ADVERTISEMENT

ಮಕ್ಕಳಿಗೆ ಮಾರಕವಾದ ಹುಚ್ಚರಳು

ಆರ್.ಚೌಡರೆಡ್ಡಿ
Published 2 ಅಕ್ಟೋಬರ್ 2017, 9:47 IST
Last Updated 2 ಅಕ್ಟೋಬರ್ 2017, 9:47 IST
ಶ್ರೀನಿವಾಸಪುರ ಹೊರ ವಲಯದ ಮಾವಿನ ತೋಟದ ಬೇಲಿಯೊಂದರಲ್ಲಿ ಬೆಳೆದಿರುವ ಹುಚ್ಚರಳು ಗಿಡದಲ್ಲಿ ಕಂಗೊಳಿಸುತ್ತಿರುವ ಕಾಯಿ
ಶ್ರೀನಿವಾಸಪುರ ಹೊರ ವಲಯದ ಮಾವಿನ ತೋಟದ ಬೇಲಿಯೊಂದರಲ್ಲಿ ಬೆಳೆದಿರುವ ಹುಚ್ಚರಳು ಗಿಡದಲ್ಲಿ ಕಂಗೊಳಿಸುತ್ತಿರುವ ಕಾಯಿ   

ಶ್ರೀನಿವಾಸಪುರ: ತಾಲ್ಲೂಕಿನ ಬಿಸನಹಳ್ಳಿ ಗ್ರಾಮದಲ್ಲಿ ಒಂದೆರಡು ವರ್ಷಗಳ ಹಿಂದೆ ಕೆಲವು ಮಕ್ಕಳು ಹುಚ್ಚು ಹರಳುಕಾಯಿ ತಿಂದು ವಾಂತಿ ಮಾಡಿ ಆತಂಕ ಸೃಷ್ಟಿಸಿದ್ದರು. ಅವರಿಗೆ ಸಕಾಲಿಕ ಔಷಧೋಪಚಾರ ದೊರಕಿಸಿಕೊಟ್ಟ ಫಲವಾಗಿ ಪ್ರಾಣಾಪಾಯದಿಂದ ಪಾರಾದರು. ತಡವಾಗಿದ್ದರೆ ಸಂಭವಿಸಬಹುದಾಗಿದ್ದ ಊಹಾತೀತ.

ಹೌದು, ಇಂದಿನ ಮಕ್ಕಳಿಗೆ ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬ ಅರಿವಿಲ್ಲ. ಗ್ರಾಮೀಣ ಮಕ್ಕಳೂ ಹೊರತಾಗಿಲ್ಲ. ಕಣ್ಣಿಗೆ ಆಕರ್ಷಕವಾಗಿ ಕಾಣುವ ಯಾವುದೇ ಕಾಯಿ ಅಥವಾ ಹಣ್ಣಾದರೂ ಪೂರ್ವಾಪರ ತಿಳಿಯದೆ ಬಾಯಿಗೆ ಹಾಕಿಕೊಳ್ಳುವರು. ಈ ಪರಿಪಾಠ ಅಪಾಯಕ್ಕೆ ಆಹ್ವಾನ ನೀಡುತ್ತದೆ.

ಹರಳಲ್ಲಿ ಎರಡು ವಿಧ. ಒಂದು ಸಾಮಾನ್ಯ ಹರಳು, ಇನ್ನೊಂದು ಹುಚ್ಚರಳು. ಸಾಮಾನ್ಯ ಹರಳು ಸಾಂಪ್ರದಾಯಿಕ ರಾಗಿ ಹೊಲದಲ್ಲಿ ಬೆಳೆಯುತ್ತದೆ. ಕೆಲವರು ದೊಡ್ಡ ಹರಳನ್ನು ಬದುಗಳ ಮೇಲೆ ಬೆಳೆಯುವುದುಂಟು. ಅದರ ಬೀಜದಿಂದ ಎಣ್ಣೆ ತೆಗೆದು ತಲೆಗೆ ಹಚ್ಚಿಕೊಳ್ಳುತ್ತಾರೆ. ಆದರೆ ಹುಚ್ಚರಳು ಎಲ್ಲೆಂದರಲ್ಲಿ ಸಮೃದ್ಧವಾಗಿ ಬೆಳೆಯುವ ಗಿಡ. ಇದರ ಕಾಯಿ ಹಣ್ಣಾದಾಗ ಹಳದಿ ಬಣ್ಣದಿಂದ ಕಂಗೊಳಿಸುತ್ತದೆ. ಇದು ವಿಷಕಾರಿ. ಅದರ ಸಿಪ್ಪೆ ಅಥವಾ ಬೀಜವನ್ನು ಸ್ವಲ್ಪ ತಿಂದರೂ ವಾಂತಿ ಶುರುವಾಗುತ್ತದೆ. ಸಕಾಲಿಕ ಚಿಕಿತ್ಸೆ ನೀಡದಿದ್ದರೆ ಪ್ರಾಣಕ್ಕೆ ಅಪಾಯ ತಪ್ಪಿದ್ದಲ್ಲ.

