ADVERTISEMENT

ವಿರೋಧದ ನಡುವೆಯೂ ಜೆ.ಸಿ ರಸ್ತೆ ವಿಸ್ತರಣೆಗೆ ಚಾಲನೆ:ಅಂಗಡಿ ಮಳಿಗೆ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ಮೇ 2012, 6:20 IST
Last Updated 4 ಮೇ 2012, 6:20 IST
ವಿರೋಧದ ನಡುವೆಯೂ ಜೆ.ಸಿ ರಸ್ತೆ ವಿಸ್ತರಣೆಗೆ ಚಾಲನೆ:ಅಂಗಡಿ ಮಳಿಗೆ ತೆರವು ಕಾರ್ಯಾಚರಣೆ
ವಿರೋಧದ ನಡುವೆಯೂ ಜೆ.ಸಿ ರಸ್ತೆ ವಿಸ್ತರಣೆಗೆ ಚಾಲನೆ:ಅಂಗಡಿ ಮಳಿಗೆ ತೆರವು ಕಾರ್ಯಾಚರಣೆ   

ತುಮಕೂರು: ಸೂಕ್ತ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಿ ಎಂಬ ಅಂಗಡಿ ಮಾಲೀಕರ ಬೇಡಿಕೆಗೆ ಸ್ಪಂದಿಸದ ನಗರಸಭೆ ಆಡಳಿತ ಗುರುವಾರದಿಂದ ನಗರದ ಜೆ.ಸಿ. ರಸ್ತೆ ವಿಸ್ತರಣೆಗಾಗಿ ಅಂಗಡಿ ಮಳಿಗೆ ತೆರವು ಕಾರ್ಯಾ ಚರಣೆ ಆರಂಭಿಸಿತು.

ಅಂಗಡಿ ತೆರವಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಕಟ್ಟಡಗಳ ಸಜ್ಜೆ, ನಾಮಫಲಕಗಳನ್ನು ಜೆಸಿಬಿ ಯಂತ್ರ ಬಳಸಿ ಕೀಳಲಾಯಿತು.ಮಧ್ಯಾಹ್ನ 2 ಗಂಟೆಗೆ ತೆರವು ಕಾರ್ಯಾಚರಣೆ ಆರಂಭಗೊಂಡರೂ ವ್ಯಾಪಾರಸ್ಥರ ವಿರೋಧದಿಂದಾಗಿ ಸಂಜೆವರೆಗೂ ಕಾರ್ಯಾಚರಣೆ ಸಾಧ್ಯವಾಗಲಿಲ್ಲ. ನಗರಸಭೆ ಆಯುಕ್ತೆ ರೋಹಿಣಿ ಸಿಂಧೂರಿ ಸ್ಥಳಕ್ಕೆ ಬರಬೇಕೆಂದು ವ್ಯಾಪಾರಸ್ಥರು ಆಗ್ರಹಿಸಿ ಕಾರ್ಯಾಚರಣೆಗೆ ತಡೆ ಒಡ್ಡಿದರು. ಮೂರು ಗಂಟೆಗಳ ಕಾಲ ಕಾದರೂ ಸ್ಥಳಕ್ಕೆ ಆಯುಕ್ತೆ ಬರಲಿಲ್ಲ. ಇದರಿಂದಾಗಿ ಕೆಲ ಕಾಲ ಗೊಂದಲ, ಉದ್ವಿಗ್ನದ ವಾತಾವರಣ ಉಂಟಾಗಿತ್ತು.

ಕೊನೆಗೂ ಸ್ಥಳಕ್ಕೆ ಬಂದ ರೋಹಿಣಿ ವ್ಯಾಪಾರಸ್ಥರ ಆಗ್ರಹಕ್ಕೆ ಮಣಿಯಲಿಲ್ಲ. ಯಾವುದೇ ಪರಿಹಾರ ಕೊಡುವಂತಿಲ್ಲ. ಲಿಖಿತವಾಗಿ ಮುನ್ಸೂಚನೆ ನೋಟಿಸ್ ನೀಡಿ ಕಾರ್ಯಾಚರಣೆ ಮಾಡುವಂತೆ ಯಾವ ಕಾನೂನಿನಲ್ಲೂ ಹೇಳಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಹದಿನೈದು ದಿನದ ಹಿಂದೆ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ದಾಖಲೆ, ಆಕ್ಷೇಪಣೆಯನ್ನು ನಗರಸಭೆಗೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಯಾರೂ ಸೂಕ್ತ ದಾಖಲಾತಿ ನೀಡಿಲ್ಲ. ಹೀಗಾಗಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು. ವ್ಯಾಪಾರಸ್ಥರ ಮನವಿ, ಕೆಲವು ಔಷಧಿ ಅಂಗಡಿ ಮಾಲೀಕರ ಮನವಿಗೂ ಸ್ಪಂದಿಸಲಿಲ್ಲ.
 
ಆದರೆ ಕಟ್ಟಡಗಳ ಮುಂದಿನ ಸಜ್ಜೆಯನ್ನು ಮಾತ್ರ ಕೀಳಲಾಗಿದ್ದು, ನೂರು ಅಡಿ ವರೆಗೆ ಕೆಡವಿಲ್ಲ. ಕಾರ್ಯಾಚರಣೆ ವೇಳೆ ಸಾಕಷ್ಟು ಸಂಖ್ಯೆಯ ಪೊಲೀಸರನ್ನು ಹಾಕಲಾಗಿತ್ತು.`ನಮಗೆ ಯಾವುದೇ ನೋಟಿಸ್ ನೀಡಿಲ್ಲ. ಮಳಿಗೆ ತೆರವು ಮಾಡಲು ಕಾಲಾವಕಾಶ ಕೇಳಿದ್ದೆವು. ಆದರೆ ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಮಾನವೀಯತೆ ದೃಷ್ಟಿಯಿಂದ ನಮ್ಮನ್ನು ನೋಡಲಿಲ್ಲ~ ಎಂದು ಬೆಳ್ಳಿ ಡಯೋಗ್ನೊಸ್ಟಿಕ್‌ನ ಬೆಳ್ಳಿ ಲೋಕೇಶ್ ದೂರಿದರು.

ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಶಾಸಕ ಎಸ್.ಶಿವಣ್ಣ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಜಿಲ್ಲಾಧಿಕಾರಿ ಆರ್.ಕೆ.ರಾಜು ಇದ್ದರು. ಜೆ.ಸಿ.ರಸ್ತೆಯಲ್ಲೇ ವರ್ತಕರ ಸಭೆ ನಡೆಸಿ ಅಭಿಪ್ರಾಯ ಕೇಳಿದ ನಂತರ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ವರ್ತಕರ ಮುಂದೆಯೇ ರಸ್ತೆಯ ಅಗಲವನ್ನು ಮತ್ತೊಮ್ಮೆ ಗುರುತು ಮಾಡುವುದಾಗಿ ಭರವಸೆ ನೀಡಿದ್ದರು. ಅವರ ಭರವಸೆ ನಂಬಿ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳದಲ್ಲಿದ್ದ ವ್ಯಾಪಾರಸ್ಥರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.