ADVERTISEMENT

ಬಿಸಿಲ ಝಳ: ಜೀವಜಲಕ್ಕೆ ತತ್ವಾರ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 7:45 IST
Last Updated 10 ಮಾರ್ಚ್ 2012, 7:45 IST

ತುಮಕೂರು: ಬರ, ಬಿಸಿಲಿನ ಬೇಗೆಯಲ್ಲಿ ಕುದಿಯುತ್ತಿರುವ ಜಿಲ್ಲೆಯ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಇನ್ನಿಲ್ಲದ ಹಾಹಾಕಾರ. ಜಿಲ್ಲೆ ಯಲ್ಲಿ ಇದುವರೆಗೂ ಎಷ್ಟು ವಸತಿ ಪ್ರದೇಶಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದೆ ಎಂಬ ಸಮಗ್ರ ಮಾಹಿತಿ ಕ್ರೋಡೀಕರಿಸಲು ಕೂಡ ಜಿಲ್ಲಾ ಪಂಚಾಯತ್ ಮುಂದಾಗಿಲ್ಲ.

ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಕುಡಿಯುವ ತುರ್ತು ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಿಲ್ಲ. ನೀರಿನ ಸಮಸ್ಯೆಗೆ ತುರ್ತು ಕಾಮಗಾರಿ ಕೈಗೊಳ್ಳುವ ಅಧಿಕಾರ ಜಿಲ್ಲಾಧಿಕಾರಿ, ಜಿ.ಪಂ, ಜಿ.ಪಂ. ಎಂಜಿನಿಯರ್ ವಿಭಾಗಕ್ಕೆ ಹಂಚಿಕೆಯಾಗಿದ್ದು, ಉನ್ನತ ಅಧಿಕಾರಿಗಳ ನಡುವೆ ಪರಸ್ಪರ ಸಹಕಾರ ವೇ ಇಲ್ಲವಾಗಿದೆ. ಕೆಲಸ ಕುಂಟುತ್ತಾ ಸಾಗುತ್ತಿದೆ ಎನ್ನುತ್ತಿವೆ ಜಿ.ಪಂ. ಮೂಲಗಳು.

ಎರಡು ದಿನಗಳಿಂದಲೂ ನಗರದಲ್ಲಿ ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಕುಡಿಯುವ ನೀರಿನ ಪ್ರಗತಿ ಅವರನ್ನೇ ಚಿಂತಾಕ್ರಾಂತರನ್ನಾಗಿ ಮಾಡಿದೆ.
 
ಕಳೆದ ವರ್ಷದ ಬೇಸಿಗೆಯಲ್ಲಿ ಜಿ.ಪಂ. ಎಂಜಿನಿಯರ್ ವಿಭಾಗಕ್ಕೆ ಬಿಡುಗಡೆ ಮಾಡಿದ ರೂ. 4 ಕೋಟಿಯಲ್ಲಿ ಇಲ್ಲಿವರೆಗೂ ಖರ್ಚಾಗಿರುವುದು ಕೇವಲ ರೂ. 3 ಕೋಟಿ ಎಂಬ ಅಂಶ ಬೆಳಕಿಗೆ ಬಂದಿದೆ.
ಇದರ ನಡುವೆಯೇ, ಎಷ್ಟು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.
 
ಎಷ್ಟು ಕೊಳವೆ ಬಾವಿ ಕೊರೆಸಲಾಗಿದೆ ಎಂಬ ಸಮಗ್ರ ಮಾಹಿತಿ ಕಲೆ ಹಾಕುವ ಗೋಜಿಗೂ ಜಿಲ್ಲಾಡಳಿತ ಮುಂದಾಗಿಲ್ಲ. ಕಿರಿಯ ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡ ಪರಿಣಾಮ ತುರ್ತು ಕಾಮಗಾರಿಗಳು ನಡೆಯು ತ್ತಿಲ್ಲ. ಬರಕ್ಕೆ ಜಿಲ್ಲೆ ತುತ್ತಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಮೊದಲಿನಿಂದಲೂ ಇದೆ.
 
ಆದರೂ ಜಿ.ಪಂ. ಎಂಜಿನಿಯರ್ ವಿಭಾಗ ಕಳೆದ ಬೇಸಿಗೆಯಲ್ಲಿ ಬಿಡುಗಡೆಯಾದ ಹಣವನ್ನೇ ಬಳಕೆ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲದಿರುವುದು ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.

ಹಳ್ಳಿ-ಹಳ್ಳಿಗಳಲ್ಲಿ ನೀರಿನ ಹಾಹಾಕಾರ ಉಂಟಾಗಿದ್ದರೂ ಈವರೆಗೂ ಜಿಲ್ಲೆಯಲ್ಲಿ ಕೇವಲ 40 ಕೊಳವೆ ಬಾವಿ ಮಾತ್ರ ಕೊರೆಸಲಾಗಿದೆ. ಮೂಲಗಳ ಪ್ರಕಾರ, ತುಮಕೂರು ತಾಲ್ಲೂಕಿಗೆ 70, ಗುಬ್ಬಿ 30, ಕುಣಿಗಲ್ 50, ತುರುವೇಕೆರೆ 35, ಶಿರಾ 55, ಮಧುಗಿರಿ 20, ಕೊರಟಗೆರೆ 18, ಪಾವಗಡ 40, ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ತುರ್ತಾಗಿ 40 ಕೊಳವೆ ಬಾವಿ ಕೊರೆಸಬೇಕಾಗಿದೆ ಎಂದು ಅಂದಾಜಿಸಲಾಗಿದೆ.

