ತುಮಕೂರು: ನಗರದ ಅಮಾನಿಕೆರೆಯಲ್ಲಿ ಮತ್ತೆ ಬೋಟಿಂಗ್ ಪ್ರಾರಂಭಿಸುವ ಸಿದ್ಧತೆ ಅಂತಿಮಗೊಂಡಿದ್ದು, ಆ. 15ರಿಂದ ದೋಣಿ ವಿಹಾರಕ್ಕೆ ಚಾಲನೆ ಸಿಗಲಿದೆ.
2023ರ ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ಬೋಟಿಂಗ್‌ಗೆ ಚಾಲನೆ ನೀಡಲಾಗಿತ್ತು. ಇದಕ್ಕೆ ಜಿಲ್ಲೆಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಂದು ದಿನಕ್ಕೆ 500ರಿಂದ 600 ಜನ ದೋಣಿ ವಿಹಾರ ಮಾಡುತ್ತಿದ್ದರು. ಕೆರೆಯಲ್ಲಿ ಅಂತರಗಂಗೆ (ಕಳೆ ಗಿಡ) ಹೆಚ್ಚಾದ ಕಾರಣಕ್ಕೆ ಎರಡು ತಿಂಗಳಿಗೆ ಬೋಟ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬೋಟ್‌ಗಳು ನಿಂತಲ್ಲಿಯೇ ನಿಂತಿದ್ದವು.
ಅಂತರಗಂಗೆ ತೆರವಿಗೆ ನಗರಾಭಿವೃದ್ಧಿ ಪ್ರಾಧಿಕಾರ ಕ್ರಮ ವಹಿಸಿತ್ತು. ಕಳೆದ ಮಾರ್ಚ್‌ನಲ್ಲಿ ಒಂದು ತಿಂಗಳು ಕಾಲ ಹಿಟಾಚಿ ವಾಹನ ಬಳಸಿ ಅಂತರಗಂಗೆ ತೆರವು ಕಾರ್ಯಾಚರಣೆ ನಡೆಯಿತು. ಇದಕ್ಕಾಗಿ ₹4 ಲಕ್ಷದಿಂದ ₹5 ಲಕ್ಷ ವ್ಯಯಿಸಲಾಗಿತ್ತು. ಕೆರೆ ಸ್ವಚ್ಛಗೊಂಡ ನಂತರ ಬೋಟಿಂಗ್ ಶುರು ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾ ಬಂದಿದ್ದರು. ತೆರವು ಕಾರ್ಯಾಚರಣೆ ಪೂರ್ಣಗೊಳ್ಳುವ ವೇಳೆಗೆ ಟೆಂಡರ್ ಅವಧಿ ಮುಗಿದಿತ್ತು.
ಕೆರೆಯಲ್ಲಿ ಬೋಟಿಂಗ್ ನಡೆಸಲು ಮತ್ತೊಮ್ಮೆ ಟೆಂಡರ್ ಆಹ್ವಾನಿಸಲಾಗಿತ್ತು. ಇದೀಗ ಹೊಸದಾಗಿ ಖಾಸಗಿ ಸಂಸ್ಥೆಗೆ 5 ವರ್ಷಗಳ ಅವಧಿಗೆ ಟೆಂಡರ್ ನೀಡಲಾಗಿದೆ. ಸಂಸ್ಥೆಯಿಂದ ವರ್ಷಕ್ಕೆ ₹3 ಲಕ್ಷ ಶುಲ್ಕ ಪಡೆಯಲಾಗುತ್ತದೆ. ಪ್ರತಿ ವರ್ಷ ಶೇ 10ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಸದ್ಯ ಹೊಸದಾಗಿ 7 ಬೋಟ್‌ಗಳನ್ನು ಖರೀದಿಸಲಾಗಿದೆ. ಈಗಾಗಲೇ ಬೋಟ್‌ಗಳು ಕೆರೆಯ ಅಂಗಳಕ್ಕೆ ಬಂದಿವೆ. ಟೆಂಡರ್ ಪಡೆದ ಸಂಸ್ಥೆಯೇ ಬೋಟ್‌ಗಳ ಖರೀದಿಗೆ ಹಣ ಹೂಡಿಕೆ ಮಾಡಿದೆ. ದೋಣಿ ವಿಹಾರಕ್ಕೆ ಸಾರ್ವಜನಿಕರಿಂದ ಶುಲ್ಕ ಸಂಗ್ರಹಿಸಲಾಗುತ್ತದೆ. ಕಳೆದ ಬಾರಿ ಒಬ್ಬರಿಗೆ ₹150 ವಿಧಿಸಲಾಗಿತ್ತು. ಈಗ ಸಹ ಇಷ್ಟೇ ಹಣ ನಿಗದಿ ಪಡಿಸಲಾಗಿದೆ.
