ADVERTISEMENT

ಸಿಇಟಿ: ರ‌್ಯಾಂಕ್ ವಿಜೇತೆಯ ಎರಡು ಕನಸು

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 9:00 IST
Last Updated 1 ಜೂನ್ 2011, 9:00 IST

ತುಮಕೂರು: ಸಿಇಟಿ ಆರ್ಕಿಟೆಕ್ಟ್‌ನಲ್ಲಿ ರಾಜ್ಯಕ್ಕೆ 8ನೇ ರ‌್ಯಾಂಕ್ ಹಾಗೂ ವೈದ್ಯಕೀಯದಲ್ಲಿ 14ನೇ ರ‌್ಯಾಂಕ್ ಗಳಿಸುವ ಮೂಲಕ ನಗರದ ಇಬ್ಬರು ವಿದ್ಯಾರ್ಥಿಗಳು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಅಚ್ಚರಿ ಎಂದರೆ ಈ ಇಬ್ಬರು ವಿದ್ಯಾರ್ಥಿಗಳು ಸಿಇಟಿಗಾಗಿ ಯಾವುದೇ ಟ್ಯೂಷನ್, ತರಬೇತಿ ಪಡೆಯದೆ ಈ ಸಾಧನೆ ಮಾಡಿರುವುದು ಗಮನಾರ್ಹ.

ನಗರದ ವೈಷ್ಣವಿ ಚೇತನ ಕಾಲೇಜಿನ ವಿದ್ಯಾರ್ಥಿನಿ ವಿಶಾಖ ಆರ್ಕಿಟೆಕ್ಟ್‌ನಲ್ಲಿ 8ನೇ ರ‌್ಯಾಂಕ್ ಗಳಿಸಿದ್ದಾರೆ. ವೈದ್ಯಕೀಯದಲ್ಲಿ 1318 ರ‌್ಯಾಂಕ್ ಹಾಗೂ ಎಂಜಿನಿಯರಿಂಗ್‌ನಲ್ಲಿ 3345 ರ‌್ಯಾಂಕ್ ಪಡೆದಿದ್ದಾರೆ.

`ಕೌನ್ಸೆಲಿಂಗ್‌ಗೆ ಹೋದಾಗ ಉತ್ತಮ ಕಾಲೇಜು ಸಿಕ್ಕರೆ ಮಾತ್ರ ಆರ್ಕಿಟೆಕ್ಟ್ ಆಯ್ಕೆ ಮಾಡಿಕೊಳ್ಳುತ್ತೇನೆ. ಇಲ್ಲದಿದ್ದರೆ ಎಂಬಿಬಿಎಸ್ ಆಯ್ಕೆ ಮಾಡಿಕೊಳ್ಳುತ್ತೇನೆ~ ಎಂದು `ಪ್ರಜಾವಾಣಿ~ಗೆ ವಿಶಾಖ ತಿಳಿಸಿದರು.

ಮೊದಲಿನಿಂದಲೂ ಡ್ರಾಯಿಂಗ್‌ನಲ್ಲಿ ಆಸಕ್ತಿ. ಚಿತ್ರಕಲೆಯಲ್ಲಿನ ಆಸಕ್ತಿ ರ‌್ಯಾಂಕ್‌ಗೆ ಸಹಾಯ ಆಯ್ತು. ಕಾಲೇಜಿನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ನೀಡುವಂತೆ ಸಿಇಟಿ ಮಾರ್ಗದರ್ಶನ ನೀಡಿದ್ದರು. ಹತ್ತನೇ ತರಗತಿಯಲ್ಲಿ ಜಿಲ್ಲೆಗೆ (609 ಅಂಕ) ಮೂರನೇ ಸ್ಥಾನ ಗಳಿಸಿದ್ದೆ. ಹೀಗಾಗಿ ಕಾಲೇಜಿನ ಆಡಳಿತ ಮಂಡಳಿಯು ಪಿಯುಸಿಗೆ ಉಚಿತವಾಗಿ ಪ್ರವೇಶ ನೀಡಿತ್ತು ಎಂದರು.

ಮನೆಯಲ್ಲಿ ಓದಲು ಒತ್ತಡ ಇರಲಿಲ್ಲ. ಸಬ್ಜೆಕ್ಟ್ ಮೇಲೆ ಆಸಕ್ತಿ, ಹೆಚ್ಚಿನದನ್ನು ತಿಳಿದುಕೊಳ್ಳಬೇಕು ಎಂಬ ಆಕಾಂಕ್ಷೆ ಕಾರಣ ಹೆಚ್ಚೆಚ್ಚು ಅಧ್ಯಯನ ನಡೆಸುತ್ತಿದ್ದೆ. ಯಾವುದನ್ನು ಕಷ್ಟಪಟ್ಟು ಓದೋದಕ್ಕಿಂತ ಇಷ್ಟಪಟ್ಟು ಓದಬೇಕು. ಪಠ್ಯ ಇಷ್ಟಪಟ್ಟಾಗ ಪ್ರತಿಯೊಂದು ಟಾಪಿಕ್ಸ್‌ನಲ್ಲಿ ಪರ್ಫೆಕ್ಷನ್ ಬರುವಂತೆ ಮನಸ್ಸು ರೆಡಿಯಾಗುತ್ತೆ ಎಂದು ಅನುಭವ ಹಂಚಿಕೊಂಡರು.

