ತುಮಕೂರು ವಿ.ವಿಯಲ್ಲಿ ಗುರುವಾರ ಆಯೋಜಿಸಿದ್ದ ವಿ.ವಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ವಿಶ್ರಾಂತ ಕುಲಪತಿ ಪ್ರೊ.ಎಸ್.ಎ.ಬಾರಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ತುಮಕೂರು: ‘ದೇಶದಲ್ಲಿ 1,600 ವಿಶ್ವವಿದ್ಯಾಲಯಗಳಿವೆ. ಜಗತ್ತಿನ ಶ್ರೇಷ್ಠ 100 ವಿ.ವಿಗಳ ಪೈಕಿ ಭಾರತದ ಒಂದು ವಿಶ್ವವಿದ್ಯಾಲಯವೂ ಇಲ್ಲ’ ಎಂದು ವಿಶ್ರಾಂತ ಕುಲಪತಿ ಪ್ರೊ.ಎಸ್.ಎ.ಬಾರಿ ವಿಷಾದಿಸಿದರು.
ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿ.ವಿ 21ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಉನ್ನತ ಶಿಕ್ಷಣದಲ್ಲಿ ಭಾರತದ ವಿ.ವಿಗಳ ಪಾತ್ರ ಏನು ಎಂದು ನಾವೀಗ ಪ್ರಶ್ನಿಸಿಕೊಳ್ಳಬೇಕು. ಸಾಮಾನ್ಯರಂತೆ ಇರುವ ವಿದೇಶಿ ವಿ.ವಿ ಪ್ರಾಧ್ಯಾಪಕರು ನೊಬೆಲ್ ಪ್ರಶಸ್ತಿ ಪಡೆಯುತ್ತಾರೆ. ಏಕೆಂದರೆ ಅವರು ನೈಜ, ಹೊಸ ಸಂಶೋಧನೆ ಕೈಗೊಳ್ಳುತ್ತಾರೆ. ನಮ್ಮಲ್ಲಿ ಮಾಡಿದ ಸಂಶೋಧನೆಗಳದ್ದೇ ಪುನರಾವರ್ತನೆ ನಡೆಯುತ್ತದೆ. ಇದರಿಂದಾಗಿ ಭಾರತದ ಪ್ರಾಧ್ಯಾಪಕರಿಗೆ ನೊಬೆಲ್ ಪ್ರಶಸ್ತಿ ಬರುತ್ತಿಲ್ಲ ಎಂದರು.
ವಿ.ವಿ ಕೇವಲ ಜ್ಞಾನ ವರ್ಗಾಯಿಸುವ ಕೇಂದ್ರವಲ್ಲ. ಸುತ್ತಲಿನ ಸಮಾಜ ಹಾಗೂ ರಾಷ್ಟ್ರದ ಭಾವನೆ ಪ್ರತಿಬಿಂಬಿಸಬೇಕು. ಸಮಕಾಲೀನ ಜಗತ್ತಿನ ಅಗತ್ಯಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವರಾದ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಸಿಂಡಿಕೇಟ್ ಸದಸ್ಯೆ ಪ್ರಿಯದರ್ಶಿನಿ, ಹಣಕಾಸು ಅಧಿಕಾರಿ ನರಸಿಂಹಮೂರ್ತಿ, ಪ್ರಾಧ್ಯಾಪಕರಾದ ಎಲ್.ಪಿ.ರಾಜು, ಮನೋಹರ ಶಿಂದೆ, ಎ.ಎಂ.ಮಂಜುನಾಥ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.