ADVERTISEMENT

ರಂಜಾನ್ ಮಾಸದ ಆರೋಗ್ಯ ಕಾಳಜಿ

ಪ್ರಜಾವಾಣಿ ವಿಶೇಷ
Published 17 ಜುಲೈ 2013, 10:07 IST
Last Updated 17 ಜುಲೈ 2013, 10:07 IST

ತುಮಕೂರು: ಮುಸ್ಲಿಮರು ಪವಿತ್ರ ರಂಜಾನ್ ಉಪವಾಸ ಆರಂಭಿಸಿದ್ದಾರೆ. ದೇವರತ್ತ ಮನಸ್ಸು ಹರಿಸುವ ಈ ಮಾಸದಲ್ಲಿ ವಯೋಮಾನಕ್ಕೆ ಅನುಗುಣವಾಗಿ ದೇಹದ ಕಾಳಜಿಯೂ ಅಗತ್ಯ. ಈ ಕುರಿತು ತಜ್ಞ ವೈದ್ಯರು ವಿವಿಧ ಸಲಹೆ ನೀಡಿದ್ದಾರೆ.

ಕೀಲು ನೋವು: ರಂಜಾನ್ ಸಂದರ್ಭದಲ್ಲಿ ಪ್ರಾರ್ಥನೆ, ಧ್ಯಾನಕ್ಕೆ ಹೆಚ್ಚು ಸಮಯ ಮೀಸಲಿಡಲಾಗುತ್ತದೆ. ಮೊಳಕಾಲಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ವೃದ್ಧರು, ಕೀಲು ಸಮಸ್ಯೆ ಇರುವವರು ಹೆಚ್ಚು ನೋವು ಅನುಭವಿಸಬೇಕಾಗುತ್ತದೆ.

ರಂಜಾನ್ ಪ್ರಾರ್ಥನೆ ಸುಸೂತ್ರವಾಗಿ ನೆರವೇರಲು ವರ್ಷವಿಡಿ ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಸಮತೋಲನದ ಆಹಾರದಿಂದ ತೂಕ ಕಡಿಮೆ ಮಾಡಿಕೊಳ್ಳುವುದು, ಕಾಲಿನ ಕೀಲುಗಳನ್ನು ವ್ಯಾಯಾಮದ ಮೂಲಕ ಸುಸ್ಥಿತಿಯಲ್ಲಿಟ್ಟುಕೊಂಡರೆ `ಸಲಾತ್'ನತ್ತ ಹೆಚ್ಚು ಗಮನ ಕೇಂದ್ರೀಕರಿಸಬಹುದು.

ಸಕ್ಕರೆ ಕಾಯಿಲೆ: ಮಧುಮೇಹಕ್ಕೆ `ಇನ್ಸುಲಿನ್' ಚುಚ್ಚುಮದ್ದು ತೆಗೆದುಕೊಳ್ಳುತ್ತಿರುವವರು ಉಪವಾಸ ಮಾಡುವುದು ಬೇಡ ಎಂದೇ ತಜ್ಞರು ಹೇಳುತ್ತಾರೆ. ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಮಧುಮೇಹ ನಿಯಂತ್ರಣದಲ್ಲಿಟ್ಟುಕೊಂಡವರು ಉಪವಾಸಕ್ಕೆ ಮೊದಲು ಮಾತ್ರೆ ತೆಗೆದುಕೊಳ್ಳುವ ಅವಧಿಯಲ್ಲಿ ವ್ಯತ್ಯಾಸ ಮಾಡುವ ಕುರಿತು ವೈದ್ಯರ ಅಭಿಪ್ರಾಯಪಡೆಯಬೇಕು.

ರಕ್ತದ ಗ್ಲುಕೋಸ್ ಅಂಶದ ಬಗ್ಗೆ ನಿಯಮಿತ ತಪಾಸಣೆ ಅಗತ್ಯ. ಉಪವಾಸ ಸಂದರ್ಭ ಕಣ್ಣು ಮಂಜಾಗುವುದು, ತಲೆ ತಿರುಗುವುದು, ಬೆವರುವುದು ಗ್ಲುಕೋಸ್ ಅಂಶ ಕಡಿಮೆಯಾದ ಬಗ್ಗೆ ಸೂಚನೆ ಇರಬಹುದು. ಇಂಥ ಯಾವುದೇ ಲಕ್ಷಣ ಗೋಚರಿಸಿದರೆ ತಕ್ಷಣ ಸಕ್ಕರೆ ಬೆರೆತ ನೀರು ಕುಡಿಯಬೇಕು ಅಥವಾ ಸಿಹಿತಿಂಡಿಯನ್ನು ನಾಲಗೆಯಡಿ ಇಟ್ಟುಕೊಳ್ಳಬೇಕು.

ದೀರ್ಘಕಾಲದಿಂದ ಒಂದೇ ರೀತಿಯ ಮಾತ್ರೆ ತೆಗೆದುಕೊಳ್ಳುತ್ತಿರುವವರು ರಂಜಾನ್‌ಗೆ ಕನಿಷ್ಠ ಒಂದು ತಿಂಗಳು ಮೊದಲು ವೈದ್ಯರನ್ನು ಸಂಪರ್ಕಿಸಿ, ತಾತ್ಕಾಲಿಕವಾಗಿ ಮಾತ್ರೆಗಳನ್ನು ಬದಲಿಸಿಕೊಳ್ಳುವ ಕುರಿತು ಸಲಹೆ ಪಡೆಯಬೇಕು.

ಸಕ್ಕರೆ ಕಾಯಿಲೆಯ ಪರಿಣಾಮದಿಂದ ಹೃದಯದ ತೊಂದರೆ, ದೃಷ್ಟಿದೋಷ, ಕಿಡ್ನಿ ಸಮಸ್ಯೆ, ನರದೌರ್ಬಲ್ಯದಿಂದ ಬಳಲುತ್ತಿರುವವರು ಉಪವಾಸಕ್ಕೆ ಮೊದಲು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆಯಬೇಕು.

ಡಿಹೈಡ್ರೇಷನ್: ಉಪವಾಸದ ವೇಳೆ ದೇಹದಲ್ಲಿ ನೀರಿನ ಅಂಶದ ಕೊರತೆ ಉಂಟಾಗುವುದು ಸಾಮಾನ್ಯ. ವೃದ್ಧರು ಮತ್ತು ಕೆಲವು ವಿಧದ ಔಷಧ ತೆಗೆದುಕೊಳ್ಳುತ್ತಿರುವವರನ್ನು ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.

   ಇದನ್ನು ತಡೆಯಲು `ಇಫ್ತಾರ್' ಮತ್ತು `ಸೆಹ್ರಿ' ಸಂದರ್ಭ ಸಾಕಷ್ಟು ಪ್ರಮಾಣದಲ್ಲಿ ನೀರು, ಹಣ್ಣಿನ ರಸ ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.