ADVERTISEMENT

ಮಲ್ಲಾಘಟ್ಟ ಕೆರೆಯಲ್ಲಿ ನೀರಿನ ಮಟ್ಟ ಕುಸಿತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 11:07 IST
Last Updated 1 ಜೂನ್ 2013, 11:07 IST

ತುರುವೇಕೆರೆ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮಲ್ಲಾಘಟ್ಟ ಕೆರೆಯಲ್ಲಿ ನೀರಿನ ಮಟ್ಟ ಹಾಗೂ ಗುಣಮಟ್ಟ ಎರಡೂ ಕುಸಿಯುತ್ತಿದ್ದು ಪಟ್ಟಣದಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾಗುವ ಆತಂಕ ಕಾಡುತ್ತಿದೆ.

ಹೇಮಾವತಿ ನದಿ ನೀರನ್ನು ಹರಿಸುವ ಮೂಲಕ ಪ್ರತಿವರ್ಷ ಮಲ್ಲಾಘಟ್ಟ ಕೆರೆಯನ್ನು ತುಂಬಿಸಲಾಗುತ್ತಿತ್ತು. ಆದರೆ ಕಳೆದ ವರ್ಷ ಕೆರೆಗೆ ಹೇಮಾವತಿ ನೀರು ಹರಿಸದ ಕಾರಣ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಮಲ್ಲಾಘಟ್ಟ ಕೆರೆ 567 ಎಂಸಿಎಫ್‌ಟಿ ಧಾರಣ ಸಾಮರ್ಥ್ಯ ಹೊಂದಿದೆ. ಈಗ ಸುಮಾರು 120 ಸಿಎಂಎಫ್‌ಟಿ ನೀರು ಸಂಗ್ರಹವಿದೆ. ಪಟ್ಟಣದ ಪ್ರತಿದಿನದ ಕುಡಿಯುವ ನೀರಿನ ಬೇಡಿಕೆ 2.26 ಎಂಎಲ್‌ಡಿ (22 ಲಕ್ಷ ಲೀಟರ್).

ಈ ಪ್ರಮಾಣದಲ್ಲಿ ನೀರು ಪೂರೈಸಿದರೆ ಒಂದೆರಡು ತಿಂಗಳಲ್ಲಿ ನಾಗರೀಕರು ತೀವ್ರ ನೀರಿನ ಅಭಾವ ಎದುರಿಸಬೇಕಾಗುತ್ತದೆ. ಕೆರೆ ಅಚ್ಚುಕಟ್ಟು ಪ್ರದೇಶಗಳೇ ಇಲ್ಲದಿರುವುದರಿಂದ ಸ್ಥಳೀಯವಾಗಿ ಭಾರೀ ಮಳೆಯಾದರೂ ನೀರಿನ ಮಟ್ಟ ಏರುವುದಿಲ್ಲ ಎಂದು ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಕುಸಿಯುತ್ತಿರುವ ನೀರಿನ ಗುಣಮಟ್ಟ ಸಹ ನಾಗರಿಕರನ್ನು ಆತಂಕಕ್ಕೀಡು ಮಾಡಿದೆ. ಕೆರೆಯಲ್ಲಿರುವ ನೀರು ಎರಡು ವರ್ಷ ಹಳೆಯದಾಗಿದ್ದು ಪಾಚಿ ಕಟ್ಟಿ ಕೊಳೆಯುತ್ತಿದೆ. ಕೆರೆಯಲ್ಲಿ ಮೀನುಗಾರಿಕೆಯೂ ನಡೆಯುವುದರಿಂದ ನೀರು ಮಲಿನಗೊಂಡು ವಾಸನೆ ಬರುತ್ತಿದೆ. ಕೊಳಾಯಿಗಳಲ್ಲಿ ಬರುತ್ತಿರುವ ನೀರು ಬಣ್ಣಗೆಟ್ಟಿದ್ದು ಅಪಾಯದ ಹಂತ ತಲುಪಿರುವುದನ್ನು ಸೂಚಿಸುತ್ತಿದೆ. ಸಂಸ್ಕರಣ ಘಟಕದಲ್ಲಿ ನೀರನ್ನು ಕ್ಲೋರಿನೇಶನ್ ಮೂಲಕ ಸಂಸ್ಕರಿಸುತ್ತಿದ್ದರೂ ನೀರಿನ ಗುಣಮಟ್ಟ ಕುಡಿಯಲು ಯೋಗ್ಯವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕಬ್ಬಿಣದ ಕೊಳಾಯಿಗಳಲ್ಲಿ ಇಂಥ ನೀರು ಹರಿಯುವುದರಿಂದ ರಾಸಾಯನಿಕ ಕ್ರಿಯೆ ನಡೆದು ನೀರು ಸಂಸ್ಕರಿಸಿದ ನಂತರವೂ ಮತ್ತಷ್ಟು ಹಾಳಾಗುವ ಸಂಭವವಿದೆ ಎನ್ನುತ್ತಾರೆ ಎಂಜಿನಿಯರ್ ಸತ್ಯನಾರಾಯಣ್. ವೈದ್ಯರು ಸಾಂಕ್ರಾಮಿಕ ರೋಗಗಳು ಹರಡುವ ಸಂಭವದ ಬಗ್ಗೆ ಎಚ್ಚರಿಕೆ ನೀಡಿದ್ದು ನೀರನ್ನು ಕುದಿಸಿ ಆರಿಸಿ ಕುಡಿಯಲು ಸಲಹೆ ಮಾಡುತ್ತಿದ್ದಾರೆ.

ಪಟ್ಟಣಕ್ಕೆ ಕುಡಿಯುವ ನೀರಿನ ಪರ್ಯಾಯ ಮಾರ್ಗವೆಂದರೆ ಕೊಳವೆ ಬಾವಿಗಳು. 12 ಕೊಳವೆ ಬಾವಿಗಳಲ್ಲಿ 3 ಕೆಟ್ಟಿದ್ದು ಮಿಕ್ಕ ಕೊಳವೆಬಾವಿಗಳಿಂದ ಪ್ರತಿದಿನ ಹೆಚ್ಚೆಂದರೆ 4 ಲಕ್ಷ ಲೀಟರ್ ನೀರು ಎತ್ತಬಹುದು. ಆಳ ಬಾವಿಗಳಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗುವುದರಿಂದ ಸಂಸ್ಕರಿಸದೆ ನೇರವಾಗಿ ಉಪಯೋಗಿಸುವಂತಿಲ್ಲ.

ಚಿಕ್ಕಮಗಳೂರು- ಹಾಸನ ಪ್ರದೇಶದಲ್ಲಿ ಈ ಬಾರಿಯಾದರೂ ಉತ್ತಮ ಮಳೆಯಾಗಿ ಹೇಮಾವತಿ ನದಿ ಹರಿದು ಗೋರೂರು ಜಲಾಶಯ ತುಂಬಿದರೆ, ಕೆರೆಗೆ ನೀರು ಹರಿದು ಪಟ್ಟಣದ ಸಮಸ್ಯೆ ಪರಿಹಾರವಾಗುತ್ತದೆ. ಇಲ್ಲವೆಂದರೆ ಜುಲೈ ಅಂತ್ಯದ ವೇಳೆಗೆ ನಾಗರೀಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ನೀರಿನ ರೇಶನ್ ವ್ಯವಸ್ಥೆ ಅನಿವಾರ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.