ADVERTISEMENT

ಮನೆ ಹಂಚಿಕೆಯಲ್ಲಿ ತಾರತಮ್ಯ ಶಾಸಕರ ವಿರುದ್ಧ ಆರೋಪ

ಶಾಸಕರ ವಿರುದ್ಧ ಗ್ರಾ.ಪಂ. ಅಧ್ಯಕ್ಷರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 5:44 IST
Last Updated 20 ಸೆಪ್ಟೆಂಬರ್ 2022, 5:44 IST
ಕುಣಿಗಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಬಿ.ಎನ್. ಜಗದೀಶ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೆಂಕಟೇಶ್, ಲಲಿತಮ್ಮ, ದೀಪೂ, ಅಲೀಮಾ ಗೌಸ್ ಹಾಜರಿದ್ದರು
ಕುಣಿಗಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಬಿ.ಎನ್. ಜಗದೀಶ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೆಂಕಟೇಶ್, ಲಲಿತಮ್ಮ, ದೀಪೂ, ಅಲೀಮಾ ಗೌಸ್ ಹಾಜರಿದ್ದರು   

ಕುಣಿಗಲ್: ತಾಲ್ಲೂಕಿನಲ್ಲಿ ವಸತಿ ಯೋಜನೆಯಡಿ ಸಾಮಾಜಿಕ ನ್ಯಾಯ ನೀಡುವಲ್ಲಿ ಶಾಸಕ ಡಾ.ರಂಗನಾಥ್ ವಿಫಲರಾಗಿದ್ದಾರೆ ಎಂದು ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ತಾಲ್ಲೂಕು ಜೆಡಿಎಸ್ ಅಧ್ಯಕ್ಷರು ಆರೋಪಿಸಿದ್ದಾರೆ.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಭಕ್ತರಹಳ್ಳಿ ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ಅಲೀಮಾಬೀ ಗೌಸ್, ಹೇರೂರು ಅಧ್ಯಕ್ಷೆ ಲಲಿತಮ್ಮ, ಕೆ. ಹೊನ್ನಮಾಚನಹಳ್ಳಿಯ ವೆಂಕಟೇಶ್, ಎಡೆಯೂರು ದೀಪೂ, ಸಂತೆಮಾವತ್ತೂರಿನ ದಾಸೇಗೌಡ ಮತ್ತು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್ ಮಾತನಾಡಿದರು.

ತಾಲ್ಲೂಕಿಗೆ ಬಸವ ವಸತಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಯಡಿ ಒಂದು ಸಾವಿರ ಮನೆ ಹಂಚಿಕೆ ಮಾಡಲಾಗಿದೆ. ಎಲ್ಲವೂ ಶಾಸಕರ ಕೋರಿಕೆ ಮೇರೆಗೆ ಅಧಿಕಾರಿಗಳು ಹಂಚಿಕೆ ಮಾಡಿದ್ದಾರೆ ಎಂದು ದೂರಿದರು.

ADVERTISEMENT

ಶಾಸಕರು ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಚಾಯಿತಿಗಳಿಗೆ ಹೆಚ್ಚಿನ ಮನೆಗಳನ್ನು ಮಂಜೂರು ಮಾಡಿಸಿದ್ದಾರೆ. ಉಳಿದಂತೆ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಪಂಚಾಯಿತಿಗಳಿಗೆ ನಿರೀಕ್ಷೆಗೂ ಮೀರಿ ಕಡಿಮೆ ಮನೆಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಟೀಕಿಸಿದರು.

ತಾಲ್ಲೂಕಿನಲ್ಲಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಜೆಪಿ ಮುಖಂಡರು ತಾಲ್ಲೂಕಿನ ಕೆಳವರ್ಗದ ಜನರಿಗೆ ಅನ್ಯಾಯವಾಗುತ್ತಿದ್ದರೂ ಸರ್ಕಾರದ ಗಮನ ಸೆಳೆದು ನ್ಯಾಯ ದೊರಕಿಸುವಲ್ಲಿ ವಿಫಲರಾಗಿದ್ದಾರೆ. ವೈಯಕ್ತಿಕ ಪ್ರತಿಷ್ಠೆ ಮತ್ತು ಪ್ರಚಾರಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದು ದೂರಿದರು.

ವಸತಿ ಯೋಜನೆಯಡಿ ಅನ್ಯಾಯವಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬುಧವಾರದೊಳಗೆ ಸರಿಪಡಿಸದಿದ್ದರೆ ಗುರುವಾರ ತಾಲ್ಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.