‘ಬೋಟಿಂಗ್ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟೆಂಡರ್ ಪಡೆದ ಸಂಸ್ಥೆಗೆ ನಿರ್ವಹಣೆ ಹೊಣೆ ನೀಡಲಾಗಿದೆ. ಮುಂದಿನ 5 ವರ್ಷಗಳ ಕಾಲ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ವರ್ಷಕ್ಕೆ ಇಂತಿಷ್ಟು ಎಂದು ಸಂಸ್ಥೆಯಿಂದ ಶುಲ್ಕ ಪಡೆಯಲಾಗುತ್ತದೆ. ಆ. 15ರಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರಿಂದ ದೋಣಿ ವಿಹಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್.ಆರ್.ಉಮೇಶ್‌ಚಂದ್ರ ಪ್ರತಿಕ್ರಿಯಿಸಿದರು.
ಮಳಿಗೆ ಹರಾಜು ಪೂರ್ಣ
‘ತುಮಕೂರು ಸಂತೆ’ ಹೆಸರಿನಲ್ಲಿ ಅಮಾನಿಕೆರೆ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು 16 ಮಳಿಗೆ ನಿರ್ಮಿಸಲಾಗಿದೆ. ಇದರಲ್ಲಿ 12 ಮಳಿಗೆ ಹರಾಜು ಪ್ರಕ್ರಿಯೆ ಮುಗಿದಿದ್ದು ಇದಕ್ಕೆ ಕೂಡ ಈ ಬಾರಿಯ ಸ್ವಾತಂತ್ರ್ಯೋತ್ಸವ ಸಮಯದಲ್ಲಿ ಚಾಲನೆ ಸಿಗಲಿದೆ. ಒಂದು ಮಳಿಗೆಗೆ ತಿಂಗಳಿಗೆ ₹6 ಸಾವಿರದಿಂದ ₹8 ಸಾವಿರದ ವರೆಗೆ ಶುಲ್ಕ ನಿಗದಿ ಪಡಿಸಲಾಗಿದೆ. 4 ಮಳಿಗೆಗಳನ್ನು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಮತ್ತು ಹಾಪ್‌ಕಾಮ್ಸ್‌ಗಾಗಿ ಮೀಸಲಿಡಲಾಗಿದೆ. ಒಂದು ಮಳಿಗೆ ನಿರ್ಮಾಣಕ್ಕೆ ₹1.50 ಲಕ್ಷದಿಂದ ₹2 ಲಕ್ಷ ವೆಚ್ಚ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡ ಎರಡು ವರ್ಷಗಳ ನಂತರ ಉದ್ಘಾಟನೆ ಭಾಗ್ಯ ಸಿಕ್ಕಿದೆ.
ಗಾಜಿನ ಸೇತುವೆಗೆ ಡಿಪಿಆರ್
ಅಮಾನಿಕೆರೆಯಲ್ಲಿ ‘ಗಾಜಿನ ಸೇತುವೆ’ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ‘ಸೇತುವೆಗೆ ₹25 ಕೋಟಿ ವೆಚ್ಚ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದ್ದರು. ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಸೇತುವೆ ನಿರ್ಮಾಣದ ನಂತರ ಕೆರೆಯಲ್ಲಿನ ‘ಐಲ್ಯಾಂಡ್’ಅನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಪೂರಕವಾದ ಯೋಜನೆ ರೂಪಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.