ADVERTISEMENT

ಊರುಕೆರೆ ಬಳಿ ಹೆದ್ದಾರಿ 48ರಲ್ಲಿ ಸರಣಿ ಅಪಘಾತ: ನಿದ್ದೆಯಿಂದ ಎದ್ದವರು ಆಸ್ಪತ್ರೆಗೆ

20ಕ್ಕೂ ಹೆಚ್ಚು ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಮೇ 2019, 12:29 IST
Last Updated 14 ಮೇ 2019, 12:29 IST
ರಸ್ತೆ ಬದಿಯಲ್ಲಿ ಕುಳಿತ ಗಾಯಾಳುಗಳು
ರಸ್ತೆ ಬದಿಯಲ್ಲಿ ಕುಳಿತ ಗಾಯಾಳುಗಳು   

ತುಮಕೂರು: ನಗರದ ಹೊರವಲಯದ ಊರುಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಸರಣಿ ಅಪಘಾತ ನಡೆದಿದೆ. ಕಾರು, ಲಾರಿ ಮತ್ತು ಬಸ್‌ ನಡುವಿನ ಈ ಡಿಕ್ಕಿಯಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ನಿದ್ದೆಯಿಂದ ಎದ್ದವರು ಆಸ್ಪತ್ರೆ ಸೇರುವಂತಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ ಅಪಘಾತದ ತೀವ್ರತೆ ನೋಡಿದರೆ ಎದೆ ನಡುಗಿಸುತ್ತದೆ.

ಬೆಳಿಗ್ಗೆ 7.30ರಲ್ಲಿ ತುಮಕೂರಿನಿಂದ ಶಿರಾಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಊರುಕೆರೆ ಬಳಿ ಹಿಂದಿನಿಂದ ಬಂದು ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಒಬ್ಬ ಮಹಿಳೆಗೆ ತೀವ್ರವಾಗಿ ಪೆಟ್ಟಾಗಿದೆ.

ADVERTISEMENT

ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಮಧುಸೂದನ್ ಅವರು ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿದ್ದರು. ಅಷ್ಟರಲ್ಲಿ ಬೆಂಗಳೂರು ಕಡೆಯಿಂದ ಮತ್ತೊಂದು ಕಾರು ಬಂದಿದೆ. ಆ ಕಾರಿನ ಚಾಲಕ ಇಲ್ಲಿ ಅಪಘಾತ ನಡೆದಿರುವುದನ್ನು ಗಮನಿಸಿಲ್ಲ. ಅಪಘಾತ ನಡೆದ ಸ್ಥಳದ ಸಮೀಪ ಬಂದ ತಕ್ಷಣ ಕಾರನ್ನು ಬಲಭಾಗಕ್ಕೆ ಎಳೆದಿದ್ದಾರೆ. ಆಗ ಮೀನು ತುಂಬಿಕೊಂಡು ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾಗಿದೆ. ಲಾರಿಯಲ್ಲಿದ್ದ ಮೀನುಗಳು ರಸ್ತೆ ಪಾಲಾಗಿವೆ.

ಅದೇ ಸಮಯಕ್ಕೆ ಶಿರಾ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಮತ್ತೊಂದು ಲಾರಿಯ ಚಾಲಕ ರಸ್ತೆಯಲ್ಲಿ ಮೀನುಗಳು ಬಿದ್ದಿರುವುದನ್ನು ಕಂಡು ಲಾರಿಯನ್ನು ನಿಧಾನ ಮಾಡಿದ್ದಾರೆ. ಆ ಲಾರಿ ಹಿಂದೆ ಬೆಳಗಾವಿಯಿಂದ ಬೆಂಗಳೂರಿಗೆ ಸಾಗುತ್ತಿದ್ದ ಸೀಬರ್ಡ್ ಖಾಸಗಿ ಬಸ್ ಇತ್ತು. ನಿಧಾನವಾದ ಲಾರಿಗೆ ಬಸ್ ಅಪ್ಪಳಿಸಿದೆ. ಬಸ್‌ನಲ್ಲಿದ್ದ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಸೀಬರ್ಡ್ ಬಸ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ತೀವ್ರವಾಗಿ ಪೆಟ್ಟಾಗಿದೆ. ಪ್ರಯಾಣಿಕರಾದ ರಂಗನಾಥ್, ನಂದೀಶ್, ನಯಾಜ್, ಭರತ್, ಅವಿನಾಶ್, ಸುರೇಶ್, ಬಸವರಾಜು, ವರದಮಾನ್, ಹಾಲಪ್ಪ ಮಚ್ಚಂಡಿ, ರಾಜೇಂದ್ರ ಕಾಂಬಳೆ, ಶುಭ ಗಿಣಿ, ರಜೀಯಾನಿಜಾಂ, ಶಿರಿನ್, ಶ್ರೀದೇವಿ, ಭಾರ್ಗವಿ, ವಿದ್ಯಾ ದೇಶಪಾಂಡೆ, ಸತೀಶ್, ರಾಜಶ್ರೀ, ಸಂತೋಷ್, ಕಾಂಚನ್ ಮಿಶ್ರಾ, ಆರ್.ಎಚ್.ಕುಲಕರ್ಣಿ ಗಾಯಗೊಂಡವರು. ಇವರಲ್ಲಿ ಇಬ್ಬರಿಗೆ ಕಾಲು ಮುರಿದಿದೆ. ಗಾಯಾಳುಗಳು ಮಧುಗಿರಿ, ಕೋಲಾರ, ಬೆಂಗಳೂರು, ಬೆಳಗಾವಿ ಜಿಲ್ಲೆಗೆ ಸೇರಿದವರಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್‌ಪಿ ತಿಪ್ಪೇಸ್ವಾಮಿ ಅವರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಡಿವೈಎಸ್‌ಪಿ ತಿಪ್ಪೇಸ್ವಾಮಿ, ಸಿಪಿಐ ಮಧುಸೂದನ್, ಸಬ್‌ಇನ್‌ಸ್ಪೆಕ್ಟರ್ ಸುಂದರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.