ADVERTISEMENT

ಮೈಕ್ರೋ ಇನ್ಸೂರೆನ್ಸ್ ವಂಚನೆ: ಆತ್ಮಾರ್ಪಣೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 7:44 IST
Last Updated 3 ಸೆಪ್ಟೆಂಬರ್ 2013, 7:44 IST

ತುರುವೇಕೆರೆ: ಜೀವನ್ ಮಧುರ ಮೈಕ್ರೋ ಪಾಲಿಸಿ ವಂಚನೆ ಪ್ರಕರಣದಲ್ಲಿ ತಾವು ಒಂದು ವರ್ಷದ ಪ್ರೀಮಿಯಂ ಪಡೆಯಲು ಸಿದ್ಧವಿಲ್ಲ. ಎಲ್‌ಐಸಿ ಪೂರಾ ಹಣ ನೀಡದಿದ್ದಲ್ಲಿ ಕಚೇರಿ ಮುಂದೆ ಆತ್ಮಾರ್ಪಣೆ ಮಾಡಿಕೊಳ್ಳುವುದಾಗಿ ಪಾಲಿಸಿದಾರರು ಸೋಮವಾರ ಎಚ್ಚರಿಸಿದರು.

ಪಟ್ಟಣದ ದಬ್ಬೇಘಟ್ಟ ರಸ್ತೆಯ ಎಲ್‌ಐಸಿ ಕಚೇರಿಗೆ ಧಾವಿಸಿದ ನೂರಾರು ಮೈಕ್ರೋ ಇನ್ಸೂರೆನ್ಸ್ ಪಾಲಿಸಿದಾರರು, ರೈತ ಸಂಘದ ಪದಾಧಿಕಾರಿಗಳು ಎಲ್‌ಐಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಆ ನಂತರ ಎಲ್‌ಐಸಿ ಸ್ಥಳೀಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಎಲ್‌ಐಸಿಯ ಕೇಂದ್ರ ಕಚೇರಿ ಪಾಲಿಸಿದಾರರೊಂದಿಗೆ ಚರ್ಚಿಸದೆ ಏಕಪಕ್ಷೀಯ ನಿರ್ಣಯ ಕೈಗೊಂಡಿದೆ. ಒಂದು ವರ್ಷದ ಪಾಲಿಸಿ ಹಣ ಕಟ್ಟುವ ಮೂಲಕ ಕಂಪೆನಿ ಸಾವಿರಾರು ಪಾಲಿಸಿದಾರರಿಗೆ ದ್ರೋಹ ಮಾಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಸಾವಿರಾರು ಪಾಲಿಸಿದಾರರು 3-4 ವರ್ಷಗಳ ಕಾಲ ಮಧ್ಯವರ್ತಿ ಸಮನ್ವಯ ಕೇಂದ್ರಕ್ಕೆ ಹಣ ಪಾವತಿಸಿದ್ದಾರೆ. ಅದಕ್ಕೆ ಪಾಲಿಸಿದಾರರ ಬಳಿ ಸಮನ್ವಯ ಕೇಂದ್ರ ನೀಡಿರುವ ರಸೀದಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಖಾ ವ್ಯವಸ್ಥಾಪಕ ಜಿ.ಪ್ರಸಾದ್ ಪಾಲಿಸಿದಾರರರನ್ನು ಸಮಾಧಾನಗೊಳಿಸುವ ಪ್ರಯತ್ನ ನಡೆಸಿದರು. ಭಾವೋದ್ವೇಗಕ್ಕೆ ಒಳಗಾದ ಹಲ ಮಹಿಳಾ ಪ್ರತಿನಿಧಿಗಳು ಎಲ್‌ಐಸಿ ಪೂರಾ ಹಣ ನೀಡದಿದ್ದರೆ ಕಚೇರಿ ಮುಂದೆ ಆತ್ಮಾರ್ಪಣೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿದ್ದಲಿಂಗೇಗೌಡ ಎಲ್‌ಐಸಿ ಅಧಿಕಾರಿಗಳು ಗ್ರಾಮೀಣ ಪ್ರದೇಶದ ಹೂಡಿಕೆದಾರರನ್ನು ಶೋಷಿಸುತ್ತಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು, ಎಲ್‌ಐಸಿ ಅಧಿಕಾರಿಗಳು ವಂಚಕರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಾಖಾ ವ್ಯವಸ್ಥಾಪಕರು ಹೈದರಾಬಾದ್ ಮೈಕ್ರೋ ಫೈನಾನ್ಸ್ ವಿಭಾಗದ ಕಾರ್ಯದರ್ಶಿ ಸತ್ಯನಾರಾಯಣ್ ಜತೆ ಮಾತುಕತೆ ನಡೆಸಿದರು. ಕಾರ್ಯದರ್ಶಿ ತಮ್ಮ ವಿಭಾಗದಿಂದ ಸೂಕ್ತ ಅಧಿಕಾರಿಗಳನ್ನು ಕಳುಹಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್‌ಗೌಡ, ಶ್ರೀರಾಮಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹೇಮಂತ್ ಇತರರು ಪಾಲಿಸಿದಾರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.