ADVERTISEMENT

ಮಾರುಕಟ್ಟೆಯಲ್ಲಿ ಗ್ರಾಹಕರ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 10:03 IST
Last Updated 11 ಸೆಪ್ಟೆಂಬರ್ 2013, 10:03 IST

ಪಾವಗಡ: ಪಟ್ಟಣದ ತರಕಾರಿ ಮಾರುಕಟ್ಟೆ ಕೊಳಚೆ ನೀರು, ಸೊಳ್ಳೆ, ಹಂದಿ, ಬಿಡಾಡಿ ದನಗಳ ಆವಾಸ ಸ್ಥಾನವಾಗಿದ್ದು, ತರಕಾರಿ ಮಾರುವ, ಕೊಳ್ಳಲು ಆಗಮಿಸುವ ಗ್ರಾಹಕರು ಪರದಾಡು­ವಂತಾಗಿದೆ.

ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ತಾಲ್ಲೂಕಿನ ಜನತೆ ಮಾತ್ರವಲ್ಲದೆ ಇತರ ಪ್ರದೇಶಗಳಿಂದಲೂ ವ್ಯಾಪಾರಸ್ಥರು, ಗ್ರಾಹಕರು ಸಂತೆಗೆ ಆಗಮಿಸುತ್ತಾರೆ. ಪಟ್ಟಣದ ಜನನಿಬಿಡ ಸ್ಥಳಗಳಲ್ಲಿ ಇದೂ ಒಂದು.

ಅಲ್ಪ ಪ್ರಮಾಣದ ಮಳೆಯಾದರೂ ತರಕಾರಿ ಮಾರುಕಟ್ಟೆಯಲ್ಲಿ ಮಳೆ ನೀರು ನಿಂತು ದುರ್ನಾತ ಬೀರುತ್ತದೆ. ತರಕಾರಿ ಮಾರುಕಟ್ಟೆಗೆ ಬರುವವರು ನೂರು ಬಾರಿ ಯೋಚಿಸಬೇಕಾದ ಸ್ಥಿತಿ ಇದೆ. ದುರ್ನಾತಕ್ಕೆ ಹೆದರಿ ಸಂತೆಯತ್ತ ಸುಳಿಯದಿದ್ದರೆ ವಾರವಿಡಿ ತರಕಾರಿ ಮತ್ತು ಇತರ ಅಗತ್ಯ ವಸ್ತುಗಳ ಅಭಾವ ತಲೆದೋರುತ್ತದೆ.

ಸಂತೆ ಬೀದಿಯಲ್ಲಿ ಕಾಂಕ್ರಿಟ್‌ ರಸ್ತೆ ನಿಮಿಸುತ್ತೇವೆ ಎಂದು ಪುರಸಭೆ ಅಧಿಕಾರಿಗಳು ಹಲವು ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ ಸಂತೆಬೀದಿ ರಸ್ತೆಗಳ ಹಣೆ ಬರಹ ಮಾತ್ರ ಬದಲಾಗುತ್ತಿಲ್ಲ.

ಸಂತೆ ಬೀದಿಯಲ್ಲಿ ನಡೆಯುವುದೆಂದರೆ ತಂತಿಯ ಮೇಲೆ ನಡೆದಂತೆ ಎಂಬಂತಿದ್ದು, ಅಲ್ಪ ಪ್ರಮಾಣದ ಅಜಾಗರೂಕತೆಯೂ ಭಾರೀ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ ಎನ್ನುತ್ತಾರೆ ತರಕಾರಿ ಕೊಳ್ಳಲು ಆಗಮಿಸಿದ್ದ ಗ್ರಾಹಕ ಪವನ್‌ರಾಜ್.

