ADVERTISEMENT

ಶುದ್ಧೀಕರಣಗೊಳ್ಳದ ಕುಡಿಯುವ ನೀರು

ಪ್ರಜಾವಾಣಿ ವಿಶೇಷ
Published 6 ಸೆಪ್ಟೆಂಬರ್ 2013, 6:58 IST
Last Updated 6 ಸೆಪ್ಟೆಂಬರ್ 2013, 6:58 IST
ಗುಬ್ಬಿ ಪಟ್ಟಣ ಪಂಚಾಯಿತಿಯ ಕುಡಿಯುವ ನೀರು ಶುದ್ಧೀಕರಣ ಘಟಕದ ಮೋಟರ್ ಕೆಟ್ಟು ತುಕ್ಕು ಹಿಡಿದ ಪರಿಣಾಮ ನೀರು ಶುದ್ಧೀಕರಣವಾಗುತ್ತಿಲ್ಲ.
ಗುಬ್ಬಿ ಪಟ್ಟಣ ಪಂಚಾಯಿತಿಯ ಕುಡಿಯುವ ನೀರು ಶುದ್ಧೀಕರಣ ಘಟಕದ ಮೋಟರ್ ಕೆಟ್ಟು ತುಕ್ಕು ಹಿಡಿದ ಪರಿಣಾಮ ನೀರು ಶುದ್ಧೀಕರಣವಾಗುತ್ತಿಲ್ಲ.   

ಗುಬ್ಬಿ: ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಶುದ್ಧೀಕರಣ ಘಟಕದ ಮೋಟಾರ್‌ಗಳು ಕೆಟ್ಟು ತುಕ್ಕು ಹಿಡಿದಿವೆ. ಪಟ್ಟಣ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯದಿಂದ ವರ್ಷಗಳು ಕಳೆದರೂ ದುರಸ್ತಿಯಾಗದ ಕಾರಣ ಜನತೆ ಅಶುದ್ಧ ನೀರನ್ನೇ ಕುಡಿಯುತ್ತಿದ್ದಾರೆ.

ಪಟ್ಟಣದ 20 ಸಾವಿರ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು 10 ವರ್ಷದ ಹಿಂದೆ 40ಎಂಸಿಎಫ್ ಸಾಮರ್ಥ್ಯದ ಹೇರೂರು ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಕಳೆದ ಹಲ ವರ್ಷದಿಂದ ಪಟ್ಟಣಕ್ಕೆ ನೀರನ್ನೇನೋ ಒದಗಿಸಲಾಗುತ್ತಿದೆ. ಆದರೆ ಸಮರ್ಪಕ ನಿರ್ವಹಣೆಯಿಲ್ಲ. ಕೆರೆ ರಕ್ಷಿಸಲು ನಿರ್ಮಿಸಿರುವ ತಂತಿಬೇಲಿ ಕಿತ್ತಿದೆ. ಇದರಿಂದ ಸ್ಥಳೀಯರು ಬಟ್ಟೆ ತೊಳೆಯಲು, ಬಹಿರ್ದೆಸೆಗೆ ಹೋಗುವ ಸ್ಥಳವಾಗಿದೆ. ಇದರೊಟ್ಟಿಗೆ ಚರಂಡಿ ನೀರು ಕೆರೆಯನ್ನು ಸೇರುತ್ತಿದೆಯಾದರೂ; ಯಾರೂ ಈ ಬಗ್ಗೆ ಗಮನಹರಿಸಿಲ್ಲ.
ಹೇರೂರು ಕೆರೆ ನೀರಿನ ದುಸ್ಥಿತಿ ಇದಾದರೆ, ಪಟ್ಟಣಕ್ಕೆ ನೀರು ಪೂರೈಸುವ ಶುದ್ಧೀಕರಣ ಘಟಕದ ಯಂತ್ರಗಳು ಕೆಟ್ಟು ತುಕ್ಕು ಹಿಡಿದಿವೆ.

ಕ್ಲೋರಿನ್ ಯಂತ್ರಗಳಿಗೆ ಸಂಪರ್ಕ ಕಲ್ಪಿಸಿಲ್ಲ. ಮೇಲ್ನೋಟಕಷ್ಟೇ ನೀರು ಶುದ್ಧೀಕರಣ ಮಾಡುವಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ತಿಸುತ್ತಿದ್ದಾರೆ. ಹಲ ಮೋಟಾರ್ ಕೆಟ್ಟು ತುಕ್ಕು ಹಿಡಿದಿರುವುದು ಸಾರ್ವಜನಿಕರ‌್ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಮುಖ್ಯಾಧಿಕಾರಿಯನ್ನು ಕೇಳಿದರೆ ತೊಟ್ಟಿ ತಳಭಾಗದ ಮೋಟರ್‌ಗಳಿಂದ ನೀರು ಶುದ್ಧೀಕರಣವಾಗುತ್ತಿದೆ. ಮೇಲಿರುವ ಯಂತ್ರ ಕೆಟ್ಟಿವೆ. ಆದರೂ ಒಳ್ಳೇ ನೀರು ಕೊಡುತ್ತಿದ್ದೇವೆ ಎನ್ನುತ್ತಾರೆ.

ಆದರೆ ಮೋಟರುಗಳು ಹಲ ತಿಂಗಳಿನಿಂದ ಕೆಟ್ಟಿದ್ದರೂ ದುರಸ್ತಿ ಮಾಡಿಸಲು ಮುಂದಾಗಿಲ್ಲ. ತುಕ್ಕು ಹಿಡಿದ ಮೋಟರ್‌ಗಳು, ಸಂಪರ್ಕ ಕಲ್ಪಿಸದ, ಅವಧಿ ಮೀರಿದ ಕ್ಲೋರಿನ್ ಸಿಲಿಂಡರ್‌ಗಳು ನಿರ್ಲಕ್ಷ್ಯಕ್ಕೊಳಗಾಗಿದ್ದರೆ ಕುಡಿಯುವ ನೀರಿನ ಮೇಲೆ ಸತ್ತ ಮೀನುಗಳು, ಕಸ, ಮರದ ಎಲೆಗಳು ತೇಲುತ್ತಿರುವುದು ಕಂಡುಬಂದಿದೆ.

ನೀರು ಶುದ್ಧೀಕರಣಕ್ಕೆ ಬಳಸುವ ಆಲಂ (ಪಟಿಕ) ದಾಸ್ತಾನು ಸಂಗ್ರಹಣೆ ಸರಿಯಿಲ್ಲ. ಎಷ್ಟು ಪ್ರಮಾಣದಲ್ಲಿ ಆಲಂ ನೀರಿಗೆ ಮಿಶ್ರಣ ಮಾಡಬೇಕು ಎಂಬ ಬಗ್ಗೆ ಸೂಕ್ತ ತರಬೇತಿ ಪಡೆದ ನೌಕರರು ಇಲ್ಲ. ಇದರ ಜತೆ ಯಾವ ತಂತ್ರಜ್ಞಾನವೂ ಶುದ್ಧೀಕರಣದಲ್ಲಿ ಬಳಕೆಯಾಗುತ್ತಿಲ್ಲ. ಸಮಸ್ಯೆಗಳ ಸರಮಾಲೆಯಿದ್ದರೂ; ಸ್ಥಳೀಯ ಆಡಳಿತ ನಿರ್ಲಕ್ಷ್ಯ ಮುಂದುವರೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.