ತುಮಕೂರು: ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ ದತ್ತಾಂಶ ಸಂಗ್ರಹಣೆ ವೇಳೆ ಛಲವಾದಿ, ಹೊಲೆಯ ಜಾತಿಗಳ ಜನರು ಉಪ ಜಾತಿ ಕಲಂನಲ್ಲಿ ಛಲವಾದಿ ಎಂದು ನಮೂದಿಸುವಂತೆ ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಪಿ.ಚಂದ್ರಪ್ಪ ಇಲ್ಲಿ ಶನಿವಾರ ಮನವಿ ಮಾಡಿದರು.
‘1881, 1891, 1901 ಹಾಗೂ 1911, 1921ರ ವರೆಗೆ ನಡೆದ ಜನಗಣತಿ ವೇಳೆ ಹೊಲೆಯ ಮತ್ತು ಮಾದಿಗ ಸಮುದಾಯದ ಜನ ಉಪ ಜಾತಿಗಳ ಕಲಂನಲ್ಲಿ ಹೊಲೆಯ, ಮಾದಿಗ ಎಂದೇ ನಮೂದಿಸಿದ್ದರು. ಆದರೆ, 1931ರ ಜನಗಣತಿ ಸಮಯದಲ್ಲಿ ಹೊಲೆಯ, ಮಾದಿಗ ಎಂಬುದು ಅಸಂವಿಧಾನಿಕ ಎಂದು, ಎ.ಕೆ, ಎ.ಡಿ, ಎ.ಎ ಎಂದು ನಮೂದಿಸಲಾಯಿತು. ಇದರಿಂದ ಸಾಕಷ್ಟು ಗೊಂದಲ ಉಂಟಾಗಿದೆ. ಈ ಸಮಸ್ಯೆ ನಿವಾರಣೆಗೆ ಸರ್ಕಾರ ಸುವರ್ಣ ಅವಕಾಶ ಕಲ್ಪಿಸಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಛಲವಾದಿ ಮಹಾಸಭಾದ ಅಧ್ಯಕ್ಷ ಸಿ.ಭಾನುಪ್ರಕಾಶ್, ‘ಜಿಲ್ಲೆಯ ಆದಿ ದ್ರಾವಿಡ ಸಮುದಾಯದ ಜನರು ಛಲವಾದಿ ಎಂದು ಬರೆಸಿದರೆ ನಿಖರ ಮಾಹಿತಿ ದೊರೆಯಲಿದೆ. ಗಣತಿದಾರರು ಮನೆಗೆ ಭೇಟಿ ನೀಡುವ ವೇಳೆ ಬಾಡಿಗೆ ಮನೆಯಲ್ಲಿರುವವರು ತಮ್ಮ ಜಾತಿ ಬರೆಸಲು ಹಿಂಜರಿಕೆಯಾದರೆ, ಎರಡನೇ ಹಂತದಲ್ಲಿ ಬೂತ್ ಮಟ್ಟದಲ್ಲಿ ನಡೆಯುವ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಮೂರನೇ ಹಂತದಲ್ಲಿ ಅನ್‍ಲೈನ್ ಮೂಲಕ ಸ್ವಯಂ ಘೋಷಿಸಿಕೊಳ್ಳಲು ಅವಕಾಶವಿದೆ’ ಎಂದು ತಿಳಿಸಿದರು.
ಛಲವಾದಿ ಮಹಾಸಭಾ ಮುಖಂಡರಾದ ರಂಗಪ್ಪ, ಶ್ರೀನಿವಾಸ್, ಅಪ್ಪಾಜಯ್ಯ, ಗಂಗಾಂಜನೇಯ, ಗಿರೀಶ್, ಹೆಗ್ಗೆರೆ ಕೃಷ್ಣಪ್ಪ, ಛಲವಾದಿ ಶೇಖರ್, ಶಿವಲಿಂಗಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.