ADVERTISEMENT

ಹೋರಾಟದ ಹಾದಿ ನೆನೆನೆನೆದು...

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 8:45 IST
Last Updated 8 ಮಾರ್ಚ್ 2011, 8:45 IST

ತುಮಕೂರು: ಗೂಳೂರು- ಹೆಬ್ಬೂರು ಏತ ನೀರಾವರಿ ಯೋಜನೆ ಮೊದಲನೇ ಹಂತದ ಕಾಮಗಾರಿ ಮುಗಿದಿದೆ. ಆದರೆ ಯೋಜನೆ ಜಾರಿಗಾಗಿ ನಡೆದ ಹೋರಾಟಕ್ಕೆ ಹಲವು ದಶಕಗಳ ಇತಿಹಾಸವಿದೆ. ಹಲವು ಪ್ರಮುಖರು ಯೋಜನೆ ಜಾರಿಗಾಗಿ ಶ್ರಮಿಸಿದ್ದರು. ಯೋಜನೆಗೆ ಎರಡು ಬಾರಿ ಟೆಂಡರ್ ಕರೆದರೂ ನೆನೆಗುದಿಗೆ ಬಿದ್ದಿತ್ತು.

ಮಾಜಿ ಶಾಸಕರಾದ ಎಸ್.ಪಿ.ಮುದ್ದಹನುಮೇಗೌಡ, ಎಚ್.ನಿಂಗಪ್ಪ, ಹುಚ್ಚಮಾಸ್ತಿಗೌಡ ಮುಂತಾದವರು ಯೋಜನೆ ಜಾರಿಗಾಗಿ ಶ್ರಮಿಸಿದ್ದರು. ವಿವಿಧ ಹಂತದಲ್ಲಿ ಹೋರಾಟ ನಡೆಸಿದ್ದರು. ಆದರೆ ತಮಿಳುನಾಡು ಕ್ಯಾತೆ ತೆಗಿದಿದ್ದರಿಂದ ಯೋಜನೆ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿತ್ತು. ಕೊನೆಗೆ ಶಾಸಕ ಬಿ.ಸುರೇಶ್‌ಗೌಡ ಅವರ ಪ್ರಯತ್ನದಿಂದ ಯೋಜನೆಗೆ ಕೊನೆಗೂ ಮುಕ್ತಿ ಸಿಕ್ಕಿದಂತಾಗಿದೆ.

ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹುಲಿಯೂರುದುರ್ಗ ಕ್ಷೇತ್ರದ ಶಾಸಕ ಹುಚ್ಚಮಾಸ್ತಿಗೌಡ ಕಂದಾಯ ಸಚಿವರಾಗಿದ್ದರು. ಇಂತಹದೊಂದು ಯೋಜನೆ ರೂಪಿಸಬಹುದೆಂದು 1976ರಲ್ಲಿಯೇ ಮೊದಲಿಗೆ ಕನಸು ಕಂಡವರು. ಆದರೆ ಅವರ ಕಾಲದಲ್ಲಿ ಯೋಜನೆ ಜಾರಿ ಸಾಧ್ಯವಾಗಲಿಲ್ಲ.

1993ರಲ್ಲಿ ಗೂಳೂರು- ಹೆಬ್ಬೂರು ಏತ ನೀರಾವರಿ ಹೋರಾಟ ಸಮಿತಿ ರಚನೆಯಾಯಿತು. ಮಾಜಿ ಶಾಸಕ ದಿವಂಗತ ಗಂಗಾಭೋವಿ ಅಧ್ಯಕ್ಷರಾಗಿದ್ದರು, ಶಂಕರಪ್ಪ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ (ಆಗ ಶಾಸಕರಲ್ಲ) ಎಚ್.ನಿಂಗಪ್ಪ ಸಂಚಾಲಕರಾಗಿದ್ದರು. ನಂತರ ನಿರಂತರವಾಗಿ ಆಡಳಿತ ಪಕ್ಷಕ್ಕೆ ಮನವಿ ಸಲ್ಲಿಸುವುದು, ರಸ್ತೆ ತಡೆ, ಪ್ರತಿಭಟನೆ, ಪಾದಯಾತ್ರೆ ಮುಂತಾದ ಹೋರಾಟ ನಡೆಯಿತು. 2003ರಲ್ಲಿ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಮನವಿ ಸಲ್ಲಿಸಿದ್ದರು.

