ADVERTISEMENT

ಪ್ರೀತಿಗಿಂತ ಶಾಂತಿ ಹೆಚ್ಚು ಅವಶ್ಯ

ರಾಮಕೃಷ್ಣ–ವಿವೇಕಾನಂದ ಆಶ್ರಮದಲ್ಲಿ ‘ರಜತ ನಿರ್ಮಾತ’ ಎಂಜಿನಿಯರ್‌ಗಳ ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 13:12 IST
Last Updated 11 ಫೆಬ್ರುವರಿ 2018, 13:12 IST
ಕಾರ್ಯಕ್ರಮದಲ್ಲಿ ಸೇರಿದ್ದ ಜನರು
ಕಾರ್ಯಕ್ರಮದಲ್ಲಿ ಸೇರಿದ್ದ ಜನರು   

ತುಮಕೂರು: ‘ನಮಗೆ ಸ್ವಾತಂತ್ರ್ಯ ದೊರೆತು 70 ವರ್ಷಗಳು ಕಳೆದಿವೆ. ಆದರೂ ಶಾಂತಿ ನೆಲಿಸಿಲ್ಲ. ಇಂದಿನ ಸನ್ನಿವೇಶದಲ್ಲಿ ದೇಶದಲ್ಲಿ ಶಾಂತಿ ಹೆಚ್ಚು ಹೆಚ್ಚು ನೆಲೆಸಬೇಕಾದ ಅವಶ್ಯಕತೆ ಇದೆ’ ಎಂದು ಹಿಮಾಚಲ ಪ್ರದೇಶದ ಬದ್ರಿಕಾಶ್ರಮದ ಓಂ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ರಾಮಕೃಷ್ಣ–ವಿವೇಕಾನಂದ ಆಶ್ರಮದ ಬೆಳ್ಳಿಹಬ್ಬದ ಪ್ರಯುಕ್ತ ಶನಿವಾರ ನಡೆದ ‘ರಜತ ನಿರ್ಮಾತ’ ಕಾರ್ಯನಿರತ ಎಂಜಿನಿಯರ್, ಡಿಪ್ಲೊಮಾ, ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ವ್ಯಕ್ತಿಯೊಬ್ಬ ತನ್ನ ಮದುವೆಯ ಹತ್ತನೇ ವಾರ್ಷಿಕೋತ್ಸವಕ್ಕೆ ಹೆಂಡತಿಗೆ ಬಿಳಿ ಬಣ್ಣದ ಗುಲಾಬಿ ನೀಡುವನು. ಆಗ ಆಕೆ ‘ಕೆಂಪು ಬಣ್ಣದ ಗುಲಾಬಿ ಕೊಡುವುದು ಬಿಟ್ಟು ಬಿಳಿ ಗುಲಾಬಿಯನ್ನು ಏಕೆ ನೀಡುತ್ತಿದ್ದೀರಿ?’ ಎಂದು ‍ಪ್ರಶ್ನಿಸುವಳು. ಅದಕ್ಕೆ ಪ್ರತಿಯಾಗಿ ಗಂಡ‌ ‘ಮದುವೆಯಾಗಿ ಹತ್ತು ವರ್ಷ ಕಳೆದಿದೆ. ನನಗೆ ಈಗ ಪ್ರೀತಿಗಿಂತ ಜಾಸ್ತಿ ಶಾಂತಿಯ ಅವಶ್ಯಕತೆ ಇದೆ. ಹೀಗಾಗಿ ಈ ಗುಲಾಬಿ ನೀಡಿದ್ದೇನೆ’ ಎನ್ನುತ್ತಾನೆ. ಈ ದಂಪತಿಯ ಕಥೆಯಂತೆಯೇ ದೇಶದ ಜನರ ಸ್ಥಿತಿ ಇದೆ. ಈಗ ಪ್ರತಿಯೊಬ್ಬರೂ ಶಾಂತಿ ಬಯಸುತ್ತಿದ್ದಾರೆ’ ಎಂದರು.

ADVERTISEMENT

‘‌ಅವಹೇಳನ ಮಾಡುವವರ ಬಗ್ಗೆ ನಿರ್ಲಕ್ಷ್ಯ ವಹಿಸುವ ಗುಣ ಬೆಳೆಸಿಕೊಳ್ಳಬೇಕು. ನಿಮ್ಮ ವೈಯಕ್ತಿಕ ಸಂತೋಷ ಮತ್ತೊಬ್ಬರಿಗೆ ನೀವು ನೀಡುವ ಸಂತೋಷದ ಮೇಲೆ ಅವಲಂಬಿತವಾಗಿದೆ. ಜ್ಞಾನ, ಸಮಯ, ಕೌಶಲ, ಕಲೆ, ವಿದ್ಯೆ ಯಾವುದನ್ನಾದರೂ ಕೂಡ ಮತ್ತೊಬ್ಬರಿಗೆ ಕೊಡುವುದರಿಂದ ನಿಮಗೆ ಅವುಗಳ ಕೊರತೆ ಉಂಟಾಗುವುದಿಲ್ಲ’ ಎಂದು ತಿಳಿಸಿದರು.

ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯದ ಮಾರ್ಗದರ್ಶಕ ಪ್ರೊ.ಎಸ್‌.ಸಿ.ಶರ್ಮಾ ಮಾತನಾಡಿ, ‘ಶಿಕ್ಷಣ ಕೌಶಲ ಆಧಾರಿತವಾಗಿರಬೇಕು. ವೃತ್ತಿ ಎಂಬುದು ಜೀವನಾಧಾರ ಪ್ರಕ್ರಿಯೆ. ಗುರಿಯ ನಿರ್ಧಾರದಲ್ಲಿ ಸಮಯ, ಮಾರ್ಗದರ್ಶನ, ಸಂತೋಷ, ಆಸಕ್ತಿಯೂ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಜ್ಞಾನಾಧಾರಿತ ಕೌಶಲಗಳ ಕಡೆಗೆ ಗಮನಹರಿಸಿದಾಗ ಯಶಸ್ಸು ಸಿಗುತ್ತದೆ’ ಎಂದರು.

ಹಿಮಾಚಲ ಪ್ರದೇಶದ ಬದ್ರಿಕಾಶ್ರಮದ ಅಧ್ಯಕ್ಷ ನರೇಂದ್ರ ಕುಮಾರ್, ಕರ್ನಾಟಕ ಎಂಜಿನಿಯರ್‌ ಒಕ್ಕೂಟದ ಅಧ್ಯಕ್ಷ ಎಂ.ನಾಗರಾಜ್, ನಿವೃತ್ತ ಎಂಜಿನಿಯರ್‌ ಎಂ.ಎಸ್‌.ಚಂದ್ರ
ಶೇಖರ್‌, ಟೆಕ್ನೊಕಾನ್‌ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ರಾಮಮೂರ್ತಿ, ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ಕರುಣಾಕರ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಕೆಮಿಕಲ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುಧೀರ್‌, ಎಚ್‌.ರಂಗನಾಥ್‌, ನಿಧಿ ಗ್ರೂಪ್ಸ್‌ನ ಎ.ಜಿ.ದಿನೇಶ್‌ ಹಾಗೂ ಮಾನಸಾ ಅವರನ್ನು ಸನ್ಮಾನಿಸಲಾಯಿತು.

ಹಿಮಾಚಲ ಪ್ರದೇಶದ ಬದ್ರಿಕಾಶ್ರಮದ ಸ್ವಾಮಿ ವಿದ್ಯಾನಂದ ಓಂ, ಸ್ವಾಮಿ ಪರಮಾನಂದ ಓಂ, ಸ್ವಾಮಿ ವಚನಾನಂದ, ಸ್ವಾಮಿ ಧೀರಾನಂದ ಮಹಾರಾಜ್‌, ಸ್ವಾಮಿ ಪ್ರಣವಾನಂದ ಇದ್ದರು.
***
ಸಮಾಜದ ಬೇಡಿಕೆಗಳಿಗೆ ಪ್ರಾಮುಖ್ಯ ನೀಡಿ

‘ಸಕಾರಾತ್ಮಕ ಧೋರಣೆ, ಆತ್ಮವಿಶ್ವಾಸ ಮತ್ತು ಮೌಲ್ಯಯುತ ಆಲೋಚನೆಗಳಿಂದ ಸಾಧನೆ ‌ಸಾಧ್ಯವಾಗುತ್ತದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹೊಸ ಸಂಶೋಧನೆ ಮತ್ತು ಸೂಕ್ಷ್ಮತೆಗಳ ಕಡೆಗೆ ಗಮನಹರಿಸಬೇಕು. ಸಮಾಜದ ಅವಶ್ಯಕತೆ ಹಾಗೂ ಬೇಡಿಕೆಗಳಿಗೆ ಪ್ರಾಮುಖ್ಯ ನೀಡಬೇಕು’ ಎಂದು ಹೋಟೆಲ್ ಉದ್ಯಮಿ ಸದಾನಂದ ಮಯ್ಯ ಹೇಳಿದರು.

ತಮ್ಮ ವೃತ್ತಿ ಕ್ಷೇತ್ರದಲ್ಲಿನ ಅನುಭವ, ಪರಿಣತಿ ಮತ್ತು ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು ಮಹಾನ್‌ ವ್ಯಕ್ತಿಯಾಗಬೇಕಾದರೆ ಸಾಮಾನ್ಯದಿಂದ ಅಸಮಾನ್ಯದ ಕಡೆಗೆ ಸಾಗಬೇಕು ಎಂದು ಸಲಹೆ ನೀಡಿದರು.
***
2‘ಜಿ’ ನೆಚ್ಚಿ ಹಿನ್ನಡೆ

‘ದೇಶದ ಜನರು ಎರಡು ‘ಜಿ’ಗಳನ್ನು ಹೆಚ್ಚಿ ನೆಚ್ಚಿಕೊಳ್ಳುವುದರಿಂದ ಸಾಧನೆಯಲ್ಲಿ ಹಿಂದೆ ಬೀಳುತ್ತಿದ್ದಾರೆ. ಆ ಎರಡು ‘ಜಿ’ಗಳೆಂದರೆ, ಒಂದು ‘ಗವರ್ನಮೆಂಟ್‌’, ಮತ್ತೊಂದು ‘ಗಾಡ್‌’ ಎಂದು ಓಂ ಸ್ವಾಮೀಜಿ ಹೇಳಿದರು.

‘ಸರ್ಕಾರವೇ ಎಲ್ಲವನ್ನೂ ಮಾಡಲಿ ಎಂದು ಅಪೇಕ್ಷಿಸುವುದರಿಂದ ಮತ್ತು ಎಲ್ಲವೂ ದೇವರ ಇಚ್ಛೆಯಂತಾಗುತ್ತದೆ ಎಂದು ತಿಳಿಯುವ ಮನೋಭಾವ ಇರುವವರೆಗೂ ಯಾವ ಬದಲಾವಣೆಯೂ ಸಾಧ್ಯವಿಲ್ಲ' ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.