ADVERTISEMENT

ನಾಗದಾಳಿ, ಕ್ಯಾಕ್ಟಸ್‌ ಜಾತಿಗೆ ಸೇರಿದ ಒಂದು ಪೊದೆ. ಹಾವಿನ ಹೆಡೆಯಂಥ ದಪ್ಪ ಎಲೆಗಳ ಮೇಲೆ ಚೂಪಾದ ಮುಳ್ಳು ಹೊಂದಿರುತ್ತದೆ. ಇದರ ಕಾಯಿಯೂ ಹಣ್ಣಾದಾಗ ಕೆಂಪಗೆ ಗಮನ ಸೆಳೆಯುತ್ತದೆ. ಇದನ್ನು ಗ್ರಾಮೀಣ ಭಾಗದಲ್ಲಿ ಹುಡುಗರು ತಿನ್ನುವುದುಂಟು. ಅನುಭವ ಇಲ್ಲದಿದ್ದರೆ ಹಣ್ಣಿನ ಮುಂಭಾಗದಲ್ಲಿನ ಚೂಪಾದ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡರೆ ತೊಂದರೆ ಕೊಡುತ್ತದೆ. ಹಣ್ಣಿನ ರುಚಿಯಾದ ಕೆಂಪು ಭಾಗವನ್ನು ಸವಿಯಬೇಕಾದರೆ ಮೊದಲು ಮುಳ್ಳನ್ನು ಬೇರ್ಪಡಿಸಬೇಕು.

ಹಿಂದೆ ಗ್ರಾಮಗಳ ಸಮೀಪ ಕಾಡು ಇರುತ್ತಿತ್ತು. ಅದು ಗ್ರಾಮೀಣ ಜನರ ಬದುಕಿನ ಭಾಗವಾಗಿತ್ತು. ದನ ಮೇಯಿಸಲು, ಸೌದೆ ತರಲು, ಸಗಣಿ ಸಂಗ್ರಹಿಸಲು, ಕೃಷಿ ಚಟುವಟಿಕೆಗೆ ಅಗತ್ಯವಾದ ಸಲಕರಣೆ ತಯಾರಿಕೆಗೆ ಅಗತ್ಯವಾದ ಮರ ಮಟ್ಟು ತರಲು, ಅಣಬೆ, ಜೇನು ಮತ್ತಿತರ ಅರಣ್ಯ ಉತ್ಪನ್ನ ಸಂಗ್ರಹಿಸಲು ಒಂದಲ್ಲಾ ಒಂದು ಸಲ ಕಾಡಿನತ್ತ ಪಾದ ಬೆಳೆಸಬೇಕಾಗಿತ್ತು. ಹಿರಿಯರ ಜೊತೆ ಮಕ್ಕಳೂ ಹೆಜ್ಜೆ ಹಾಕುತ್ತಿದ್ದರು. ಹಿರಿಯರಿಂದ ಕಾಡಿನ ಪರಿಚಯವಾಗುತ್ತಿತ್ತು.

ಮರ, ಗಿಡಗಳ ಹೆಸರು ತಿಳಿಯುತ್ತಿತ್ತು. ವಿವಿಧ ಜಾತಿಯ ಕಾಯಿ, ಹಣ್ಣುಗಳ ಪರಿಚಯವೂ ಆಗುತ್ತಿತ್ತು. ಅವುಗಳ ಉಪಯೋಗದ ಬಗ್ಗೆ ತಿಳಿಯುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಬಯಲು ಸೀಮೆಯ ಮಕ್ಕಳು ಕಾಡಿನಿಂದ ವಂಚಿತರಾಗಿದ್ದಾರೆ. ಶಾಲೆ ಮತ್ತು ಮನೆ ಅವರ ವ್ಯವಹಾರಿಕ ಸ್ಥಳಗಳಾಗಿವೆ. ಹೋಂ ವರ್ಕ್‌ ಮನೆಯಿಂದ ಆಚೆ ಹೆಜ್ಜೆ ಇಡದಂತೆ ಮಾಡಿದೆ. ಹಿರಿಯರ ಬೆನ್ನುಹತ್ತಿ ಹೊರಗೆ ಹೋಗುವ ಮಕ್ಕಳ ಸಂಖ್ಯೆ ಅತ್ಯಲ್ಪ. ಹೀಗಾಗಿ ನಿಸರ್ಗ ವ್ಯವಹಾರ ಜ್ಞಾನದ ಕೊರತೆಯಾಗಿದೆ.

ಮಕ್ಕಳು ತಿನ್ನಬಾರದ ಹಣ್ಣು ತಿಂದು ಅಸ್ವಸ್ಥರಾದುದು ಬಿಸನಹಳ್ಳಿಗೆ ಸೀಮಿತವಾಗಿಲ್ಲ. ಮಾಹಿತಿ ಇಲ್ಲದಿದ್ದರೆ ಎಲ್ಲ ಕಡೆಗೂ ಅಪಾಯ ಎದುರಾಗುವುದು. ಮಕ್ಕಳು ಪುಸ್ತಕದ ಹುಳುಗಳಾದರೆ ಸಾಲದು. ನಿಸರ್ಗದ ಮಡಿಲಲ್ಲಿ ನಡೆದಾಡಬೇಕು. ಅಲ್ಲಿನ ಗಿಡ, ಮರ, ಬಳ್ಳಿಗಳ ಪರಿಚಯ ಮಾಡಿಕೊಳ್ಳಬೇಕು. ತಿನ್ನಬಹುದಾದ ಕಾರೆ, ಕುಡಿತಿ, ಬುಡಗಿ, ಕಾಸಿ ಹಣ್ಣುಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಈ ವಿಷಯದಲ್ಲಿ ಕಿರಿಯರಿಗೆ ಮಾರ್ಗದರ್ಶನ ಅಗತ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.