ADVERTISEMENT

ತುಮಕೂರು: ತಿಂಗಳಲ್ಲಿ 18 ಪೋಕ್ಸೊ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 16:39 IST
Last Updated 7 ಫೆಬ್ರುವರಿ 2025, 16:39 IST
ತುಮಕೂರಿನಲ್ಲಿ ಶುಕ್ರವಾರ ಮಕ್ಕಳ ರಕ್ಷಣಾ ಸಮಿತಿ ಪ್ರತಿನಿಧಿಸುವ ಮಕ್ಕಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ, ನ್ಯಾಯಾಧೀಶರಾದ ನೂರುನ್ನಿಸಾ, ಪವಿತ್ರ ಇತರರು ಪಾಲ್ಗೊಂಡಿದ್ದರು
ತುಮಕೂರಿನಲ್ಲಿ ಶುಕ್ರವಾರ ಮಕ್ಕಳ ರಕ್ಷಣಾ ಸಮಿತಿ ಪ್ರತಿನಿಧಿಸುವ ಮಕ್ಕಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ, ನ್ಯಾಯಾಧೀಶರಾದ ನೂರುನ್ನಿಸಾ, ಪವಿತ್ರ ಇತರರು ಪಾಲ್ಗೊಂಡಿದ್ದರು   

ತುಮಕೂರು: ಜಿಲ್ಲೆಯಲ್ಲೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ ಹೆಚ್ಚುತ್ತಿದ್ದು, ಕಳೆದ ಜನವರಿ ತಿಂಗಳಲ್ಲೇ 18 ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ನ್ಯಾಯಾಧೀಶರಾದ ನೂರುನ್ನಿಸಾ ಇಲ್ಲಿ ಶುಕ್ರವಾರ ಆತಂಕ ವ್ಯಕ್ತಪಡಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೊಬಿಲಿಟಿ ಇಂಡಿಯಾ ಸಂಸ್ಥೆ ವತಿಯಿಂದ ಪ್ರೌಢ ಶಾಲಾ ಹಂತದ ಮಕ್ಕಳ ರಕ್ಷಣಾ ಸಮಿತಿ ಪ್ರತಿನಿಧಿಸುವ ಮಕ್ಕಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಕ್ಕಳ ಮುಗ್ಧತೆ ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಸಾಮಾಜಿಕ ಜಾಲ ತಾಣ ಬಳಸುವ ವೇಳೆ ಎಚ್ಚರಿಕೆ ವಹಿಸಬೇಕು. ಸಮಾಜಘಾತುಕರೊಂದಿಗೆ ಸಂಪರ್ಕ ಪಡೆದರೆ ವಿಚಾರಣೆ, ಜೀವನವಿಡಿ, ಜೈಲು, ಕೋರ್ಟ್ ಅಲೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ, ‘ಭಾರತದಲ್ಲೇ ಮೊದಲ ಬಾರಿಗೆ 2016ರಲ್ಲಿ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ನೀತಿ ರೂಪಿಸಲಾಗಿದೆ. ನೀತಿ ರೂಪಿಸಿ ಇಷ್ಟು ವರ್ಷಗಳಾದರೂ ಯಾವ ಶಾಲಾ, ಕಾಲೇಜುಗಳೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ವಿಷಾದಿಸಿದರು.

ಪ್ರತಿ ವರ್ಷ ನವೆಂಬರ್ 14ರಿಂದ ಜನವರಿ 31ರ ವರೆಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಿ, ಮಕ್ಕಳ ಅಭಿಪ್ರಾಯಗಳನ್ನು ಆಲಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದಾಗ ದ್ವನಿ ಎತ್ತಬೇಕು. ಶಾಲೆಗಳು ಕೇವಲ ಶಿಕ್ಷಣ ನೀಡುವ ಸಂಸ್ಥೆಗಳಾಗದೆ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕೇಂದ್ರಗಳಾಗಬೇಕು ಎಂದು ಸಲಹೆ ಮಾಡಿದರು.

ಮೊಬಿಬಿಟಿ ಇಂಡಿಯಾ ಮುಖ್ಯಸ್ಥರಾದ ಅಲ್ವಿನಾ ಶಂಕರ್, ಸಂಪನ್ಮೂಲ ವ್ಯಕ್ತಿ ವಾಸುದೇವ ಶರ್ಮ, ಕಾರ್ಯಕ್ರಮ ಸಂಯೋಜನಾಧಿಕಾರಿ ಎಸ್.ಎಸ್.ಆನಂದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪವಿತ್ರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.