ಕುಡಿಯುವ ನೀರಿನ ತುರ್ತು ಕಾಮಗಾರಿ ಕೈಗೊಳ್ಳಲು ಶಾಸಕರ ಅಧ್ಯಕ್ಷೆಯ ಕಾರ್ಯಪಡೆಗೆ ಪ್ರತಿ ತಾಲ್ಲೂಕಿಗೆ ರೂ. 35 ಲಕ್ಷ ನೀಡಲಾಗಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ರೂ. 5 ಕೋಟಿ ಹಣ ಇದೆ. ಆದರೂ ಅಧಿಕಾರಿಗಳು ಕಾಮಗಾರಿ ನಿರ್ವಹಣೆಗೆ ಬೇಕಾದ ತಾಂತ್ರಿಕ ಕೆಲಸ ನಿಧಾನ ಮಾಡುತ್ತಿರುವುದ ತುರ್ತು ಕೆಲಸಕ್ಕೆ ಅಡ್ಡಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಹಣ ಬಿಡುಗಡೆ ಮಾಡಲು ಅಧಿಕಾರಿಗಳು ನಿಧಾನ ಮಾಡುತ್ತಿದ್ದಾರೆ ಎಂದು ಬೋರ್‌ವೆಲ್ ಏಜೆನ್ಸಿಗಳು ಕೂಡ ಕೊಳವೆಬಾವಿ ಕೊರೆಯಲು ಮುಂದಾಗುತ್ತಿಲ್ಲ. ಮಾರ್ಚ್ 15ರೊಳಗೆ ಈಗಾಗಲೇ ಅಂದಾಜಿಸಿರುವ ಕೊಳವೆಬಾವಿ ಕೊರೆಯುವಂತೆ ಕಟ್ಟುನಿಟ್ಟಿನ ಆದೇಶ ಇದ್ದರೂ ಕೊರೆಸಲು ಬೋರ್‌ವೆಲ್ ಲಾರಿಗಳಿಗೆ ಹುಡುಕಾಡಬೇಕಾದ ಸ್ಥಿತಿ ಜಿಲ್ಲೆಯಲ್ಲಿ ಉದ್ಭವಿಸಿದೆ ಎಂದು ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಸಾಕಷ್ಟು ಕಡೆಗಳಲ್ಲಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಕೊರಟಗೆರೆ ತಾಲ್ಲೂಕಿನ ಸೂರೇನಹಳ್ಳಿಯಲ್ಲಿ 900 ಅಡಿವರೆಗೂ ಕೊರೆಸಿದರೂ ನೀರು ಬರಲಿಲ್ಲ. ಕೊಳವೆಬಾವಿ ಕೊರೆದರೂ ನೀರು ಸಿಗದಿರುವುದು ಸಮಸ್ಯೆ ಬಿಗಡಾಯಿಸಲು ಕಾರಣವಾಗುತ್ತಿದೆ ಎಂದು ಕೊರಟಗೆರೆ ತಹಶೀಲ್ದಾರ್ ವಿ.ಪಾತರಾಜು ಹೇಳುತ್ತಾರೆ.

ಪಾವಗಡ ತಾಲ್ಲೂಕಿನ 101 ಗ್ರಾಮಗಳಲ್ಲಿ ನೀರಿನ ಅಭಾವ ಇದೆ. 40 ಗ್ರಾಮಗಳಲ್ಲಿ ತೀವ್ರ ಅಭಾವ ಕಾಣಿಸಿಕೊಂಡಿದ್ದು, ತಕ್ಷಣವೇ ನೀರು ಕೊಡಬೇಕಾಗಿದೆ. ಶಿರಾ ತಾಲ್ಲೂಕಿನಲ್ಲಿ 339 ಕೊಳವೆ ಬಾವಿಗಳಿಗೆ ಹೆಚ್ಚುವರಿಯಾಗಿ ಪೈಪ್ ಅಳವಡಿಸಲು ಅಂದಾಜು ಪಟ್ಟಿ ತಯಾರಿಸಲಾಗಿದೆ.
 
ಮಧುಗಿರಿ ತಾಲ್ಲೂಕಿನಲ್ಲಿ 145 ಹಳ್ಳಿಗಳಲ್ಲಿ ಸಮಸ್ಯೆಯಾಗಿದೆ. ಗುಬ್ಬಿ ತಾಲ್ಲೂಕಿನ ಚೇಳೂರು, ಹಾಗಲವಾಡಿ ಹೋಬಳಿಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದೆ ಎಂದು ಆಯಾಯಾ ತಾ.ಪಂ. ಮೂಲಗಳು ತಿಳಿಸಿವೆ.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎಲ್ಲ ತಾಲ್ಲೂಕಿನಲ್ಲಿ ಪ್ರತ್ಯೇಕ ಸಹಾಯವಾಣಿ ಆರಂಭಿಸಲಾಗಿದೆ. ಆದರೆ ಸಾರ್ವಜನಿಕರ ದೂರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.
`10 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ.

ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೊಳವೆಬಾವಿ ಮೋಟರ್ ಪೈಪ್ ಸಮೇತ ಪಾತಾಳಕ್ಕೆ ಕುಸಿದುಬಿದ್ದಿದೆ. ಮತ್ತೊಂದು ಹೊಸ ಕೊಳವೆಬಾವಿ ಕೊರೆಸಬೇಕು. ಗ್ರಾಮದಲ್ಲಿ 75 ಮನೆಗಳ ಪಾಡು ಕಷ್ಟದಲ್ಲಿದೆ~ ಎಂದು ತುರುವೇಕೆರೆ ತಾಲ್ಲೂಕು ವಡವನಘಟ್ಟದ ಎಂಕಾಂ ವಿದ್ಯಾರ್ಥಿ ಮಹೇಶ್‌ಕುಮಾರ್ `ಪ್ರಜಾವಾಣಿ~ಗೆ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.