ADVERTISEMENT

ಮೂರು ಬಾರಿ ಒಲಿದ ರಾಷ್ಟ್ರ ಪ್ರಶಸ್ತಿ

ಡಿ.ಬಿ, ನಾಗರಾಜ
Published 3 ಜುಲೈ 2013, 4:59 IST
Last Updated 3 ಜುಲೈ 2013, 4:59 IST

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಕುಳ್ಳ ವ್ಯಕ್ತಿ ಶ್ರೇಷ್ಠ ಸಾಧನೆ ಮಾಡಿದಾಗ ಬರುವ ಮೆಚ್ಚುಗೆಯ ಉದ್ಗಾರವಿದು. ತುಮಕೂರು ಸರ್ವೋದಯ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದ ಸಂಜಯ್ ಯಾದವ್ ಕೊಕ್ಕೊ ಕ್ರೀಡೆಯ ಎವರ್‌ಗ್ರೀನ್ ಹೀರೋ. 2006-07ರಲ್ಲಿ ಆರಂಭಗೊಂಡ ಈತನ ಕೊಕ್ಕೊ ಯಾತ್ರೆ ಇಂದಿಗೂ ನಿರಾತಂಕ.

ಹನ್ನೆರೆಡನೇ ವಯಸ್ಸಿನಲ್ಲಿ ಪಾದರ್ಪಣೆ ಮಾಡಿದ ಸಂಜಯ್ ಹಿಂತಿರುಗಿ ನೋಡಿಲ್ಲ. ನೋಡಲು ಕುಳ್ಳ. ಆದರೆ ಓಟದಲ್ಲಿ ಮಾತ್ರ ಕುದುರೆಯ ಕಾಲ್ಚೆಳಕು ಕಂಡು ಬರುತ್ತದೆ. ಈತನ ವೇಗದ ಓಟಕ್ಕೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಒಲಿದಿದೆ.

ಕೊಕ್ಕೊ ಕ್ರೀಡೆಯಲ್ಲಿ ತುಮಕೂರಿನ `ದ್ರೋಣಾಚಾರ್ಯ' ಎಂದೇ ಖ್ಯಾತರಾದ ತರಬೇತುದಾರ ವೈ.ರಮೇಶ್ ಗರಡಿಯಲ್ಲಿ ಪಳಗಿದ ಸಂಜಯ್ 2006-07ರಲ್ಲಿ ನಡೆದ ರಾಜ್ಯ ಮಟ್ಟದ ಅತಿ ಕಿರಿಯರ ಕೊಕ್ಕೊ ಪಂದ್ಯಾವಳಿಯಲ್ಲಿ ಮೊದಲ ಬಾರಿ ಜಿಲ್ಲೆ ಪ್ರತಿನಿಧಿಸಿದರು. ಆರಂಭದ ಪಂದ್ಯಾವಳಿಯಲ್ಲೇ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡುವ ಜತೆ ತಂಡ ದ್ವಿತೀಯ ಸ್ಥಾನ ಗಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿ ಬೆಳ್ಳಿ ಗೆದ್ದ ಹಿರಿಮೆ ಈತನದ್ದು.

ತುಮಕೂರಿನಲ್ಲೇ 2007-08ರಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಶಾಲಾ ಕೊಕ್ಕೊ ಕ್ರೀಡಾಕೂಟದಲ್ಲಿ ಜಿಲ್ಲಾ ತಂಡದ ಸಾರಥ್ಯ ವಹಿಸಿಕೊಂಡು ಪ್ರಥಮ ಸ್ಥಾನ ಗಳಿಸಿ, ಚಿನ್ನ ಗೆದ್ದು ಬೀಗಿದ ಬಾಲಕ. ಆಂಧ್ರಪ್ರದೇಶದ ಕಾಕಿನಾಡದಲ್ಲಿ 2007-08ರಲ್ಲಿ ನಡೆದ 53ನೇ ರಾಷ್ಟ್ರೀಯ ಶಾಲಾ (14 ವರ್ಷ ವಯೋಮಿತಿ) ಕೊಕ್ಕೊ ಪಂದ್ಯಾವಳಿಯಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿಕೊಂಡು ಅಮೋಘ ಪ್ರದರ್ಶನ ನೀಡಿದ. ರಾಜ್ಯ ತಂಡ ದ್ವಿತೀಯ ಸ್ಥಾನ ಗಿಟ್ಟಿಸಿ ಬೆಳ್ಳಿಗೆ ತೃಪ್ತಿಪಟ್ಟರೂ; ವೈಯಕ್ತಿಕ ಪ್ರದರ್ಶನ ಸರ್ವಶ್ರೇಷ್ಠ ಪ್ರದರ್ಶನಕ್ಕೆ ದೇಶದ `ಉತ್ತಮ ಆಟಗಾರ ಪ್ರಶಸ್ತಿ' ಸಂಜಯ್ ಕೊರಳು ಅಲಂಕರಿಸಿತು.

