ADVERTISEMENT

ಸಭೆಯಲ್ಲಿ ಕಣ್ಣೀರಿಟ್ಟ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 9:25 IST
Last Updated 17 ಫೆಬ್ರುವರಿ 2011, 9:25 IST

ಚಿಕ್ಕನಾಯಕನಹಳ್ಳಿ: ಈಗ ಕಣ್ಣೀರಿಡುವ ಸರದಿ ಎಚ್.ಡಿ.ಕುಮಾರಸ್ವಾಮಿ ಅವರದ್ದು. ಸಭೆಗಳಲ್ಲಿ ಅಳುತ್ತಿದ್ದ ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ ಅವರ ಸಾಲಿಗೆ ಹೊಸ ಸೇರ್ಪಡೆ.ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಶಾಸಕ ಸಿ.ಬಿ.ಸುರೇಶ್ ಬಾಬು ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಉದ್ಯೋಗ ಮೇಳ ಹಾಗೂ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಕಣ್ಣೀರಿಟ್ಟ ಘಟನೆ ನಡೆಯಿತು.

ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಲಿಂಗಾಯತರ ವಿರೋಧಿ ಎಂಬ ಪಟ್ಟ ಕಟ್ಟುತ್ತಾರೆ, ಹಾಗಾದರೆ ನಾನು ಒಕ್ಕಲಿಗರಾಗಿ ಹುಟ್ಟಿದ್ದೇ ತಪ್ಪಾ. ಬಡವರ ಪರ ಕೆಲಸ ಮಾಡುವುದೇ ತಪ್ಪಾ. ಜನ ನನ್ನನ್ನು ರಾಜಕೀಯ ಬಿಡಿ ಎಂದರೆ ಇವತ್ತೇ ಬಿಡುತ್ತೇನೆ ಎಂದು ಹೇಳುತ್ತಲೇ ಕಣ್ಣೀರಿಟ್ಟರು.

ಬಡವರು, ದೀನ ದಲಿತರ ಬಗ್ಗೆ ಹಗಲಿರುಳು ದುಡಿಯುತ್ತಿದ್ದೇನೆ, ಜನತಾ ದರ್ಶನ, ಗ್ರಾಮ ವಾಸ್ತವ್ಯದ ಮೂಲಕ ಜನರ ಸಂಕಷ್ಟಗಳನ್ನು ಹತ್ತಿರದಿಂದ ನೋಡಿದ ಮೇಲೆ ನನಗಿರುವ ಹೃದಯ ರೋಗದ ತೊಂದರೆಯನ್ನು ಲೆಕ್ಕಿಸದೆ ಸ್ಪಂದಿಸಿದೆ ಎನ್ನುತ್ತಲೇ ಮಾತನಾಡಲಾಗದೆ ಕಣ್ಣೀರಾಕುತ್ತಾ ಮುಖ ಮುಚ್ಚಿಕೊಂಡು ಕ್ಷಣಕಾಲ ಮಾತು ನಿಲ್ಲಿಸಿದರು.

ನಂತರ ಮಾತನಾಡಲು ಪ್ರಯತ್ನಿಸಿದರೂ ಸ್ಪಷ್ಟ ಉಚ್ಚಾರಣೆ ಬಾರದೆ ಮಾತು ಮೊಟಕುಗೊಳಿಸಿ ಕರವಸ್ತ್ರದಲ್ಲಿ ಕಣ್ಣು ಒರೆಸಿಕೊಂಡು ಕುರ್ಚಿಯಲ್ಲಿ ಕುಳಿತೇ ಬಿಟ್ಟರು.ಯಡಿಯೂರಪ್ಪ ಅವರು ಕಳೆದ ಬಜೆಟ್‌ನ ಯೋಜನೆಗಳನ್ನೇ ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಖಜಾನೆ ಬರಿದು ಮಾಡಿಕೊಂಡಿದ್ದು, ಕೃಷಿ ಬಜೆಟ್‌ಗೆ ಎಲ್ಲಿಂದ ಹಣ ನೀಡುತ್ತಾರೆ ಎಂದು ಲೇವಡಿ ಮಾಡಿದರು.

‘ಭ್ರಷ್ಟಾಚಾರದಲ್ಲಿ ಮುಳುಗಿರುವ ಯಡಿಯೂರಪ್ಪ ಬಗ್ಗೆ ಮಾತನಾಡಿದರೆ, ನನ್ನನ್ನು ಲಿಂಗಾಯತರ ವಿರೋಧಿ ಎನ್ನುತ್ತಾರೆ. ನಾನು ಕೇಳುವುದು ಇಷ್ಟೇ, ಈ ರಾಜ್ಯ ಉಳಿಯಬೇಕೆ ಅಥವಾ ಯಡಿಯೂರಪ್ಪ ಉಳಿಯಬೇಕೆ? ನಿರ್ಧರಿಸಿ’ ಎಂದರು.

ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ ‘ನನ್ನ ಹುಟ್ಟು ಹಬ್ಬವನ್ನು ಆಡಂಬರಕ್ಕಾಗಿ ಆಚರಣೆ ಮಾಡಿಕೊಳ್ಳುತ್ತಿಲ್ಲ. ಜನತೆಯ ಆರೋಗ್ಯ, ಉದ್ಯೋಗದ ಸಮಸ್ಯೆಗಳನ್ನು ಈಡೇರಿಸುವ ಪ್ರಯತ್ನವಾಗಿ ಈ ಕಾರ್ಯವನ್ನು ಮಾಡುತ್ತಿದ್ದೇನೆ’ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಶ್ರೀನಿವಾಸ್, ಜೆಡಿಎಸ್ ಮುಖಂಡ ಮುದ್ದುಹನುಮೇಗೌಡ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ರವಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಪುರಸಭಾ ಅಧ್ಯಕ್ಷ ರಾಜಣ್ಣ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.