ADVERTISEMENT

ವಿವಿಧೆಡೆ ವ್ಯಾಪಕ ಮಳೆ: ನಷ್ಟ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 6:35 IST
Last Updated 27 ಏಪ್ರಿಲ್ 2012, 6:35 IST

ತಿಪಟೂರು: ತಾಲ್ಲೂಕಿನಲ್ಲಿ ಬುಧವಾರ ರಾತ್ರಿಯಿಡೀ ವ್ಯಾಪಕ ಮಳೆ ಆಯಿತು. ಕಸಬಾದಲ್ಲಿ ಗರಿಷ್ಠ 62.5 ಮಿಮೀ ದಾಖಲಾಗಿದೆ.

ಸಂಜೆ ಗುಡುಗು ಸಹಿತ ಆರಂಭವಾದ ಮಳೆ ಜನತೆಗೆ ತಂಪೆರೆಯಿತು. ಯಾವುದೇ ಹಾನಿಯಾದ ವರದಿಯಾಗಿಲ್ಲ.  ಏಪ್ರಿಲ್‌ನಲ್ಲಿ ವಾಡಿಕೆ ಮಳೆ ಪ್ರಮಾಣ 30 ಮಿಮೀ ಆಗಿತ್ತು.  ಆದರೆ ಈಗಾಗಲೇ ಸರಾಸರಿ 35 ಮಿಮೀ ದಾಖಲಾಗಿದೆ. ವಾಡಿಕೆಗಿಂತ ದುಪ್ಪಟ್ಟು ಮಳೆ ಬಿದ್ದಂತಾಗಿದೆ ಎನ್ನಲಾಗಿದೆ. ಕಸಬಾ-62.5 ಮಿಮೀ, ಹೊನ್ನವಳ್ಳಿ-5.2, ಕಿಬ್ಬನಹಳ್ಳಿ-26.4, ನೊಣವಿನಕೆರೆ-48.5, ಹಾಲ್ಕುರಿಕೆ- 13.2 ಮಿಮೀ ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಹಸು ಸಾವು, ಬಾಳೆಗೆ ನಷ್ಟ
ಚಿಕ್ಕನಾಯಕನಹಳ್ಳಿ :
ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಮಳೆಗೆ ಮನೆ ಕುಸಿದು ಎರಡು ಹಸು ಸಾವು, ನೂರಾರು ಬಾಳೆ ಗಿಡಗಳು ನೆಲಕ್ಕೂರಳಿವೆ.

ಬುಧವಾರ ಸಂಜೆ ತಾಲ್ಲೂಕಿನಾದ್ಯಂತ ಆರಂಭಗೊಂಡ ಮಳೆ ಗುರುವಾರ ಬೆಳಗಿನ ಜಾವದವರೆಗೂ ಸುರಿಯಿತು. ಗುಡುಗು, ಸಿಡಿಲು, ಗಾಳಿಯೊಂದಿಗೆ ಆರಂಭಗೊಂಡ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಎರೆಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಎರಡು ಹಸುಗಳು ಬಲಿಯಾಗಿವೆ.
 

16ನೇ ವಾರ್ಡಿನಲ್ಲಿ ವಾಸವಿದ್ದ ಮುಸ್ತಾಫಾ ಖಾನ್ ಎಂಬುವರ ಮನೆ ಗೋಡೆ ಕುಸಿದಿದೆ. ಕಾಮಲಾಪುರದಲ್ಲಿನ ರೈತರೊಬ್ಬರಿಗೆ ಸೇರಿದ ಸುಮಾರು 500 ಬಾಳೆ ಗಿಡಗಳು ನೆಲಕ್ಕೊರಗಿವೆ. ಚಿಕ್ಕನಾಯಕನಹಳ್ಳಿ-35ಮಿಮೀ, ಮತಿಘಟ್ಟ-12.02, ದೊಡ್ಡೆಣ್ಣೆಗೆರೆ-16.03, ಹುಲಿಯಾರು-48.04, ಬೋರನಕಣಿವೆ-25.04, ಶೆಟ್ಟಕೆರೆ-56.04, ಸಿಂಗದಹಳ್ಳಿ-36.04ರಷ್ಟು ಮಳೆ ಸುರಿದಿದೆ.

ಮೃತ ಕುಟುಂಬಗಳಿಗೆ ಪರಿಹಾರ: ಜಿಲ್ಲಾಧಿಕಾರಿ
ಮಧುಗಿರಿ:
ಪಟ್ಟಣದಲ್ಲಿ ಗೋಡೆ ಕುಸಿದು ಸಾವುನ್ನಪ್ಪಿದ ಮೃತರ ಕುಟುಂಬಗಳಿಗೆ ಪುರಸಭೆ ವತಿಯಿಂದ ತಲಾ  25 ಸಾವಿರ ಹಾಗೂ ಗಾಯಾಳುಗಳಿಗೆ ತಲಾ 5 ಸಾವಿರ ಪರಿಹಾರ ನೀಡುವಂತೆ ಪುರಸಭೆ ಅಧ್ಯಕ್ಷರಿಗೆ ಜಿಲ್ಲಾಧಿಕಾರಿ ಆರ್.ಕೆ.ರಾಜು ತಿಳಿಸಿದರು.

ಸ್ಧಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಮೃತರು ರೈತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಪುರಸಭೆ ಸದಸ್ಯರ ವಿಶೇಷ ಸಭೆ ಕರೆದು ಪರಿಹಾರ ಘೋಷಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ವೈದ್ಯಕೀಯ ವೆಚ್ಚ ಭರಿಸುವುದಾಗಿ ತಿಳಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಪಟ್ಟಣ ದಲ್ಲಿ ಅಗತ್ಯವಿರುವ ಕಡೆ ಬಸ್ ತಂಗು ದಾಣಗಳು ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಯೋಜನೆ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಹೇಳಿದ್ದಾರೆ. ತಹಶೀಲ್ದಾರ್ ಆರ್. ನಾಗರಾಜಶೆಟ್ಟಿ, ಪುರಸಭಾಧ್ಯಕ್ಷ ಎಂ.ಕೆ.ನಂಜುಂಡಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT