ತುಮಕೂರು: ನಗರದ ಕುಣಿಗಲ್ ರಸ್ತೆಯ ರೈಲ್ವೆ ಕೆಳ ಸೇತುವೆ ಮುಚ್ಚಿದ್ದು, ರಿಂಗ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ರಸ್ತೆಯಲ್ಲಿ ಸಂಚರಿಸಲು ಜನ ಪರದಾಡುತ್ತಿದ್ದು, ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ಮುಖಂಡ ಹೆತ್ತೇನಹಳ್ಳಿ ಮಂಜುನಾಥ್ ಒತ್ತಾಯಿಸಿದ್ದಾರೆ.
ವಾಹನಗಳು ಗುಬ್ಬಿ ಗೇಟ್ ಮೂಲಕ ರಿಂಗ್ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿದ್ದು, ವಾಹನ ದಟ್ಟಣೆ ಜಾಸ್ತಿಯಾಗಿದೆ. ಮಕ್ಕಳನ್ನು ಶಾಲೆಗೆ ಬಿಡಲು, ವಯೋವೃದ್ಧರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತೊಂದರೆಯಾಗುತ್ತಿದೆ. ಮಳೆಗಾಲದ ಸಮಯದಲ್ಲಿ ಜಿಲ್ಲಾ ಆಡಳಿತ ಮುಂದಾಲೋಚನೆ ಇಲ್ಲದೆ ಕಾಮಗಾರಿ ಆರಂಭಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಅಮಾನಿಕೆರೆ ಕೋಡಿ ಬಳಿ ಶಿರಾ ರಸ್ತೆ ಬಂದ್ ಮಾಡಿದ್ದರಿಂದ ಜನರು ಸಂಕಷ್ಟ ಅನುಭವಿಸಿದರು. ಇದರಿಂದ ಜಿಲ್ಲಾ ಆಡಳಿತ ಪಾಠ ಕಲಿತಂತೆ ಕಾಣುತ್ತಿಲ್ಲ. ಈಗ ಮತ್ತೆ ಕಾಮಗಾರಿ ಹೆಸರಿನಲ್ಲಿ ಜನರನ್ನು ಸಮಸ್ಯೆಗೆ ಸಿಲುಕಿಸಿದೆ. ಶಾಲಾ–ಕಾಲೇಜುಗಳಿಗೆ ರಜೆ ಇರುವ ಬೇಸಿಗೆ ಸಮಯದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಜಿಲ್ಲಾ ಆಡಳಿತ ಹೇಳಿದೆ. ಇದು ಸಾಧ್ಯವೇ ಎಂಬುವುದನ್ನು ಸ್ಪಷ್ಟಪಡಿಸಬೇಕು. ಕುಣಿಗಲ್, ಹೆಬ್ಬೂರು, ನಾಗವಲ್ಲಿ, ಗೂಳೂರು ಸೇರಿ ಇತರೆ ಕಡೆಗಳಿಗೆ ಹೋಗುವವರು ಪರದಾಡುತ್ತಿದ್ದಾರೆ. ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಏಕಾಏಕಿ ರಸ್ತೆ ಬಂದ್ ಮಾಡಲಾಗಿದೆ. ಕೂಡಲೇ ಸ್ಥಳೀಯರ ಸಭೆ ಕರೆದು ಚರ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.