಬಿಟ್ಟ ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದರು.

ADVERTISEMENT

ಮಳೆಗಾಳಿಯಿಂದಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ದೂರವಾಣಿ ಸಂಪರ್ಕ ಕಡಿತವಾಗಿತ್ತು. ಕೆಲವೆಡೆ ಮನೆಗಳ ಚಾವಣಿಯ ಶೀಟ್‌ಗಳು ಹಾರಿ ಹೋಗಿದ್ದವು.

ಮಳೆ; ಮನೆಗಳಿಗೆ ನುಗ್ಗಿದ ನೀರು

ಮಧುಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆ ಮಳೆಯಾಗಿದೆ. ಗುಡುಗು, ಗಾಳಿ ಆರ್ಭಟ ಹೆಚ್ಚಾಗಿತ್ತು. ಧಾರಾಕಾರವಾಗಿ ಸುರಿದ ಮಳೆಯಿಂದ ಕಾಲುವೆ, ಹಳ್ಳಗಳಲ್ಲಿ ನೀರು ಹರಿಯಿತು.

ಪಟ್ಟಣದ ಕೆಲವು ತಗ್ಗು ಪ್ರದೇಶದಲ್ಲಿ ಮಳೆ ನೀರು ಮನೆಗಳಿಗೆ ನೀರು ನುಗ್ಗಿತ್ತು. ನೀರನ್ನು ಮನೆ ಮಂದಿ ಎಲ್ಲರೂ ಹೊರ ಹಾಕುವಲ್ಲಿ ನಿರತರಾದರು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅಡುಗೆ ಮಾಡಲು ಪರದಾಡಿದರು. ಚರಂಡಿಗಳಲ್ಲಿ ಮಳೆ ನೀರು ತುಂಬಿ ರಸ್ತೆಯಲ್ಲಿ ಹರಿಯುತ್ತಿದ್ದರಿಂದ ರಸ್ತೆಗಳೇ ಚರಂಡಿಯಂತೆ ಗೋಚರಿಸಿದವು.

ಗುಬ್ಬಿ ಎಲ್ಲೆಡೆ ಮಳೆ

ಗುಬ್ಬಿ: ತಾಲ್ಲೂಕಿನ ಬಹುತೇಕ ಎಲ್ಲ ಕಡೆ ಸೋಮವಾರ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಯಿತು. ಹಾಗಲವಾಡಿ, ಗುಡ್ಡೇನಹಳ್ಳಿ, ಕಲ್ಲೂರು, ನಿಟ್ಟೂರು, ಕೊಂಡ್ಲಿಕ್ರಾಸ್‌ನಲ್ಲಿ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.