ADVERTISEMENT

ನವೆಂಬರ್‌ನಲ್ಲಿ ದಾಖಲೆ 229 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 5:10 IST
Last Updated 3 ಡಿಸೆಂಬರ್ 2021, 5:10 IST

ತುಮಕೂರು: ಕಳೆದ ಎರಡು ದಶಕಗಳ ನಂತರ ನವೆಂಬರ್ ತಿಂಗಳಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ. ಸಾವು– ನೋವಿಗಿಂತ ಅಧಿಕವಾಗಿ ಬೆಳೆ ಹಾನಿ ಸಂಭವಿಸಿದೆ.

ನವೆಂಬರ್‌ನಲ್ಲಿ 44.7 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 229 ಮಿ.ಮೀ ಮಳೆಯಾಗಿದೆ. ಅಂದರೆ ಸುಮಾರು ಆರು ಪಟ್ಟು ಹೆಚ್ಚು ಮಳೆಯಾದಂತಾಗಿದ್ದು, ಬೆಳೆ ನೆಲಸಮವಾಗಿದೆ. ಕೆರೆ ಕುಂಟೆಗಳು ಬಹುತೇಕ ಭರ್ತಿಯಾಗಿದ್ದು, 20 ವರ್ಷಗಳ ನಂತರ ಜಯಮಂಗಲಿ ನದಿ ತುಂಬಿ ಹರಿದಿದೆ. ಚೆಕ್‌ ಡ್ಯಾಂಗಳಲ್ಲಿ ನೀರು ನಿಂತಿದ್ದು, ಅಂತರ್ಜಲದ ಮಟ್ಟ ಏರಿಕೆ ಕಂಡಿದೆ. ಮುಂದಿನ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ತಪ್ಪಲಿದೆ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್‌ನಲ್ಲಿ ಶೇಂಗಾ ಹಾಗೂ ನವೆಂಬರ್ ತಿಂಗಳು ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ರಾಗಿ ಕೊಯ್ಲು ಮಾಡಲಾಗುತ್ತದೆ. ಅದೇ ಸಮಯಕ್ಕೆ ಸುರಿದ ಭಾರಿ ಮಳೆ ಭಾರಿ ಅನಾಹುತಕ್ಕೆ ಕಾರಣವಾಗಿದೆ. 1.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. 1.53 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದ್ದು, ಅದರಲ್ಲಿ 1.17 ಲಕ್ಷ ಹೆಕ್ಟೇರ್ ಬೆಳೆ ಹಾಳಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿನ ಸಮೀಕ್ಷೆ ಪ್ರಕಾರ ರಾಗಿ ಬೆಳೆಯೊಂದೇ 1.25 ಹೆಕ್ಟೇರ್‌ಗಳಿಗೂ ಹೆಚ್ಚಿನ ಪ್ರದೇಶದಲ್ಲಿ ನಷ್ಟವಾಗಿದೆ. ಜೋಳ, ತೊಗರಿ, ಅವರೆ, ಹುರುಳಿ, ಅಲಸಂದೆ, ಶೇಂಗಾ ಸೇರಿದಂತೆ ಇತರ ಬೆಳೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ 1.30 ಲಕ್ಷ ಹೆಕ್ಟೇರ್‌ಗಳಿಗೂ ಹೆಚ್ಚಿನ ಪ್ರದೇಶದಲ್ಲಿ ನಷ್ಟವಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ರಾಗಿ ಬೆಳೆ ಸಂಪೂರ್ಣ ನೆಲಕಚ್ಚಿರುವುದರಿಂದ ಮುಂದಿನ ದಿನಗಳಲ್ಲಿ ರಾಗಿಗಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಬೆಲೆಯೂ ಏರಿಕೆಯಾಗಬಹುದು. ಬೆಳೆದು ಅನ್ನ ಕೊಡುತ್ತಿದ್ದವರ ಮನೆಗಳಲ್ಲೇನಾಲ್ಕು ಕಾಳು ರಾಗಿ ಇಲ್ಲದ ಸ್ಥಿತಿ ನೋಡಬೇಕಾಗುತ್ತದೆ ಎಂಬ ಆತಂಕ ಎದುರಾಗಿದೆ.

ಜನರಿಗೆ ಆಹಾರ ಕೊರತೆಯ ಜತೆಗೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಬಹುದು. ರಾಗಿ ಹುಲ್ಲು ನೆಲಕ್ಕೆ ಬಿದ್ದು ಮಣ್ಣು ಪಾಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಕೊಳೆತು ಹೋಗಿದೆ. ಕಪ್ಪಾದ, ರುಚಿ ಕಳೆದುಕೊಂಡ ರಾಗಿ ಹುಲ್ಲನ್ನು ಜಾನುವಾರುಗಳೂ ಸಹ ತಿನ್ನುವುದಿಲ್ಲ. ಮೇವಿನ ಸಮಸ್ಯೆ ರೈತರಿಗೆ ತೀವ್ರ ಸಂಕಷ್ಟ ತಂದೊಡ್ಡಬಹುದು. ಪಾವಗಡ ಭಾಗದಲ್ಲಿ ಶೇಂಗಾ ಬಳ್ಳಿಯೂ ಮಳೆಗೆ ನಾಶವಾಗಿದ್ದು, ಶೇಂಗಾ ಬೆಳೆಯುವ ತಾಲ್ಲೂಕುಗಳಲ್ಲೂ ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರವಾಗಲಿದೆ.

ಜನರಿಗೆ ಮಾತು ಬರುತ್ತದೆ, ಕಾಡಿ ಬೇಡಿಯಾದರೂ ಜೀವನ ಮಾಡುತ್ತಾರೆ. ಒಂದು ಹಂತಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ಮೂಕಪ್ರಾಣಿಗಳು ಏನು ಮಾಡುತ್ತವೆ. ಬೇಸಿಗೆ ವೇಳೆಗೆ ಮೇವಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬುದು ನಾಗೇನಹಳ್ಳಿ ರೈತ ನಂಜಪ್ಪ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.