1994ರಲ್ಲಿ ಎಸ್.ಪಿ.ಮುದ್ದಹನುಮೇಗೌಡ ಈ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾ–ಗಿದ್ದರು. ಯೋಜನೆಯ ಬಗ್ಗೆ ವಿಧಾನಸಭೆಯಲ್ಲಿ ಮೊದಲಿಗೆ ಚರ್ಚಿಸಿದ್ದರು. ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾಗಿದ್ದರು. ಯೋಜನೆ ಜಾರಿಗೆ ಜೆಡಿಎಸ್‌ನ ಎಚ್.ನಿಂಗಪ್ಪ ಮನವಿ ಸಲ್ಲಿಸಿದ್ದರು. ಆದರೆ ಸರ್ಕಾರದಿಂದ ಯೋಜನೆ ಬಗ್ಗೆ ಪೂರಕ ಪ್ರತಿಕ್ರಿಯೆ ದೊರೆಯಲಿಲ್ಲ.1999ರಲ್ಲಿ ಎಸ್.ಪಿ.ಮುದ್ದಹನುಮೇಗೌಡ ಮತ್ತೆ ಶಾಸಕರಾದರು. ಆಗ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ. 2000ದಲ್ಲಿ ಯೋಜನೆ ಸ್ಪಷ್ಟರೂಪ ಪಡೆಯಿತು.

ಯೋಜನೆ ಜಾರಿ ಬಗ್ಗೆ ವರದಿ ಪಡೆಯಲಾಯಿತು. ಯೋಜನೆಗಾಗಿ ಮುದ್ದಹನುಮೇಗೌಡ ಅವರ ಸತತ ಪರಿಶ್ರಮದಿಂದ 2003ರಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿ ದೊರೆಯಿತು. 2004 ಫೆಬ್ರುವರಿಯಲ್ಲಿ ಯೋಜನೆಗೆ ಶಂಕುಸ್ಥಾಪನೆ ನಡೆಯಿತು. ಆದರೆ ಅದೇ ಸಮಯಕ್ಕೆ ನಡೆದ ಚುನಾವಣೆಯಲ್ಲಿ ಮುದ್ದಹನುಮೇಗೌಡ ಸೋತರು. ಜೆಡಿಎಸ್‌ನ ಎಚ್.ನಿಂಗಪ್ಪ ಶಾಸಕರಾದರು.

ಆದರೆ ತಮಿಳುನಾಡು ಯೋಜನೆ ಪ್ರಶ್ನಿಸಿ ಮಂಡಳಿಯಲ್ಲಿ ರಿಟ್ ಸಲ್ಲಿಸಿತು. ಯೋಜನೆಗೆ ಮಂಡಳಿ ತಡೆಯಾಜ್ಞೆ ನೀಡಿತು. ಆನಂತರ ಕಾವೇರಿ ನ್ಯಾಯಮಂಡಳಿ ತೀರ್ಪು ಬಂತು. ತದನಂತರ ಯೋಜನೆ ಜಾರಿಗಾಗಿ ಮುದ್ದಹನುಮೇಗೌಡ ಮತ್ತು ನಿಂಗಪ್ಪ ಪ್ರಯತ್ನ ಮುಂದುವರಿಸಿದರು. ಈ ಸಂದರ್ಭದಲ್ಲಿ ಮುದ್ದಹನುಮೇಗೌಡ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಯೋಜನೆ ಜಾರಿ ಸಾಧ್ಯವಿಲ್ಲ ಎಂದು ಆಗ ಬಿ.ಸುರೇಶ್‌ಗೌಡ ಟೀಕಿಸಿದ್ದರು.

ಮತ್ತೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯೋಜನೆಗೆ ಜೀವಬಂತು. ಸುಮಾರು ರೂ. 33 ಕೋಟಿ ಯೋಜನೆಗೆ ಟೆಂಡರ್ ಕರೆಯಲಾಯಿತು. ಆದರೆ ಜೆಡಿಎಸ್- ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಿದ್ದುಹೋದ ಕಾರಣ ಯೋಜನೆ ಮತ್ತೆ ಕಡತ ಸೇರಿತ್ತು.

2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಬಿ.ಸುರೇಶ್‌ಗೌಡ ಶಾಸಕರಾದರು. ಯೋಜನೆ ಜಾರಿಗಾಗಿ ನಿರಂತರ ಒತ್ತಡ ತಂದರು. 2008 ಆಗಸ್ಟ್‌ನಲ್ಲಿ ಆಡಳಿತಾತ್ಮಕ ಮಂಜೂರಾತಿ ದೊರೆಯಿತು. ಕಳೆದ 2009 ಫೆಬ್ರುವರಿಯಲ್ಲಿ 55 ಕೋಟಿ ರೂಪಾಯಿಗೆ ಟೆಂಡರ್ ಕರೆಯಲಾಯಿತು. ಯೋಜನೆಯನ್ನು 2 ಹಂತದಲ್ಲಿ ಜಾರಿಗೊಳಿಸಲಾಯಿತು. ಈಗ ಮೊದಲನೇ ಹಂತದ ಯೋಜನೆ ಮುಕ್ತಾಯವಾಗಿದ್ದು, ಕೆರೆಗಳಿಗೆ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.