ಕೆಸರು ಮಡುವಾದ ಸಂತೆ ಬೀದಿಯಲ್ಲಿ ಕಾಲು ಜಾರಿ ಬೀಳುವ ಸಂಭಾವ್ಯತೆ ಅಧಿಕ. ಒಂದೊಮ್ಮೆ ಜಾರಿ ಬಿದ್ದರೆ ಮೊದಲೇ ಫ್ಲೊರೈಡ್ ನೀರಿನ ಪ್ರಭಾವದಿಂದ ಪಟುತ್ವವನ್ನು ಕಳೆದುಕೊಂಡ ತಾಲ್ಲೂಕಿನ ಜನರ ಮೂಳೆ ಮುರಿದು ಆಸ್ಪತ್ರೆ ಪಾಲಾಗಬೇಕಿದೆ. ವ್ಯಾಪಾರಸ್ಥರು ಕೊಳೆತ ತರಕಾರಿಯನ್ನು ಅಲ್ಲಲ್ಲೇ ಎಸೆಯುತ್ತಿದ್ದು, ಅವುಗಳನ್ನು ತಿನ್ನುವ ತವಕದಲ್ಲಿ ಭರದಿಂದ ನುಗ್ಗುವ ಜಾನುವಾರಗಳ ಕಾಲ್ತುಳಿತಕ್ಕೆ ಸಿಕ್ಕಿ ಒದ್ದಾಡಬೇಕು. ‘ಯಾರು ಬಂದರೂ ಪರಿಸ್ಥಿತಿ ಬದಲಾಗುವುದಿಲ್ಲ. ಪುರಸಭೆ ಸದಸ್ಯರು ಆಯ್ಕೆಯಾಗಿ ಹಲವು ಆಯ್ಕೆಯಾಗಿ ಹಲವು ತಿಂಗಳು ಕಳೆದರೂ ಯಾವುದೇ ಸಮಸ್ಯೆಗಳ ಬಗ್ಗೆ ಕಿವಿಗೊಡುತ್ತಿಲ್ಲ. ಈ ಬಗ್ಗೆ ಮಾತನಾಡುವುದೂ ನಿರರ್ಥಕ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ತರಕಾರಿಗಾಗಿ ಸಾವಿರಾರು ರೂಪಾಯಿ ಬಂಡವಾಳ ಹಾಕಿರುತ್ತೇವೆ. ಸಂತೆಯ ದಿನ ಮಳೆಯಾದರೆ; ಜನ ಇತ್ತ ಸುಳಿಯುವುದಿಲ್ಲ. ಮಳೆ ನೀರು ನಿಂತು ಕೆಟ್ಟ ವಾಸನೆ ಬರುತ್ತದೆ. ಸಾಲ ಸೋಲ ಮಾಡಿ ತಂದ ತರಕಾರಿ ಮಾರಾಟ­ವಾಗದೇ ನಷ್ಟವಾಗುತ್ತದೆ’ ಎನ್ನುತ್ತಾರೆ ನಲಿಗಾನಹಳ್ಳಿಯ ತರಕಾರಿ ವ್ಯಾಪಾರಿ ಲಕ್ಷ್ಮಮ್ಮ.

‘ವ್ಯಾಪಾರದಲ್ಲಿ ತೊಡಗಿದ ಸಂದರ್ಭ ಹಂದಿ, ಬಿಡಾಡಿ ದನ, ಎಮ್ಮೆಗಳು ಮಾರುಕಟ್ಟೆಗೆ ನುಗ್ಗಿ ತರಕಾರಿ ಬುಟ್ಟಿಗೆ ಬಾಯಿ ಹಾಕುತ್ತವೆ. ಅವುಗಳನ್ನು ಅಟ್ಟುವುದೇ ದೊಡ್ಡ ಕೆಲಸ­ವಾಗು­ತ್ತದೆ. ಬಯಲಿನಲ್ಲಿಯೇ ತರಕಾರಿ ಮಾರುತ್ತಿರುವ ನಾವು ಮಳೆ ಬಂದರೆ ವ್ಯಾಪಾರವನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ದಿನವಿಡೀ ಜಡಿ ಮಳೆ ಹಿಡಿದರಂತೂ ಉಂಟಾ­ಗುವ ನಷ್ಟ ಹೇಳತೀರದು. ಇನ್ನಾದರೂ ಪುರಸಭೆ ವತಿಯಿಂದ ಮೇಲ್ಛಾವಣಿ, ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಸಂತೆ ಬೀದಿಯ ವ್ಯಾಪಾರಿ ರಘು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.