ಮಧ್ಯಪ್ರದೇಶದ ಸಾಗರ್‌ನಲ್ಲಿ 2008-09ರಲ್ಲಿ ನಡೆದ 54ನೇ ರಾಷ್ಟ್ರೀಯ ಶಾಲಾ (14 ವರ್ಷ ವಯೋಮಿತಿ) ಕೊಕ್ಕೊ ಪಂದ್ಯಾವಳಿಯಲ್ಲಿ ಮತ್ತೆ ರಾಜ್ಯ ತಂಡದ ಸಾರಥ್ಯ. ಈ ಬಾರಿ ಕಂಚಿಗೆ ತೃಪ್ತಿ. 2008-09ನೇ ಸಾಲಿನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲಾ ತಂಡದ ನಾಯಕ. ಸ್ವರ್ಣ ಸಂಭ್ರಮ.

2009-10ನೇ ಸಾಲಿನಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲಾ ತಂಡದ ನಾಯಕ. ಮತ್ತೊಮ್ಮೆ ಸ್ವರ್ಣ ಸಂಭ್ರಮ. ಇದೇ ವರ್ಷ ಮಧ್ಯಪ್ರದೇಶದ ಚತ್ತಾಪುರ್‌ನಲ್ಲಿ ನಡೆದ 55ನೇ ರಾಷ್ಟ್ರೀಯ ಶಾಲಾ ಕೊಕ್ಕೊ ಪಂದ್ಯಾವಳಿಯಲ್ಲಿ (17 ವರ್ಷ ವಯೋಮಿತಿ) ತೃತೀಯ ಸ್ಥಾನ ಪಡೆದು ಕಂಚಿನ ಪದಕಕ್ಕೆ ತೃಪ್ತಿ.

ಬೆಳಗಾವಿಯಲ್ಲಿ 2010-11ನೇ ಸಾಲಿನಲ್ಲಿ ನಡೆದ ರಾಜ್ಯಮಟ್ಟದ ಶಾಲಾ ಕೊಕ್ಕೊ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ. ನಿರಂತರ ಆಟದ ನಡುವೆಯೂ ಓದಿನಲ್ಲೂ ಚುರುಕು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 94 ಫಲಿತಾಂಶ ಗಳಿಸಿ ಆಟ-ಪಾಠ ಎರಡರಲ್ಲೂ ಮುಂದು ಎಂಬ ಖ್ಯಾತಿ ಈತನ ಪಾಲಾಯಿತು.

ಬಳ್ಳಾರಿಯಲ್ಲಿ 2011-12ರಲ್ಲಿ ನಡೆದ ರಾಜ್ಯಮಟ್ಟದ ಕಾಲೇಜು ವಿದ್ಯಾರ್ಥಿಗಳ ಕೊಕ್ಕೊ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ. ಮಹಾರಾಷ್ಟ್ರದ ಇಚಲ್‌ಕಾರಂಜಿಯಲ್ಲಿ 2011-12ರಲ್ಲಿ ನಡೆದ 57ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ (19 ವರ್ಷ ವಯೋಮಿತಿ) ಈತನ ಶ್ರೇಷ್ಠ ಪ್ರದರ್ಶನದಿಂದ ತಂಡ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಮುಡಿಗೇರಿಸಿತು. ಟೂರ್ನಿಯ ಉತ್ತಮ ಓಟಗಾರ ಪ್ರಶಸ್ತಿ ಮತ್ತೊಮ್ಮೆ ಸಂಜಯ್ ಪಾಲಿಗೆ ದಕ್ಕಿತು.

ತುಮಕೂರಿನಲ್ಲಿ 2012-13ರಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕೊಕ್ಕೊ ಪಂದ್ಯಾವಳಿಯಲ್ಲಿ ಜಿಲ್ಲಾ ತಂಡದ ನೇತೃತ್ವ ವಹಿಸಿ ಪ್ರಥಮ ಸ್ಥಾನ ಗಳಿಸುವಲ್ಲಿ ಸಂಜಯ್ ಪಾತ್ರ ಪ್ರಮುಖವಾದದ್ದು. ಮಹಾರಾಷ್ಟ್ರದ ಸತಾರಾದಲ್ಲಿ 2012-13ರಲ್ಲಿ ನಡೆದ 58ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟ (19 ವರ್ಷ ವಯೋಮಿತಿ)ದಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿಕೊಂಡಿದ್ದ ಸಂಜಯ್, ತಂಡ ಬೆಳ್ಳಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.