ತೋವಿನಕೆರೆ: ಹೋಬಳಿ ಸುತ್ತಮುತ್ತಲಿನ ಜಮೀನುಗಳಲ್ಲಿ ಮೂವತ್ತು ವರ್ಷಗಳ ಹಿಂದೆ ಕೊರೆಸಿ ನೀರು ಇಲ್ಲವೆಂದು ಹಾಳು ಬಿಟ್ಟಿದ್ದ ಕೊಳವೆ ಬಾವಿಗಳಲ್ಲಿ ಈಗ ಸಮೃದ್ಧವಾಗಿ ನೀರು ಸಿಗುತ್ತಿದೆ.
ತೋವಿನಕೆರೆ ಪಂಚಾಯಿತಿ ವ್ಯಾಪ್ತಿಯ ಕುರಿಹಳ್ಳಿ ಸುರೇಶ್ 36 ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಸಿದ್ದರು. ಆಗ ಈ ನೀರಿನಲ್ಲಿ 20ರಿಂದ 30 ಎಕರೆಯಷ್ಟು ವ್ಯವಸಾಯ ಮಾಡುತ್ತಿದ್ದರು. ಕೆಲವು ವರ್ಷಗಳ ನಂತರ ನೀರು ಕಡಿಮೆಯಾಯಿತು. ಹೊಸ ಕೊಳವೆಬಾವಿಗಳನ್ನು ಕೊರೆಸಿದ್ದರು. ಅವುಗಳಲ್ಲೂ ನೀರು ಇಲ್ಲವಾಗಿತ್ತು.
ಹಿಂದೆ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ಮೇಲೆ ಇರುವುದನ್ನು ಗಮನಿಸಿ ಕ್ಯಾಮೆರಾ ಬಿಡಿಸಿ ನೋಡಿದಾಗ ಸಮೃದ್ಧ ನೀರಿನ ಸೆಲೆಗಳು ಕಾಣಿಸಿದ್ದವು. ಹಲವು ದಿನಗಳಿಂದ 150 ಅಡಿ ಆಳದಿಂದ ಸಮೃದ್ಧವಾಗಿ ನೀರು ಬರುತ್ತಿದೆ.
ತೋವಿನಕೆರೆ ಉಮೇಶ್ 2000ರಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಅಡಿಕೆ, ತರಕಾರಿ, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಬೆಳದಿದ್ದರು. ನಾಲ್ಕು ವರ್ಷ ಅಡಿಕೆ ಬೆಳೆ ಸಿಕ್ಕಿತ್ತು. ಕೊಳವೆ ಬಾವಿಯಲ್ಲಿ ನೀರು ಇಲ್ಲದಂತಾಗಿ ನೀರಾವರಿ ಕೃಷಿ ಬಿಟ್ಟಿದ್ದರು. ಈಗ ಅದೇ ಕೊಳವೆ ಬಾವಿಗೆ ಮೋಟರ್ ಪಂಪ್ ಬಿಟ್ಟಿದ್ದು, 300 ಅಡಿಯಿಂದ ಸಮೃದ್ಧ ನೀರು ಬರುತ್ತಿದೆ.
ನಂದಿಹಳ್ಳಿ ಶಂಕರಲಿಂಗಪ್ಪ ಅವರು ಕೊರೆಸಿದ್ದ ಕೊಳವೆ ಬಾವಿಯಲ್ಲಿ ನೀರು ಬತ್ತಿದ್ದು, ನಂತರ ಹತ್ತಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದ್ದರು. ಹಳೆಯ ಕೊಳವೆ ಬಾವಿಯಿಂದ 80 ಅಡಿಯಿಂದ ಸಮೃದ್ಧ ನೀರು ಬರುತ್ತಿದೆ.
ಹೀಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಂಟಕ್ಕೂ ಹೆಚ್ಚು ಸ್ಥಗಿತಗೊಂಡಿದ್ದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ.
ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನೀರು ಸಿಗದೆ ಪರದಾಡುತ್ತಿದ್ದ ರೈತರು ಹಳೆಯ ಕೊಳವೆ ಬಾವಿಗಳ ಕಡೆ ತಿರುಗಿ ನೋಡುತ್ತಿದ್ದಾರೆ. ಕ್ಯಾಮೆರಾ ಬಳಕೆ ಪ್ರಾರಂಭವಾದ ನಂತರ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ.
‘ರೈತರು ಹೊಸ ಕೊಳವೆ ಬಾವಿಗಳನ್ನು ಕೊರೆಸುವ ಮುನ್ನ ಹಿಂದೆ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟವನ್ನು ಪರಿಶೀಲಿಸಬೇಕು. ಕ್ಯಾಮೆರಾಗಳನ್ನು ಬಿಟ್ಟು ನೋಡಿದರೆ ನೀರಿನ ಸೆಲೆಗಳು ಕಾಣುತ್ತವೆ. ಅಂತಹ ಕೊಳವೆ ಬಾವಿಗಳಿಂದ ಸಮೃದ್ಧ ನೀರು ಪಡೆಯಬಹುದು. 2022ರಲ್ಲಿ ಉತ್ತಮ ಮಳೆಯಾಗಿದ್ದರಿಂದ ನೀರು ಚೆನ್ನಾಗಿ ಇಂಗಿದೆ. ಹಳೆಯ ಕೊಳವೆ ಬಾವಿಗಳ ಅಳ ಕಡಿಮೆಯಿದ್ದು, ಸಂಗ್ರಹವಾಗಿರುವ ನೀರು ಬರುತ್ತಿರಬಹುದು’ ಎಂದು ಭೂವಿಜ್ಞಾನಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.