ADVERTISEMENT

ದೇವೇಗೌಡರಿಗೆ ಕ್ರೈಸ್ತರ ಬೆಂಬಲ

​ಪ್ರಜಾವಾಣಿ ವಾರ್ತೆ
Published 2 ಮೇ 2019, 11:06 IST
Last Updated 2 ಮೇ 2019, 11:06 IST
ಅಲೆಗ್ಸಾಂಡರ್‌
ಅಲೆಗ್ಸಾಂಡರ್‌   

ತುಮಕೂರು: ಜಿಲ್ಲೆಯ ಕ್ರೈಸ್ತ ಮತದಾರರು ತುಮಕೂರು ಲೋಕಸಭಾ ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡರನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಅಲೆಗ್ಸಾಂಡರ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಮೈತ್ರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವೇಗೌಡರಿಗೂ ನನಗೂ ಅವಿನಾಭಾವ ಸಂಬಂಧವಿದೆ’ ಎಂದರು.

ಅವರು ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿಯಾಗಿದ್ದಾಗ ಯಾವುದೇ ಆಶಾಭಾವನೆ ಇಲ್ಲದೆ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸಿರುವುದನ್ನು ಕಂಡಿದ್ದೇನೆ. ಇಂತಹ ಧೀಮಂತ ನಾಯಕನ್ನು ಜಿಲ್ಲೆಯ ಜನರು ಗೆಲ್ಲಿಸುವ ಅವಕಾಶ ದೊರೆತಿದೆ. ಈ ನಿಟ್ಟಿನಲ್ಲಿ ಅವರನ್ನು ಎಲ್ಲಾ ಧರ್ಮದವರು ಬೆಂಬಲಿಸಿ ಜಯಶೀಲರನ್ನಾಗಿಸಬೇಕು ಎಂದು ಕೋರಿದರು.

ADVERTISEMENT

ರಾಜ್ಯ ಅಲ್ಪ ಸಂಖ್ಯಾತರ ಕ್ರೈಸ್ತರ ಘಟಕದ ಅಧ್ಯಕ್ಷ ವಿಲ್ಸನ್ ಮಾತನಾಡಿ, ‘ಇಂದು ಬಿಜೆಪಿ ಕ್ರೈಸ್ತ ಮತ್ತು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿರುವುದು ಸಂವಿಧಾನ ವಿರೋಧಿಯಾಗಿದೆ. ಈ ನಿಟ್ಟಿನಲ್ಲಿ ಕ್ರೈಸ್ತ ಮತ್ತು ಅಲ್ಪಸಂಖ್ಯಾತರು ಒಂದಾಗಿ ಬಿಜೆಪಿಯನ್ನು ಸೋಲಿಸಬೇಕು’ ಎಂದು ಹೇಳಿದರು.

ಜಿಲ್ಲೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಕ್ರೈಸ್ತ ಮತದಾರರಿದ್ದಾರೆ. ಈ ನಿಟ್ಟಿನಲ್ಲಿ ದೇವೇಗೌಡರನ್ನು ಅತಿ ಹೆಚ್ಚು ಮತದಿಂದ ಗೆಲ್ಲಿಸಬೇಕು ಎಂದು ಹೇಳಿದರು.

ಜೆಡಿಎಸ್‌ ರಾಷ್ಟ್ರೀಯ ಉಪಾಧ್ಯಕ್ಷ ಪಿಜಿಆರ್ ಸಿಂಧ್ಯಾ ಮಾತನಾಡಿ, ‘ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿಯೂ ಸಹ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರ ಪರವಾಗಿ ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡುತ್ತಿದ್ದು ಎಲ್ಲರೂ ಗೆಲ್ಲುವ ವಿಶ್ವಾಸವಿದೆ’ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುದಾಸ್, ಮುಖಂಡ ತಿಪ್ಪೇಸ್ವಾಮಿ ಹಾಗೂ ಹನುಮಂತೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.