ADVERTISEMENT

ಸಭೆಯಲ್ಲಿ ಪ್ರತಿಧ್ವನಿಸಿದ ಸಿಲಿಂಡರ್ ಸಮಸ್ಯೆ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 9:33 IST
Last Updated 20 ಡಿಸೆಂಬರ್ 2012, 9:33 IST

ಗುಬ್ಬಿ: ಗ್ಯಾಸ್ ಸಿಲಿಂಡರ್‌ಗಳನ್ನು ಪಡೆಯಲು ಸರದಿಯಲ್ಲಿ ಕಾದು ನಿಲ್ಲುವ ಹತ್ತಾರು ರೈತರು ಗ್ಯಾಸ್ ಪಡೆಯದೆ ಪ್ರತಿದಿನ ಹಿಂದಿರುಗುತ್ತಿದ್ದಾರೆ. ಅಕ್ರಮ ಗ್ಯಾಸ್ ಮಾರಾಟವಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಲ್.ಕೆ.ರಾಜಣ್ಣ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆ.ಜಿ.ಟೆಂಪಲ್, ಕುನ್ನಾಲ ಗ್ರಾಮಗಳು ಅಕ್ರಮ ಗ್ಯಾಸ್ ಸಿಲಿಂಡರ್ ವಹಿವಾಟಿಗೆ ತೆರೆದ ಮಾರುಕಟ್ಟೆಯಾಗಿದೆ. ಇಲ್ಲಿ ಒಂದು ಮನೆಗೆ ಮೂರ್ನಾಲ್ಕು ಕಾರ್ಡ್ ಇವೆ. ನ್ಯಾಯಬೆಲೆ ಅಂಗಡಿ ಹತ್ತಿರ ನಿತ್ಯ ಗಲಾಟೆ ಇದೆ. ಯಾವ ಅಧಿಕಾರಿಯೂ ಸಮಸ್ಯೆ ಬಗೆಹರಿಸಿಲ್ಲ ಎಂದರು.

ಗೋಪಾಲಪುರದಲ್ಲಿ ಆರೋಗ್ಯ ಸಹಾಯಕಿ ಇಲ್ಲದ ಕಾರಣ ಆರೋಗ್ಯ ಕೇಂದ್ರಕ್ಕೆ ಬೀಗ ಬಿದ್ದಿದೆ. ಹಾವು ಕಡಿದವರಿಗೆ ಔಷಧಿ ಸಿಗುತ್ತಿಲ್ಲ. ಶಾಲೆಗಳಲ್ಲಿ ಬಿಸಿಯೂಟಕ್ಕಾಗಿ ಒಂದು ವಾರಕ್ಕೆ ಬೇಕಾಗುವಷ್ಟು ತರಕಾರಿಯನ್ನು ಒಮ್ಮೆಲೆ ಕೊಳ್ಳುತ್ತಾರೆ. ಮಕ್ಕಳಿಗೆ ಪ್ರತಿದಿನ ಕೊಳೆತ ತರಕಾರಿ ನೀಡುತ್ತಾರೆ ಎಂದು ಸದಸ್ಯರು ದೂರಿದರು.

ಬಿಕ್ಕೆಗುಡ್ಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮಸ್ಯೆ ಪ್ರಸ್ತಾಪವಾದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್ ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಸಮಜಾಯಿಷಿ ನೀಡಿದರು.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯ ಮಾರಾಟ ವಹಿವಾಟು ಹಾಗೂ ಹಲವು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಗೈರು ಹಾಜರಾದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ತಾ.ಪಂ. ಉಪಾಧ್ಯಕ್ಷೆ ಚಿಕ್ಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.