ADVERTISEMENT

ಕೃಷಿಗೆ ಪೂರಕ ಕಾರ್ಖಾನೆ ಅಗತ್ಯ: ಸಚಿವ ಆರ್. ಅಶೋಕ್‌

ಮಿನಿ ವಿಧಾನಸೌಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸಚಿವ ಆರ್. ಅಶೋಕ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 3:12 IST
Last Updated 11 ಸೆಪ್ಟೆಂಬರ್ 2020, 3:12 IST
ಚಿಕ್ಕನಾಯಕನಹಳ್ಳಿ      ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಮಿನಿ ವಿಧಾನಸೌಧದ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಜೆ.ಸಿ.ಮಾಧುಸ್ವಾಮಿ, ಆನಂದ್ ಸಿಂಗ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಪೋಲಿಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ಇದ್ದರು.
ಚಿಕ್ಕನಾಯಕನಹಳ್ಳಿ      ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಮಿನಿ ವಿಧಾನಸೌಧದ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಜೆ.ಸಿ.ಮಾಧುಸ್ವಾಮಿ, ಆನಂದ್ ಸಿಂಗ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಪೋಲಿಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ಇದ್ದರು.   

ಚಿಕ್ಕನಾಯಕನಹಳ್ಳಿ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ಯುವ ಕೃಷಿಕರಿಗೆ ಅನುಕೂಲವಾಗುತ್ತದೆ. ವಿದ್ಯಾವಂತ ಯುವಕರು ಹಳ್ಳಿಗಳಿಗೆ ತೆರಳಿ ಕೃಷಿಯಲ್ಲಿ ನಿರತರಾದರೆ ಪ್ರೋತ್ಸಾಹ ನೀಡಲಾಗುವುದು. ಕೃಷಿಗೆ ಪೂರಕ ಕಾರ್ಖಾನೆಗಳು ಇದ್ದಾಗ ಬೆಳೆಗಳ ಮೌಲ್ಯವರ್ಧನೆಗೆ ಸಹಕಾರಿ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು.

ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು.

ಎಲ್ಲಿ ಮಾವು ಬೆಳೆಯುತ್ತಾರೊ ಅಲ್ಲಿ ಮಾವಿನ ರಸ ತೆಗೆಯುವ ಕಾರ್ಖಾನೆ, ಟೊಮೆಟೊ ಹೆಚ್ಚು ಬೆಳೆಯುವಲ್ಲಿ ಟೊಮೆಟೊ ಕೆಚಪ್ ತಯಾರಿಕಾ ಕಾರ್ಖಾನೆಗಳಿದ್ದರೆ ರೈತರಿಗೆ ಅನುಕೂಲವಾಗುತ್ತದೆ. ಕೃಷಿ ಮತ್ತು ಕಾರ್ಖಾನೆ ಎರಡೂ ಒಟ್ಟಿಗೆ ಅಭಿವೃದ್ಧಿಯಾಗುತ್ತದೆ ಎಂದರು.

ADVERTISEMENT

ಈ ಬಾರಿ ರಾಜ್ಯದೆಲ್ಲೆಡೆ ಉತ್ತಮ ಬಿತ್ತನೆಯಾಗಿದ್ದು, ಕೆಲವೆಡೆ ಶೇ 98ರಷ್ಟು, ಇನ್ನೂ ಕೆಲವೆಡೆ ಶೇ 100ರಷ್ಟು ಬಿತ್ತನೆಯಾಗಿದೆ ಎಂದರು.

ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಕೊಟ್ಟ ಅನುದಾನಕ್ಕಿಂತ ಎರಡು ಪಟ್ಟು ಹೆಚ್ಚು ಅನುದಾನವ‌ನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ ಎಂದರು.

ಮಿನಿ ವಿಧಾನಸೌಧ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದೇವೆ. ಅಂದಾಜು ₹ 14.5 ಕೋಟಿ ವೆಚ್ಚವಾಗಲಿದೆ. ಲೋಕೊಪಯೋಗಿ ಇಲಾಖೆ ಬೇಗ ಕಾಮಗಾರಿ ಆರಂಭಿಸಿ 18 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದರು.

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣವಾಗಿ 40 ವರ್ಷ ಕಳೆದಿದೆ. ಕಾರ್ಯಾರಂಭವಾಗಿ 30 ವರ್ಷವಾಗಿದೆ. ಕಟ್ಟಡ ಬಿರುಕು ಬಿಟ್ಟಿದ್ದು, ದುರಸ್ತಿಗೆ ₹ 30 ಲಕ್ಷ ಅನುದಾನ ಮಂಜೂರಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಚಂದನ್ ಕುಮಾರ್, ತಾ.ಪಂ. ಅಧ್ಯಕ್ಷೆ ಜಯಮ್ಮ, ಜಿ.ಪಂ. ಸದಸ್ಯೆ ಮಂಜುಳಮ್ಮ, ಸದಸ್ಯ ಸಿಂಗದಹಳ್ಳಿ ರಾಜ್ ಕುಮಾರ್, ಶೈಲಾ ಶಶಿಧರ್, ಕೇಶವಮೂರ್ತಿ, ಪುರಸಬೆ ಸದಸ್ಯರಾದ ಜಯಮ್ಮರಂಗಸ್ವಾಮಯ್ಯ, ಲಕ್ಷ್ಮೀಪಾಂಡುರಂಗಯ್ಯ, ಉಮಾ, ತಹಶೀಲ್ದಾರ್ ತೇಜಸ್ವಿನಿ, ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.