ADVERTISEMENT

10 ತಿಂಗಳಲ್ಲಿ ಬಾಲ ಕಾರ್ಮಿಕರ ಮುಕ್ತ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 3:10 IST
Last Updated 27 ಫೆಬ್ರುವರಿ 2021, 3:10 IST
ತುಮಕೂರಿನಲ್ಲಿ ‘ಕಾರ್ಮಿಕ ಸಮ್ಮಾನ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ತುಮಕೂರಿನಲ್ಲಿ ‘ಕಾರ್ಮಿಕ ಸಮ್ಮಾನ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ತುಮಕೂರು: ಮುಂಬರುವ ಹತ್ತು ತಿಂಗಳಲ್ಲಿ ಜಿಲ್ಲೆಯನ್ನು ‘ಬಾಲ ಕಾರ್ಮಿಕ ಮುಕ್ತ ಜಿಲ್ಲೆ’ಯನ್ನಾಗಿ ಘೋಷಣೆ ಮಾಡಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಅಂತೋಣಿ ಸೆಬಾಸ್ಟಿಯನ್ ಇಲ್ಲಿ ಶುಕ್ರವಾರ ಪ್ರಕಟಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಇತರ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ‘ಬಾಲ ಕಾರ್ಮಿಕ ಮುಕ್ತ ತುಮಕೂರಿನತ್ತ’ ಹಾಗೂ ‘ಕಾರ್ಮಿಕ ಸಮ್ಮಾನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಶಾಲಾ ವಾತಾವರಣದಿಂದ ದೂರವಿದ್ದರೆ ಮಕ್ಕಳಿಗೆ ಭವಿಷ್ಯವೇ ಇರುವುದಿಲ್ಲ. ಎಲ್ಲಾ ವರ್ಗದ ಮಕ್ಕಳು ಶಾಲೆಗೆ ಬಂದರೆ ಮಕ್ಕಳ ರಕ್ಷಣೆಯ ಅಗತ್ಯವೇ ಕಾಣುವುದಿಲ್ಲ. ಸಮಾಜಕ್ಕೆ ಕಳಂಕವಾಗಿರುವ ಬಾಲ ಕಾರ್ಮಿಕ ಪದ್ಧತಿ ದೂರ ಮಾಡಬೇಕು ಎಂದರು.

ADVERTISEMENT

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ‘1986ರಲ್ಲಿ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಯಾಗಿದ್ದರೂ ಇನ್ನೂ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಬಾಲ ಕಾರ್ಮಿಕರು ಹುಟ್ಟುವುದು ಬಡತನ, ಅನಕ್ಷರತೆಯಿಂದ. ಈ ಎರಡು ಕೊನೆಯಾದರೆ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಾಗುತ್ತದೆ’ ಎಂದು ತಿಳಿಸಿದರು.

ಪಿಯುಸಿಎಲ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ದೊರೈರಾಜ್, ‘ಅಕ್ಷರ ವಂಚಿತ ಜಾತಿಗಳಲ್ಲೇ ಹೆಚ್ಚು ಬಾಲ ಕಾರ್ಮಿಕರು ಇದ್ದಾರೆ. ನಗರೀಕರಣ, ಜಾಗತೀಕರಣದಿಂದ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ. ಜಾಗೃತಿ ಮೂಲಕ ನಿರ್ಮೂಲನೆ ಮಾಡಬೇಕು’ ಎಂದರು.

ಬಚಪನ್ ಬಚಾವೋ ಆಂದೋಲನದ ರಾಜ್ಯ ಸಂಯೋಜಕ ಬಿನು ವರ್ಗೀಸ್, ರಾಜ್ಯ ಮಕ್ಕಳ
ಹಕ್ಕಗಳ ರಕ್ಷಣಾ ಆಯೋಗದ ಸದಸ್ಯರಾದ ಪರುಶುರಾಂ, ಆಶೋಕ ಯರಗಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಮಧುಗಿರಿ ಡಿಡಿಪಿಐ ರೇವಣ್ಣ ಸಿದ್ದಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್, ಬಾಲ ಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕ ರವಿಕುಮಾರ್, ಚೇಲ್ಡ್ ಲೈನ್ ಕೋ ಆರ್ಡಿನೇಟರ್ ಅಭಿವೃದ್ಧಿ, ಸಾಮಾಜಿಕ ಸ್ವಯಂ ಸೇವಾ ಸಂಸ್ಥೆಯ ನರಸಿಂಹಮೂರ್ತಿ, ಶಿವರಾಜ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.