ತುಮಕೂರು: ಸಮಾನತೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ನಾಗರಿಕ ಸಮಾಜ ತಿರಸ್ಕರಿಸಬೇಕು ಎಂದು ಪಿಯುಸಿಎಲ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ದೊರೆರಾಜ್ ಕರೆ ನೀಡಿದರು.
ನಗರದಲ್ಲಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ವಕ್ಫ್ ಕಾಯ್ದೆ ತಿದ್ದುಪಡಿ ಕುರಿತು ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರ ತನ್ನ ಮತ ಗಳಿಕೆಯ ರಾಜಕಾರಣಕ್ಕಾಗಿ ಸಂವಿಧಾನ ವಿರೋಧಿ, ವಿಭಜಕ ರಾಜಕಾರಣ ಮುಂದುವರಿಸಿದೆ. ಪ್ರಚೋದನೆ ನೀಡುವ, ರಾಜಕೀಯ ಲಾಭಕ್ಕೆ ಜನರನ್ನು ವಿಭಜಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಪ್ರಜಾಪ್ರಭುತ್ವ ನೆಲೆಯಲ್ಲಿ ಶಾಂತಿಯುತವಾಗಿ ಪ್ರತಿರೋಧ ವ್ಯಕ್ತಪಡಿಸಬೇಕು. ಜನರಿಗೆ ಇದರ ನಿಜವಾದ ಉದ್ದೇಶಗಳನ್ನು ಅರ್ಥೈಸುವುದೇ ಸರಿಯಾದ ಮಾರ್ಗ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಚಿಂತಕ ಸಿ.ಯತಿರಾಜು, ‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದೆ. ದ್ವೇಷ ರಾಜಕಾರಣ ಮುಂದುವರಿಸಿದೆ. ಜನರನ್ನು ವಿಭಜಿಸಿ ಆಧಿಕಾರ ಉಳಿಸಿಕೊಳ್ಳುವಂತಹ ನಡೆಗೆ ದೇಶದ ಜನತೆ ಏಕತೆಯ ಮೂಲಕ ಪ್ರತ್ಯುತ್ತರ ನೀಡಬೇಕು’ ಎಂದು ಸಲಹೆ ಮಾಡಿದರು.
ಮುಖಂಡ ನಿಕೇತ್ ರಾಜ್ ಮೌರ್ಯ, ‘ಜನತೆಯ ಏಕತೆ ವಿಭಜಿಸುವ ಪ್ರಯತ್ನ ನಿರಂತರವಾಗಿ ನಡೆದುಕೊಂಡು ಬಂದಿದೆ. ಮುಸ್ಲಿಂ ಸಮುದಾಯದ ವಿವೇಕ ಹಾಗೂ ಶಾಂತಿಯುತ ಪ್ರತಿರೋಧದ ಅಗತ್ಯವಿದೆ’ ಎಂದರು.
ಎಐಕೆಎಸ್ ಮುಖಂಡ ಕಂಬೇಗೌಡ, ‘ಒಂದೇ ಜನಾಂಗವನ್ನು ಗುರಿಯಾಗಿಸಿಕೊಂಡು ದ್ವೇಷ ಕಾರುವ ನಡೆಗಳನ್ನು ನಾಗರಿಕ ಸಮಾಜ ಒಪ್ಪುವಂತಹುದಲ್ಲ’ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ನಿರುದ್ಯೋಗ, ಬೆಲೆ ಏರಿಕೆ, ಹಸಿವು, ದುಬಾರಿ ಶಿಕ್ಷಣ– ಆರೋಗ್ಯ ಸೇವೆಯಿಂದ ಜನರು ಬಳಲುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಸಿಟ್ಟು, ಆಕ್ರೋಶ ಮೂಡದಂತೆ ಗಮನ ಬೇರೆಡೆ ಸೆಳೆಯಲಾಗುತ್ತಿದೆ’ ಎಂದು ತಿಳಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಶವಂತ್, ‘ವಕ್ಫ್ ಕಾಯ್ದೆ ತಿದ್ದುಪಡಿಯು ಮುಂದಿನ ದಿನಗಳಲ್ಲಿ ಎಲ್ಲ ಧಾರ್ಮಿಕ, ಪಾರಂಪರಿಕ ಆಸ್ತಿಗಳ ನಿರ್ವಹಣೆಯಲ್ಲಿ ಅನ್ಯರ ಮಧ್ಯ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಅಪಾಯವಿದೆ’ ಎಂದು ಎಚ್ಚರಿಸಿದರು.
ಸಮಾಜ ಸೇವಕ ತಾಜುದ್ದೀನ್ ಶರೀಫ್, ಕೊಳೆಗೇರಿ ನಿವಾಸಿಗಳ ಹಿತರಕ್ಷಣ ಸಮಿತಿ ಸಂಚಾಲಕಿ ಅನುಪಮಾ, ಮುಖಂಡರಾದ ನಯಾಜ್ ಅಹಮದ್, ಅಜ್ಜಪ್ಪ, ಮುಕ್ರಮ್ ಸೈಯಿದ್, ಮೌಲಾನ ಉಮರ್ ಅಸಾರಿ, ಬಿ.ಉಮೇಶ್, ಗಿರಿಶ್, ಎನ್.ಕೆ.ಸುಬ್ರಮಣ್ಯ, ಪಂಡಿತ್ ಜವಾರ್, ದಿಪೀಕಾ ಮರಳೂರು ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.