ADVERTISEMENT

ಮಧುಗಿರಿ: ಅಂಗವಿಕಲರ ಧರಣಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 9:40 IST
Last Updated 17 ಅಕ್ಟೋಬರ್ 2012, 9:40 IST

ಮಧುಗಿರಿ: ಅಂಗವಿಕಲರ ವೈದ್ಯಕೀಯ ದೃಢೀಕರಣ ಪತ್ರ ವಿತರಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಅಂಗವಿಕಲರು ಮಂಗಳವಾರ ಪ್ರತಿಭಟಿಸಿದರು.

ತಾಲ್ಲೂಕಿನ ಅಂಗವಿಕಲರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಎರಡನೇ ಮಂಗಳವಾರ ವೈದ್ಯಕೀಯ ದೃಢೀಕರಣ ಪತ್ರ ನೀಡುತ್ತಾರೆ ಎಂದು 40 ಕಿ.ಮೀ. ದೂರದಿಂದ ಬಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಅನ್ನ ನೀರು ಇಲ್ಲದೆ ಕಾಯುತ್ತಿದ್ದೇವೆ. ಈ ಬಗ್ಗೆ ಪ್ರಶ್ನಿಸಿದರೆ ಆಸ್ಪತ್ರೆಯಲ್ಲಿರುವ ಸ್ವಾಗತಕಾರರು ಡಾಕ್ಟರ್ ಬರುತ್ತಾರೆ ಕುಳಿತುಕೊಳ್ಳಿ ಎಂದು ಉತ್ತರ ಕೊಡುತ್ತಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಅಂಗವಿಕಲರ ಕಲ್ಯಾಣ ವೇದಿಕೆ ಅಧ್ಯಕ್ಷ ಮಹದೇವ್ ಮಾತನಾಡಿ, ಆಸ್ಪತ್ರೆ ವೈದ್ಯಾಧಿಕಾರಿಗಳು ಅಂಗವಿಕಲರನ್ನು ಅನಾಥರು, ಭಿಕ್ಷುಕರೆಂಬ ಭಾವನೆಯಿಂದ ಕಾಣುತ್ತಿದ್ದಾರೆ. ಒಂದು ವರ್ಷದಿಂದ ಅಂಗವಿಕಲರಿಗೆ ಮಾಸಾಶನ ಬಂದಿಲ್ಲ. ವೈದ್ಯರು ನಿಗದಿತ ಸಮಯದಲ್ಲಿ ವೈದ್ಯಕೀಯ ದೃಢೀಕರಣ ಪತ್ರ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಮುಬಾರಕ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಾವಗಡ, ಕೊರಟಗೆರೆ ವೈದ್ಯರು ನಿಗದಿತ ಸಮಯದಲ್ಲಿ ಹಾಜರಾಗಿಲ್ಲ. ಮುಂದಿನ ದಿನಗಳಲ್ಲಿ ನಿಗದಿತ ಸಮಯದಲ್ಲಿ ವೈದ್ಯಕೀಯ ದೃಢೀಕರಣ ಪತ್ರ ವಿತರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಮುಕುಂದಪ್ಪ, ಪದಾಧಿಕಾರಿಗಳಾದ ತಗ್ಗಿಹಳ್ಳಿ ನಾಗರಾಜು, ವೆಂಕಟೇಶ್‌ನಾಯ್ಕ, ಮುರಳಿ ಇತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.