ADVERTISEMENT

ಹೊನ್ನವಳ್ಳಿ ಯೋಜನೆ: ಫೆಬ್ರುವರಿವರೆಗೆ ನೀರು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 8:54 IST
Last Updated 13 ಡಿಸೆಂಬರ್ 2013, 8:54 IST

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಅವಧಿ ಹಂಚಿಕೆ ಪ್ರಮಾಣದಲ್ಲಿ ಫೆಬ್ರುವರಿಯಿಂದ ನೀರು ಪೂರೈಕೆ ಮುಂದುವರಿಸಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವ್ಯಾಪ್ತಿಯ ನೀರಿನ ಸಮಸ್ಯೆ ಅರಿತು ಸರ್ಕಾರದ ಮಟ್ಟದಲ್ಲಿ ಮನವರಿಕೆ ಮಾಡಿದ್ದರಿಂದ ಫೆಬ್ರುವರಿವರೆಗೆ ಹೊನ್ನವಳ್ಳಿ ಯೋಜನೆ ವ್ಯಾಪ್ತಿ ಕೆರೆಗಳಿಗೆ ನೀರು ಹರಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಈಗಾಗಲೇ ಅವಧಿ ಮುಗಿದಿದ್ದರೂ ನೀರು ಪೂರೈಕೆ ಮುಂದುವರಿದಿದೆ. ನಿಗದಿತ ಅನುಪಾತ ಹಂಚಿಕೆ­ಯಲ್ಲಿ ಸಂಬಂಧಿಸಿದ ಕೆರೆಗಳಿಗೆ ಫೆಬ್ರುವರಿವರೆಗೆ ನೀರು ಪೂರೈಕೆಯಾಗುತ್ತದೆ ಎಂದರು.

ಇದಲ್ಲದೆ ಈ ಯೋಜನೆ ವ್ಯಾಪ್ತಿ ಕೆರೆಗಳಿಗೆ ವಾರ್ಷಿಕ ನಿಗದಿ ಪಡಿಸಿರುವ ನೀರು ಮತ್ತು ವಿದ್ಯುತ್ ಬಳಕೆ ಪ್ರಮಾಣವನ್ನು ಎರಡು ಪಟ್ಟು ಶಾಶ್ವತವಾಗಿ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಯೋಜನೆ ವ್ಯಾಪ್ತಿಗೆ ಶಿವರ, ಗೌಡನಕಟ್ಟೆ, ಮಾದಿಹಳ್ಳಿ, ಭೈರನಾಯ್ಕನಹಳ್ಳಿ, ಸಾರ್ಥವಳ್ಳಿ ಕೆರೆಗಳನ್ನು ಸೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಅವುಗಳ ಲೆಕ್ಕದಲ್ಲೂ ಮತ್ತಷ್ಟು ಹೆಚ್ಚು ನೀರು ಪಡೆಯುವ ಪ್ರಯತ್ನ ನಡೆದಿದೆ. ಹೇಮಾವತಿ ನೀರನ್ನು ತಾಲ್ಲೂಕಿಗೆ ಸಾಧ್ಯವಾದಷ್ಟು ಹೆಚ್ಚು ಬಳಸಿಕೊಳ್ಳಲು ಗುಂಗುರಮಳೆ, ಅರಳಗುಪ್ಪೆ, ಹಿಂಡಿಸ್ಕೆರೆ ಕೆರೆಗಳಿಗೆ ನಾಲೆಯಿಂದ ನೀರೆತ್ತಿಕೊಳ್ಳುವ ಯೋಜನೆಯೂ ಸರ್ಕಾರದ ಮುಂದಿದೆ ಎಂದು ತಿಳಿಸಿದರು.

ಆರೋಪ ಸುಳ್ಳು: ಹೊನ್ನವಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಎಲ್ಲಾ ಕೆರೆಗಳಿಗೆ ಈ ವರ್ಷ ನಿಗದಿಯಂತೆ ನೀರು ಹರಿಸಲಾಗಿದೆ. ನಿಗದಿತ 2880 ಗಂಟೆಗಿಂತ ಹೆಚ್ಚು, ಅಂದರೆ 3254 ಗಂಟೆ ಮತ್ತು ನಿಗದಿತ 93.56 ಎಂಸಿಎಫ್‌ಟಿಗಿಂತ ಹೆಚ್ಚು ಅಂದರೆ 104.14 ಎಂಸಿಎಫ್‌ಟಿ ನೀರು ಹರಿಸಲಾಗಿದೆ. ಇದು ಕುಡಿಯುವ ನೀರಿನ ಯೋಜನೆಯಾದ್ದರಿಂದ ಕೆಲ ಮಿತಿಗಳಿವೆ. ಆಯಾ ಗ್ರಾಮಗಳ ಜನಸಂಖ್ಯೆ ಆಧರಿಸಿ ನಿಗದಿಪಡಿಸಿರುವ ಪ್ರಮಾಣದಲ್ಲಿ ಎಲ್ಲಾ ಕೆರೆಗಳಿಗೆ ನೀರು ಹರಿದಿದೆ ಎಂದು ಹೇಳಿದರು.

ಈ ವಾಸ್ತವವನ್ನು ಮರೆ ಮಾಚಿ, ಶಾಸಕರು ಕೆರೆಗಳಿಗೆ ನೀರು ತುಂಬಿಸಿಲ್ಲವೆಂದು ಕೆಲ ರಾಜಕಾರಣಿಗಳು ಆರೋಪ ಮಾಡಿದ್ದಾರೆ. ಸಾರ್ಥವಳ್ಳಿ ಕೆರೆಯನ್ನು ಅಧಿಕೃತವಾಗಿ ಯೋಜನೆಗೆ ಸೇರಿಸದ ಹಿಂದಿನ ಶಾಸಕರು ಆ ಕೆರೆಗೆ ನೀರು ಹರಿಸಿಲ್ಲವೆಂದು ಪ್ರತಿಭಟಿಸಿ, ಜನರಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿಲ್ಲ. ಹೊಸ ಯೋಜನೆಗಳಿಗೆ 2-3 ತಿಂಗಳಲ್ಲಿ ಚಾಲನೆ ದೊರೆಯಲಿದೆ. ಸುವರ್ಣ ಗ್ರಾಮ, ನಮ್ಮ ಊರು-ನಮ್ಮ ರಸ್ತೆಯಂತಹ ಯೋಜನೆ ಕಾಮಗಾರಿ ಶುರುವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಚುರುಕುಗೊಳಿಸಲು ನಾನೇ ಹಳ್ಳಿಗಳಲ್ಲಿ ಓಡಾಡುತ್ತೇನೆ ಎಂದರು.

ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಪರಮಶಿವಯ್ಯ, ತಾಲ್ಲೂಕು ಕಾಂಗ್ರೆಸ್ ವಕ್ತಾರ ಕೆ.ಎಸ್‌.ಸದಾಶಿವಯ್ಯ, ನಗರ ಘಟಕದ ಅಧ್ಯಕ್ಷ ಸಿ.ಬಿ.ಶಶಿಧರ್, ನಗರಸಭೆ ಸದಸ್ಯ ಟಿ.ಜಿ.ಲಿಂಗರಾಜು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.