ವೈದ್ಯಕೀಯ, ಎಂಜಿನಿಯರಿಂಗ್‌ನಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದೆ. ಆದರೆ ವೈದ್ಯಕೀಯದಲ್ಲಿ ಕಡಿಮೆ ರ‌್ಯಾಂಕ್ ಬರಬಹುದೆಂಬ ಭಯದಲ್ಲಿ ಇನ್ನು ಹತ್ತು ದಿನ ಇರುವಾಗ ಆರ್ಕಿಟೆಕ್ಟ್‌ನಲ್ಲಿ ಸಿಇಟಿ ಬರೆಯಲು ಮುಂದಾದೆ.

ಹತ್ತೇ ದಿನದಲ್ಲಿ ಓದಿ ರ‌್ಯಾಂಕ್ ಪಡೆದೆ ಎಂದು ನಸುನಕ್ಕರು. ಅಂದ ಹಾಗೆ ಚಿತ್ರಕಲೆಯಲ್ಲಿ ಸುಮಾರು 200ಕ್ಕೂ ಅಧಿಕ ಬಹುಮಾನ, ರಾಜ್ಯಮಟ್ಟದ ಪ್ರಶಸ್ತಿ ವಿಶಾಖ ಬೆನ್ನಿಗಿವೆ.

ಅರಳಿದ ಪ್ರತಿಭೆಗೆ `ವೈದ್ಯ~ ಬಯಕೆ 
 

ಚೇತನ
ಕೆ.ಎಂ.ನಿತಿನ್

ತುಮಕೂರು: ಸರ್ವೋದಯ ಕಾಲೇಜಿನ ಕೆ.ಎಂ.ನಿತಿನ್ ಅಪ್ಪಟ ಗ್ರಾಮೀಣ ಪ್ರತಿಭೆ. ಪ್ರೌಢಶಾಲೆವರೆಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ್ದರೂ ಸಿಇಟಿ ವೈದ್ಯಕೀಯದಲ್ಲಿ ರಾಜ್ಯಕ್ಕೆ 14ನೇ ರ‌್ಯಾಂಕ್ (ಜಿಲ್ಲೆಗೆ ಮೊದಲು) ಪಡೆದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಚಿಕ್ಕನಾಯಕನಹಳ್ಳಿ ಕೆಂಕರೆಯಲ್ಲಿರುವ ಹುಳಿಯಾರು-ಕೆಂಕರೆ ಪದವಿ ಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿವರೆಗೆ ವ್ಯಾಸಂಗ. ಸಿಇಟಿಗಾಗಿ ಟ್ಯೂಷನ್‌ಗೆ ಹೋಗಿಲ್ಲ. ಮನೆಯಲ್ಲಿಯೇ ಕುಳಿತು ಓದಿದೆ. ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಪೋಷಕರು ಸಿಇಟಿ ಕೋಚಿಂಗ್‌ಗೆ ಹೋಗುವಂತೆ ಸಲಹೆ ನೀಡಿದರೂ ಅದನ್ನು ನಿರಾಕರಿಸಿದೆ ಎಂದು ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದರು.

ಚಿಕ್ಕಂದಿನಿಂದಲೂ ವೈದ್ಯನಾಗಬೇಕು ಎಂಬ ಆಸೆ ಇತ್ತು. ಎಂಬಿಬಿಎಸ್ ಬಳಿಕ ರೇಡಿಯೋಲಜಿಯಲ್ಲಿ ಎಂಎಸ್ ಮಾಡುವ ಬಯಕೆಯಿದೆ. ತಂದೆ-ತಾಯಿ ಪೋಷಕರ ಸಹಾಯ, ಉಪನ್ಯಾಸಕರಾದ ಎಸ್.ರಾಜಣ್ಣ, ಲತಾ, ವೆಂಕಟೇಶ್ ನೆರವು ನೀಡಿದರು. ನಮ್ಮ ತಾಲ್ಲೂಕಿನವರೇ ಆದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗನಾಥ್ ಮಾರ್ಗದರ್ಶನ ರ‌್ಯಾಂಕ್ ಗಳಿಸಲು ಸಹಕಾರಿಯಾಯಿತು. 200 ಒಳಗಿನ ರ‌್ಯಾಂಕ್ ಬರುತ್ತೆ ಎಂದುಕೊಂಡಿದ್ದೆ. 14ನೇ ರ‌್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ ಎಂದರು.

`ಸಿಇಟಿ ಪರೀಕ್ಷೆ ಕಾನ್ಸೆಪ್ಟ್ ಚೆನ್ನಾಗಿ ತಿಳಿದುಕೊಳ್ಳಬೇಕು. ಸಿಇಟಿ ಕೋಚಿಂಗ್‌ಗಿಂತ ಪಠ್ಯ ಪುಸ್ತಕ ಚೆನ್ನಾಗಿ ಓದಬೇಕು ಎಂದು ತಮ್ಮ ಯಶಸ್ಸಿನ ಗುಟ್ಟು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT