ADVERTISEMENT

ಮತ ಗಳಿಕೆಗಾಗಿ ಕೋಮು ಗಲಭೆ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 5:42 IST
Last Updated 9 ಜನವರಿ 2018, 5:42 IST
ಪಾವಗಡದಲ್ಲಿ ಸೋಮವಾರ ನಡೆದ ಯುವ ಜೆಡಿಎಸ್ ಸಮಾವೇಶ, ಮನೆ ಮನೆಗೆ ಕುಮಾರಣ್ಣ
ಪಾವಗಡದಲ್ಲಿ ಸೋಮವಾರ ನಡೆದ ಯುವ ಜೆಡಿಎಸ್ ಸಮಾವೇಶ, ಮನೆ ಮನೆಗೆ ಕುಮಾರಣ್ಣ   

ಪಾವಗಡ: ಮತ ಗಳಿಕೆಗಾಗಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲಾಗುತ್ತಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದರು. ಸೋಮವಾರ ನಡೆದ ಯುವ ಜೆಡಿಎಸ್ ಸಮಾವೇಶ, ಮನೆ ಮನೆಗೆ ಕುಮಾರಣ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಮಂಗಳೂರಿನಲ್ಲಿ ಎರಡು ಕೊಲೆ ನಡೆದಿವೆ. ಕಾಂಗ್ರೆಸ್, ಬಿಜೆಪಿ ಪಕ್ಷದ ಪ್ರಮುಖರು ಸತ್ತವರನ್ನು ರಾಜಕೀಯ ದಾಳವಾಗಿ  ಉಪಯೋಗಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಶಾಂತಿ, ನೆಮ್ಮದಿ ಮೂಡಿಸುವ ಅಗತ್ಯವಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ಕಚೇರಿ ಕಳೆದುಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಹೀಗಾಗಿ ಪಕ್ಷ ಎಲ್ಲಿದೆ ಎಂದು ಮುಖ್ಯಮಂತ್ರಿ ಅಣಕವಾಡುತ್ತಿದ್ದಾರೆ. ಆದರೆ  ಸಿದ್ದರಾಮಯ್ಯ ಅವರನ್ನು ಶಕ್ತಿಯನ್ನಾಗಿ ಬೆಳೆಸಿದ ದೇವೇಗೌಡರನ್ನು ಅವರು ಮರೆತಿದ್ದಾರೆ. ಅಧಿಕಾರಕ್ಕಾಗಿ ಇನ್ನಿಲ್ಲದ ನಾಟಕ ಆಡುತ್ತಿದ್ದಾರೆ’ ಎಂದರು.

ADVERTISEMENT

‘ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ನೀರಾವರಿ ಯೋಜನೆ ಅಗತ್ಯವಿರುವ ರಾಜ್ಯಗಳಿಗೆ ಕೇಂದ್ರದಿಂದ ಅನುದಾನ ಮಂಜೂರು ಮಾಡಿದೆ. ಇದಕ್ಕೆ ವಿರೋಧ ವ್ಯಕ್ತವಾದರೂ ಲೆಕ್ಕಿಸಲಿಲ್ಲ. ರಾಜ್ಯದಲ್ಲಿ ಮೊದಲ ಬಾರಿಗೆ ಕಡಿಮೆ ದರದಲ್ಲಿ ಅಕ್ಕಿ ವಿತರಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯ, ದೇಶದ ಉದ್ಧಾರ ಸಾಧ್ಯ’ ಎಂದರು.

ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ‘ಎಚ್‌.ಡಿ.ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಅನಗತ್ಯ ಹೇಳಿಕೆ ಕೊಡುತ್ತಿದ್ದಾರೆ. ಅವರ ಹಾಗೆ ತಾವು ಕಳಪೆ ತಾಲ್ಲೂಕಿನಾದ್ಯಂತ ಕಳಪೆ ಕಾಮಗಾರಿ ಮಾಡಿಲ್ಲ. ತಾಲ್ಲೂಕಿಗೆ ಬಂದ ಅನುದಾನ ಲೂಟಿ ಮಾಡಿಲ್ಲ’ ಎಂದು ಪರೋಕ್ಷವಾಗಿ ಮಾಜಿ ಶಾಸಕ ವೆಂಕಟರವಣಪ್ಪ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಜೆಡಿಎಸ್ ಅಧಿಕಾರಕ್ಕೆ ಬಂದ ಕೂಡಲೇ ತಾಲ್ಲೂಕಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದು ದೇವೇಗೌಡರನ್ನು ಒತ್ತಾಯಿಸಿದರು. ಯುವ ರಾಜ್ಯ ಘಟಕದ ಅಧ್ಯಕ್ಷ ಮದುಬಂಗಾರಪ್ಪ ಮಾತನಾಡಿ, ’ರಾಜ್ಯದ ಜನರು ಪ್ರಾದೇಶಿಕ ಪಕ್ಷದ ಬಗ್ಗೆ ಒಲವು ತೋರದಿದ್ದಲ್ಲಿ, ರಾಷ್ಟ್ರೀಯ ಪಕ್ಷಗಳ ಜೀತದಾಳುಗಳಾಗಬೇಕಾಗುತ್ತದೆ. ಬಡವರು, ರೈತರ ಅಭಿವೃದ್ಧಿ ಪ್ರಾದೇಶಿಕ ಪಕ್ಷದಿಂದ ಸಾಧ್ಯ’ ಎಂದರು.

ವಿಧಾನ ಪರಿಷತ್ ಸದಸ್ಯರಾದ ಶರವಣ, ಬೆಮೆಲ್ ಕಾಂತರಾಜು, ರಾಜ್ಯ ಘಟಕದ ಉಪಾಧ್ಯಕ್ಷ ಬೆಳ್ಳಿ ಲೋಕೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಮಾಜಿ ಸಚಿವ ಸತ್ಯನಾರಾಯಣ, ಮುಖಂಡರಾದ ದುಶ್ಯಂತ್, ವದಿಗೆರೆ ರಮೇಶ್, ಆರ್.ಸಿ.ಅಂಜಿನಪ್ಪ ಮಾತನಾಡಿದರು.

ರಾಜ್ಯ ಘಟಕದ ಉಪಾಧ್ಯಕ್ಷ ತಿಮ್ಮಾರೆಡ್ಡಿ, ಪುರಸಭೆ ಅಧ್ಯಕ್ಷೆ ಸುಮಾ ಅನಿಲ್, ಪುರಸಭೆ ಸದಸ್ಯ ಮನು, ವಸಂತಕುಮಾರ್, ಗೋಪಾಲ್, ಯುವ ಘಟಕದ ಅಧ್ಯಕ್ಷ ಮಂಜುನಾಥ ಚೌಧರಿ, ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಮುಖಂಡ ಸಾರವಾಟಪುರ ಬಾಬು, ಎಸ್.ಕೆ.ರೆಡ್ಡಿ, ಚಂದ್ರಶೇಖರ್, ನಾಗಭೂಷಣ್, ಶಿವಪ್ಪ ನಾಯಕ ಇದ್ದರು.

* * 

ಬಿಜೆಪಿ, ಕಾಂಗ್ರೆಸ್ ಪಕ್ಷದವರು ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜ್ಯದಲ್ಲಿ ಗಲಭೆ ಸೃಷ್ಟಿಸುತ್ತಿ<br/>ದ್ದಾರೆ. ಹಿಂದೂ, ಮುಸ್ಲಿಮ್‌, ಕ್ರೈಸ್ತ ಧರ್ಮದವರು ಸಹೋದರರಂತೆ ಇರಬೇಕು.
ಎಚ್.ಡಿ.ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.